ಮಹಾ ಪುಂಡರಿಗೆ ಬುದ್ದಿ ಕಲಿಸಲು ಇಚ್ಚಾಶಕ್ತಿಯ ಕೊರತೆ ಸದ್ಯ ಎದುರಾಗಿದ್ದು ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಮರಾಠಿ ಮತಗಳನ್ನು ಸೆಳೆಯಲು ಮೌನವಾಗಿ ಉಳಿದರೆ ಇನ್ನೊಂದು ಕಡೆ ಅಭಿವೃದ್ಧಿ ದೃಷ್ಟಿಯಿಂದ ಅಥಣಿ ಮತ್ತು ಕಾಗವಾಡ ತಾಲೂಕಿನ ಹಳ್ಳಿಗಳು ವಂಚಿತವಾಗುತ್ತಿವೆ.ಬೆಳಗಾವಿ ಜಿಲ್ಲೆಯ ಖಾನಾಪೂರ,ನಿಪ್ಪಾಣಿ,ಬೆಳಗಾವಿ ಮಹರಾಷ್ಟ್ರಕ್ಕೆ ಸೇರಬೇಕು ಅನ್ನುವ ಮಹಾ ಪುಂಡರ ಕೂಗಿನ ಬೆಂಕಿಗೆ ತುಪ್ಪ ಸುರಿಯಲು ಮಹಾರಾಷ್ಟ್ರದ ರಾಜಕಾರಣಿಗಳು ಪರೋಕ್ಷವಾಗಿ ಮುಂದಾಗಿದ್ದು ಅಲ್ಲಿನ ಮುಖ್ಯ ಮಂತ್ರಿ ಏಕನಾಥ ಶಿಂಧೇ ಮಂತ್ರಿಮಂಡಲದ ಹಲವು ಸಚೀವರು ಉದ್ಧಟತನದ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ಇನ್ನೊಂದು ಕಡೆ ನವೆಂಬರ್ ಒಂದಕ್ಕೆ ಕರಾಳ ದಿನಾಚರಣೆ ಮತ್ತು ಅಧಿವೇಶನ ಸಮಯದಲ್ಲಿ ಮಹಾಮೇಳಾವ ನಡೆಸಲು ಮುಂದಾಗುವ ಮಹಾರಾಷ್ಟ್ರ ಏಕೀಕರಣ ಸಮೀತಿಯ ಜೊತೆಗೆ ಶಿವಸೇನೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಪರೋಕ್ಷ ಬೆಂಬಲ ನೀಡುತ್ತಿವೆ. ಇನ್ನು ಮರಾಠಿ ಭಾಷಿಕರು ಹೆಚ್ಚಾಗಿರುವ ಹಳ್ಳಿಗಳನ್ನು ಗಡಿಭಾಗದಲ್ಲಿ ಹೊಂದಿರುವ ಅಥಣಿ ಮತ್ತು ಕಾಗವಾಡ ತಾಲ್ಲೂಕಿನ ಬಹುತೇಕ ಜನರು ವ್ಯವಹಾರಿಕ ಸಂಭಂಧಗಳಷ್ಟೇ ಅಲ್ಲದೆ ವಧುವರರ ಕೊಡುಕೊಳ್ಳುವಿಕೆ ಇಂದ ತವರು ಮನೆ ಮತ್ತು ಗಂಡನ ಮನೆ ಎಂಬ ಭಾವನಾತ್ಮಕ ಸಾಂಸಾರಿಕ ಭಾಂಧವ್ಯಗಳನ್ನು ಹೊಂದಿದ್ದರೂ ಕೂಡ ಮನೆಗಳು ಮಹಾರಾಷ್ಟ್ರದಲ್ಲಿ ಇದ್ದರೂ ಮನಸ್ಸುಗಳು ಕರ್ನಾಟಕದ ಕಡೆಗೆ ಸೆಳೆತಕ್ಕೆ ಒಳಗಾಗುತ್ತಿವೆ.
ಇವೆಲ್ಲದರ ನಡುವೆ ಕಾಡುವ ಪ್ರಶ್ನೆ ಎಂದರೆ ಅಥಣಿ ಮತ್ತು ಕಾಗವಾಡ ತಾಲ್ಲೂಕು ಗಳು ಮುಧೋಳ,ಜಮಖಂಡಿ,ಬಾಗಲಕೋಟೆ, ಬೆಳಗಾವಿ ಅಂತಹ ಊರುಗಳ ಅಭಿವೃದ್ಧಿ ಗಮನಿಸಿದಾಗ ದಶಕಗಳಷ್ಟು ಹಿಂದೆ ಉಳಿದಿರುವದು ವಿಪರ್ಯಾಸವೇ ಸರಿ.
ಸ್ಥಳಿಯ ಶಾಸಕರು ಕೆಲವೆಡೆ ರಸ್ತೆ ಅಭಿವೃದ್ಧಿ ಮಾಡಿರುವದು ಒಂದಷ್ಟು ನೀರಾವರಿ ಯೋಜನೆ ತಂದಿರುವದು ಬಿಟ್ಟರೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಕಾಗವಾಡ ಮತ್ತು ಅಥಣಿ ತಾಲ್ಲೂಕು ಅಭಿವೃದ್ಧಿ ಆಗದೆ ಇರುವದರ ಹಿಂದೆ ಕಾಣದ ಕೈಗಳ ಕೈವಾಡ ಎದ್ದು ಕಾಣುತ್ತಿದೆ.
ಇದೆಲ್ಲದಕ್ಕೂ ಕಾರಣವೆಂದರೆ ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ವಿಭಜನೆ ಇಂದಿನ ತುರ್ತು ಅಗತ್ಯವಾಗಿದ್ದರೂ ಕೂಡ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಸ್ಥಾನಮಾನ ಕಾಯ್ದುಕೊಳ್ಳಲು ಮತ್ತು ಅಧಿಕಾರದಲ್ಲಿ ಮುಂದುವರೆಯಲು ಜನರ ಹಿತವನ್ನು ಕಾಪಾಡದೆ ಕಾಲ ಹರಣ ಮಾಡುತ್ತಿರುವದಕ್ಕೆ ಗಡಿಭಾಗದ ಕಚ್ಚಾಟ ಮಹಾ ಪುಂಡರಿಗೆ ಮತ್ತಷ್ಟು ಪುಷ್ಟಿ ಕೊಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ.ಒಂದು ಕಡೆ ಚಿಕ್ಕೋಡಿ ಇನ್ನೊಂದು ಕಡೆ ಗೋಕಾಕ ಮತ್ತೊಂದು ಹಾಗೂ ಅಥಣಿ ಇವುಗಳಲ್ಲಿ ಯಾವುದಾದರೂ ಒಂದು ತಾಲೂಕಿಗೆ ಜಿಲ್ಲಾ ಘೋಷಣೆ ಕೂಗು ಆಯಾ ತಾಲ್ಲೂಕಿನಲ್ಲಿ ಕೇಳಿಬರುತ್ತಿದೆ.
ಒಂದು ಕಡೆ ಅಥಣಿ ತಾಲೂಕಿನ ಕಟ್ಟ ಕಡೆಯ ಹಳ್ಳಿಯಾದ ಕೊಟ್ಟಲಗಿಯಿಂದ ಜನಸಾಮಾನ್ಯ ವ್ಯಕ್ತಿಯೊಬ್ಬ ಜಿಲ್ಲಾ ಕೇಂದ್ರ ಬೆಳಗಾವಿಗೆ ಹೋಗಲು ಕನಿಷ್ಠ ಆರು ಗಂಟೆಗಳ ಪ್ರಯಾಣದ ಅವಧಿ ತಗುಲುತ್ತದೆ ಅನ್ನುವದಾದರೆ ಅಲ್ಲಿನ ಕೆಲಸ ಮುಗಿಸಿಕೊಂಡು ಬರಲು ಇಡೀ ದಿನವೇ ವ್ಯಯವಾಗುತ್ತದೆ ಇಷ್ಟೆ ಅಲ್ಲದೆ ಮಹಾರಾಷ್ಟ್ರದ ಮೀರಜ್ ಮತ್ತು ಸಾಂಗಲಿ ಪಟ್ಟಣಗಳಲ್ಲಿ ಇರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಇಲ್ಲಿನ ಜನರು ಹೋಗಿ ಚಿಕಿತ್ಸೆ ಪಡೆಯುವ ಅನಿವಾರ್ಯ ಸ್ಥಿತಿ ಎದುರಾಗಲು ಗಡಿಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರದ ಇಚ್ಚಾಶಕ್ತಿಯ ಕೊರತೆಯೆ ಕಾರಣವಾಗಿದೆ.ಇಪ್ಪತ್ತು ವರ್ಷಗಳ ಹಿಂದೆಯೆ ಅಗತ್ಯ ಸೌಲಭ್ಯಗಳನ್ನು ಆಗಿನ ಶಾಸಕರು ಕಲ್ಪಿಸಿದ್ದರೆ ಬಹುಶ ಈ ಪರಿಸ್ಥಿತಿ ಇಂದು ಅಥಣಿ ಮತ್ತು ಕಾಗವಾಡ ತಾಲ್ಲೂಕಿನಲ್ಲಿ ಜನರಿಗೆ ಆಗುತ್ತಿರಲಿಲ್ಲ ಅನ್ನುವದರಲ್ಲಿ ಎರಡು ಮಾತಿಲ್ಲ.
ಈಗ ಮಹಾರಾಷ್ಟ್ರದ ಜತ್ತ,ಸಾಂಗಲಿ, ಪಂಡರಪೂರ,ಕೊಲ್ಹಾಪುರದ ವಿವಿಧ ಗ್ರಾಮಗಳ ಜನರು ಅಭಿವೃದ್ಧಿ ಮಾಡಿ ಇಲ್ಲವೆ ಕರ್ನಾಟಕಕ್ಕೆ ಸೇರಿಸಿ ಎನ್ನುವದು ಒಂದು ಕಡೆ ನಮಗೆ ಹೆಮ್ಮೆ ಮೂಡಿಸಿದರೂ ಕೂಡ ಇಂದಲ್ಲ ನಾಳೆ ಅಭಿವೃದ್ಧಿ ನೆಪ ಹೇಳಿ ಇಲ್ಲಿನ ಮರಾಠಿ ಭಾಷಿಕರು ಮಹಾರಾಷ್ಟ್ರ ಸೇರಿಸಿ ಎಂದು ಕೂಗುವ ಪರಿಸ್ಥಿತಿ ಎದುರಾಗದಿರಲ್ಲಿ ಅನ್ನುವ ಕಳಕಳಿ ನನ್ನದು.
ಅಥಣಿ ಮತ್ತು ಕಾಗವಾಡ ತಾಲೂಕಿನ ಜನರಿಗೆ ಸಕ್ಕರೆ ಮತ್ತು ಸ್ಪಿರಿಟ್ ಕಾರ್ಖಾನೆಗಳ ಹೊರತಾಗಿ ಯಾವ ದೊಡ್ಡ ಉದ್ದಿಮೆಗಳು ಇಲ್ಲದೆ ಉದ್ಯೋಗದ ಕೊರತೆ ಎದುರಾಗಿದೆ ಅಲ್ಲದೆ ಬೃಹತ್ ಉದ್ದಿಮೆಗಳ ಸ್ಥಾಪನೆಗೆ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿ ಉಭಯ ತಾಲೂಕಿನ ಜನರು ಉದ್ಯೋಗ ಅರಸಿ ಹುಬ್ಬಳ್ಳಿ ಧಾರವಾಡ ಬೆಂಗಳೂರು ಬೆಳಗಾವಿ ಅಲ್ಲದೆ ಸಮೀಪದ ಮಹಾರಷ್ಟ್ರದ ಸೊಲ್ಲಾಪೂರ,ಕೊಲ್ಹಾಪೂರ,ಮುಂಬೈ ,ಪೂನಾಗಳತ್ತ ಮುಖಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಕೇವಲ ನಿರುದ್ಯೋಗ ಒಂದೇ ಗಢಿಭಾಗದ ಜನರ ಸಮಸ್ಯೆ ಆಗಿರದೆ ಉನ್ನತ ಗುಣಮಟ್ಟದ ಶಾಲೆಗಳು, ಆಸ್ಪತ್ರೆಗಳು ಉತ್ತಮ ಗುಣಮಟ್ಟದ ರಸ್ತೆಗಳು ಹಾಗೂ ಸಾರಿಗೆ ಸಂಚಾರವಿಲ್ಲದೆ ಗಡಿಭಾಗದ ತಾಲ್ಲೂಕುಗಳ ಜನರು ಹತಾಶೆಯಲ್ಲೆ ಬದುಕುವಂತಾಗಿದೆ.
ಶೇಡಬಾಳ ವಿಜಯಪುರ ಮತ್ತು ಬಾಗಲಕೋಟ ಸಂಪರ್ಕಿಸುವ ರೈಲು ಮಾರ್ಗದ ಬೇಡಿಕೆ ಒಂದು ಕಡೆ ಇರುವಾಗಲೇ ಇಲ್ಲಿನ ಜನಪ್ರತಿನಿಧಿಗಳು ವಿಮಾನ ನಿಲ್ದಾಣ ಸ್ಥಾಪನೆಯ ಹಗಲು ಕನಸು ತೋರಿಸಿದ್ದರೂ ಕೂಡ ನನಸಾಗದೆ ಅಥಣಿ ತಾಲೂಕಿನ ಕೆರೆ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳ ಅನುದಾನ ಮರಳಿ ಹೋಗಿದ್ದು ನೋಡಿದರೆ ಅಥಣಿ ಜಿಲ್ಲೆಯಾಗುವವರೆಗೂ ಅಭಿವೃದ್ಧಿ ಆಗುವದಿಲ್ಲ ಮತ್ತು ವಿವಿಧ ಇಲಾಖೆಯ ಆಡಳಿತ ಉಪವಿಭಾಗಮಟ್ಟದ ಕಚೇರಿಗಳು ಸ್ಥಾಪನೆ ಆಗದೆ ಹಾಗೂ ಅಭಿವೃದ್ಧಿ ಆಗದ ಹೊರತು ಅಥಣಿ ಜಿಲ್ಲೆ ಆಗುವದಿಲ್ಲ ಎನ್ನುವಂತಾಗಿದೆ.
ಇನ್ನೊಂದು ಕಡೆ ಚಿಕ್ಕೋಡಿ ಮತ್ತು ಗೋಕಾಕ ತಾಲೂಕಿನ ಜನರು ಅಥಣಿ ಜಿಲ್ಲೆಗೆ ಧ್ವನಿ ಕೂಡಿಸಿದಾಗ ಮಾತ್ರ ಗಡಿಭಾಗದ ಜನರ ಸಂಕಷ್ಟಗಳು ನೀಗುವದರ ಜೊತೆಗೆ ಮಹಾ ಪುಂಡರಿಗೆ ತಕ್ಕ ಪ್ರತ್ಯುತ್ತರ ಕೊಡುವ ಪೂರಕ ವಾತಾವರಣ ನಿರ್ಮಾಣ ಮಾಡಬೇಕಾಗಿದೆ.ಆದರೆ ಆಡಳಿತಾತ್ಮಕ ಅನುಮೋದನೆಗೆ ರಾಜ್ಯ ಸರ್ಕಾರವನ್ನು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ತಮ್ಮ ರಾಜಕಾರಣ ಮತ್ತು ವೈಯಕ್ತಿಕ ಲಾಭಗಳನ್ನು ಮರೆತು ಜನರ ಹಿತಕ್ಕಾಗಿ ಒಕ್ಕೊರಲ ಧ್ವನಿ ಎತ್ತಬೇಕಾಗಿದೆ.
ಕೂಲಿಕಾರ್ಮಿಕರು,ಮಧ್ಯಮವರ್ಗದ ಜನರಿಗೆ ಜಿಲ್ಲಾ ಕೇಂದ್ರ ದೂರದ ಮಾತಾಗಿದ್ದು ದೀನ ದಲಿತರ ಮತ್ತು ದಮನಿತರ ಅಭಿವೃದ್ದಿ ಅನ್ನುವದು ಮರೀಚಿಕೆಯಾಗಿಯೇಉಳಿಯಲು ಕಾರಣ ಜಿಲ್ಲಾಮಟ್ಟದ ಕಚೇರಿಗಳು ಅಥಣಿಯಲ್ಲಿ ಸ್ಥಾಪನೆ ಆಗುವದಕ್ಕೆ ಇನ್ನೆಷ್ಟು ಚುನಾವಣೆಗಳು ಮುಗಿಯುವ ತನಕ ಕಾಯಬೇಕು ಅನ್ನುವದು ಗಡಿಭಾಗದ ಜನರ ಪ್ರಶ್ನೆಯಾಗಿದೆ.

9483766018