ಬೆಳಗಾವಿ, ಎಪ್ರಿಲ್ 13 ಲಿಂಗಾಯತ ಮಹಿಳಾ ಸಮಾಜ ವತಿಯಿಂದ ವೀರವಿರಾಗಿಣಿ, ಶಿವಶರಣೆ
ಅಕ್ಕಮಹಾದೇವಿಯವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಲಿಂಗಾಯತ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯ
ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅವರು ಮಾತನಾಡಿ, ಅಕ್ಕಮಹಾದೇವಿ
ಅವರು ತ್ಯಾಗಿಯಾಗಿ, ವಿರಾಗಿಯಾಗಿ, ಭೋಗವನ್ನು ತೊರೆದು ಬಹು ದೂರ ಹೋದವಳು, ಇಂದು
ನಮ್ಮ ಮನಸಿನಂಗಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ನಾವೆಲ್ಲಾ ಬಸವಣ್ಣನವರು, ಅಕ್ಕಮಹಾದೇವಿ,
ಅಲ್ಲಮಪ್ರಭು, ಸಿದ್ಧರಾಮೇಶ್ವರ, ಚನ್ನಬಸವಣ್ಣನವರ ಅನುಯಾಯಿಗಳು. ಅಹಿಂಸೆ, ಧರ್ಮ,
ತ್ಯಾಗ, ಕಾಯಕ, ದಾಸೋಹ ತತ್ವಗಳ ಪ್ರತಿನಿಧಿಯಾಗಿ ಇಂದು ನಾವೆಲ್ಲಾ ಬದುಕುತ್ತಿದ್ದೇವೆ
ಎಂದರು.
ಹೆಣ್ಣು ಮಕ್ಕಳಿಗೆ ಯಾವುದೇ ಸ್ವಾತಂತ್ರ್ಯ ಇಲ್ಲದ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ
ಕೊಟ್ಟವರು ಬಸವಾದಿ ಶಿವಶರಣರು. ಹೆಣ್ಣು ದೇವರಿಗೆ ಸಮಾನವೆಂದು ಇಷ್ಠಲಿಂಗದ ಮೂಲಕ ಹೆಣ್ಣು
ಮಕ್ಕಳಿಗೂ ಪೂಜಿಸುವ, ದೇವರನ್ನು ಮುಟ್ಟುವ ಅಧಿಕಾರ ಕೊಟ್ಟಿದ್ದು ಬಸವಣ್ಣನವರು ಧ್ವನಿ
ಎಂದು ಸ್ಮರಿಸಿಕೊಂಡರು.
ಬಳಿಕ ಅಕ್ಕಮಹಾದೇವಿಯವರ ವಚನಗಳನ್ನು ಲಿಂಗಾಯತ ಮಹಿಳೆಯರು ಪ್ರಸ್ತುತ
ಪಡಿಸಿದರು.
ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕಿ ಶೈಲಜಾ ಭಿಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ನೀಲಗಂಗಾ ಚರಂತಿಮಠ ಮತ್ತು ಕದಳಿ ಮಹಿಳಾ ವೇದಿಕೆ ಗೌರವ ಅಧ್ಯಕ್ಷೆ
ರಾಜೇಶ್ವರಿ ಕವಟಗಿಮಠ ಅವರನ್ನು ಸತ್ಕರಿಸಲಾಯಿತು. ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ
ವೀಣಾ ಚಿನ್ನಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾ ಕಳ್ಳಿಮಠ ನಿರೂಪಿಸಿದರು. ರಕ್ಷ ದೇಗಿನಾಳ ವಂದಿಸಿದರು. ಲಿಂಗಾಯತ ಮಹಿಳಾ
ಸಮಾಜದ ಸದಸ್ಯೆಯರು ಮತ್ತಿತರರು ಉಪಸ್ಥಿತರಿದ್ದರು.