ಬೆಳಗಾವಿ
ಅಥಣಿ : ದೇಶವನ್ನು ಸ್ವಚ್ಛವಾಗಿಡಿ ಅಂತ ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವಚ್ಛ ಭಾರತ’ ಪರಿಕಲ್ಪನೆ ಹುಟ್ಟುಹಾಕಿದರು. ಆದರೆ ಅಥಣಿಯಲ್ಲಿ ಪುರಸಭೆ ವತಿಯಿಂದ ಸ್ವಚ್ಛ ಭಾರತ ಯೋಜನೆಗೆ ಕಪ್ಪು ಚುಕ್ಕೆ ಇಡುವಂತ ವರದಿಯಾಗಿದೆ.
14 ಲಕ್ಷ ರೂ ಸಾರ್ವಜನಿಕ ತೆರಿಗೆ ಹಣ ಪೋಲು ಮಾಡಿದ ಪುರಸಭೆ..
ಉಪಯುಕ್ತವಾಗದೇ ತ್ಯಾಜ್ಯದಿಂದ ಆವೃತವಾದ ಹೈಟೆಕ್ ಶೌಚಾಲಯ..
ಕೇವಲ ಬಿಲ್ಲು ತೆಗೆಯಲು ಈ ರೀತಿ ಕಟ್ಟಡ ಕಟ್ಟಿದ್ರಾ ಎಂಬ ಅನುಮಾನ !..
ಅಥಣಿ ಪಟ್ಟಣದ ಶಿವಯೋಗಿ ವೃತ್ತ ಹಾಗೂ ಸಾರ್ವಜನಿಕ ಕೆರೆಯ ಮಧ್ಯದಲ್ಲಿ ಸನ್ 2018 ರಲ್ಲಿ ಸುಮಾರು 14 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ ಶುಚಿತ್ವ ಕಾಪಾಡುವ ಹಿನ್ನಲೆಯಲ್ಲಿ ಸ್ಥಾಪನೆಗೊಂಡ ಹೈಟೆಕ್ ಶೌಚಾಲಯವೇ ಇದೀಗ ನಿರುಪಯುಕ್ತವಾಗಿ ಕಸದಿಂದ ಆವೃತವಾಗಿ ದುರ್ನಾತ ಬೀರುತ್ತಿದೆ. ಶೌಚಾಲಯದ ಪಕ್ಕದಲ್ಲಿ ಹಾದು ಹೋಗಬೇಕಾದರೂ ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ, ಸೂಕ್ತ ನಿರ್ವಹಣೆ ಇಲ್ಲದೇ ಇದೀಗ ಈ ಶೌಚಾಲವನ್ನು ಪಾಳು ಕೆಡವಲಾಗಿದ್ದು, ಹಂದಿಗಳ ವಾಸಸ್ಥಾನವಾಗಿ ಬಿಟ್ಟಿದೆ, ಕಟ್ಟಿದ ಗೋಡೆಯು ಒಡೆದು ಬೀಳುವ ಹಂತಕ್ಕೆ ತಲುಪಿದೆ, ಕಟ್ಟಡ ಕಟ್ಟಿದ ದಿನದಿಂದ ಇಲ್ಲಿಯವರೆಗೂ ಅದನ್ನು ಯಾರೂ ಬಳಕೆ ಮಾಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸಾರ್ವಜನಿಕರ ತೆರಿಗೆಯ ಸುಮಾರು 14 ಲಕ್ಷ ರೂ ಅನುದಾನವನ್ನು ಈ ರೀತಿಯಾಗಿ ಉಪಯೋಗಕ್ಕೆ ಬಾರದ ಜಾಗದಲ್ಲಿ ಅನವಶ್ಯಕವಾಗಿ ಕಟ್ಟಡ ಕಟ್ಟಿ ಅದನ್ನು ಉಪಯೋಗಿಸದೇ ನಿರುಪಯುಕ್ತವಾಗಿಸಿದ್ದಾದರೂ ಏಕೆ ?. ಪುರಸಭೆಯ ಆಸ್ತಿಯಾದ ಇದನ್ನು ಸಮರ್ಪಕ ನಿರ್ವಹಣೆ ಯಾಕೆ ಮಾಡುತ್ತಿಲ್ಲ, ಅಧಿಕಾರಿಗಳೇನು ನಿದ್ರೆಯಲ್ಲಿದ್ದಾರೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸೂಕ್ತ ನಿರ್ವಹಣೆ ಮಾಡಿ ಸಾರ್ವಜನಿಕರ ತೆರಿಗೆ ಹಣಕ್ಕೆ ನ್ಯಾಯ ಒದಗಿಸಬೇಕೆಂದು ಅಥಣಿಯ ಆಮ್ ಆದ್ಮಿ ಪಕ್ಷದ
ಮುಖಂಡರು ಆಗ್ರಹಿಸಿದ್ದಾರೆ
ವರದಿ: ರವಿ ಬಿ ಕಾಂಬಳೆ