ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆಯಲ್ಲಿ ನಡೆದ ಒಂದು ಘಟನೆ!ಸಂತರ ಆದರರ್ಶಗಳು ನಮ್ಮ ಬದುಕಿನ ದಿಕ್ಸೂಚಿ ಆಗಲಿ

Share the Post Now

*ಆತ್ಮೀಯರೇ ನಮಸ್ಕಾರ…*

ನಿನ್ನೆಯಷ್ಟೇ ವಿಜಯಪುರ ಸೈನಿಕ ಶಾಲೆಯ ಆವರಣದಲ್ಲಿ ನಡೆದ ಕೆಲವು ಘಟನೆಗಳು ನನ್ನ ಮನಸ್ಸು ಕಲಕುತ್ತಿವೆ.ಜಾತಿ,ಮತ,ಧರ್ಮ, ಪಂಥ ಮರೆತುಬಂದ ಜನರು ಸಿದ್ದೇಶ್ವರ ಶ್ರೀಗಳ ದೈವತ್ವಕ್ಕೆ ನೀಡಿದ ಮಣ್ಣನೆಯನ್ನು ಕೆಲವು ಮಾಧ್ಯಮಗಳು ನಾಡಿಗೆ ತೋರಿಸಿದರೆ ಇನ್ನು ಕೆಲವು ಮಾಧ್ಯಮಗಳು ಅಲ್ಲಿ ನೆರೆದವರ ಧರ್ಮವನ್ನು ಪ್ರಶ್ನಿಸುವ ಮೂಲಕ ಭಾವಪರವಶರಾಗಿ ಹರಿದು ಬಂದ ಜನಸಾಗರವನ್ನ ಅವರ ಧರ್ಮದ ಆಧಾರದಲ್ಲಿ ವಿಂಗಡಿಸುವ ಕೆಲಸ ಮಾಡುತ್ತಿದ್ದವು.
ಯಾರೋ ಒಬ್ಬ ಹಿರಿಯ ಮುಸಲ್ಮಾನ ವ್ಯಕ್ತಿಯನ್ನ ನಿಮ್ಮ ಧರ್ಮ ಬೇರೆ ಅಲ್ಲವೆ ಅನ್ನುವದು,ಅವರ ಮಠಕ್ಕೆ ಹೋಗಿದ್ರಾ ಅಂತ ಕೇಳುವದು ನೋಡಿದರೆ ಈಗಲೂ ರಕ್ತ ಕುದಿಯುತ್ತಿದೆ.ಪ್ರಶ್ನೆ ಮಾಡಿದವರ ಉದ್ದೇಶ ಒಳ್ಳೆಯದೋ ಕೆಟ್ಟದ್ದೋ ಅನ್ನುವ ಮಾತು ಸ್ವಲ್ಪ ಪಕ್ಕಕ್ಕೆ ಇಟ್ಟು ಯೋಚಿಸುವದಾದರೆ
ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಹಿರಿಯ ಪ್ರವಚನಕಾರ ಇಬ್ರಾಹಿಂ ಸುತಾರ ಅವರನ್ನ ಹಿಂದೂಗಳು ಒಪ್ಪಿಕೊಂಡದ್ದು ಅವರ ಜಾತಿ ಅಥವಾ ಧರ್ಮ ನೋಡಿ ಅಲ್ಲ ಅವರಲ್ಲಿ ಮಿಳಿತವಾಗಿದ್ದ ವಿವಿಧ ಧರ್ಮಗಳ ಕುರಿತಾದ ಜ್ಞಾನ ಮತ್ತು ಕನ್ನಡ ಭಾಷೆಯ ಮೇಲಿನ ಹಿಡಿತ ಹಾಗೂ ಜನಸಾಮಾನ್ಯರಿಗೆ ಧಾರ್ಮಿಕ ಭೋದನೆಯನ್ನು ಜಾತ್ಯಾತೀತವಾಗಿ ಹಂಚುವದನ್ನು ನೋಡಿ ಹಾಗೆಯೇ ಸಿದ್ದೇಶ್ವರ ಸ್ವಾಮೀಜಿಯನ್ನು ಮುಸ್ಲಿಂ ಜನಾಂಗವಾಗಲಿ ಅಥವಾ ಅಲ್ಲಿ ನೆರೆದಿದ್ದ ಕ್ರಿಶ್ಚಿಯನ್ ಮಿಷನರಿಗಳಾಗಲಿ ಉಳಿದ ಧರ್ಮಗುರುಗಳು ಮತ್ತು ಅಂತ್ಯಕ್ರಿಯೆಗೆ ಸಾಗರೋಪಾದಿಯಲ್ಲಿ ಹರಿದು ಬಂದ ಜನಸಾಮಾನ್ಯರು ಗೌರವಿಸಿದ್ದು ಅವರ ನಡೆ ನುಡಿಯನ್ನು ನೋಡಿ ಮತ್ತು ಸಿದ್ದೇಶ್ವರ ಶ್ರೀಗಳ ಸರಳತೆಯನ್ನು ನೋಡಿ ಹಾಗೂ ಜೇಬಿಲ್ಲದ ಸಂತನ ಸಹಜ ತತ್ವಜ್ಞಾನ ಹಂಚಿಕೆಯನ್ನು ಮತ್ತು ನಿಸ್ವಾರ್ಥ ಧಾರ್ಮಿಕ ಚಿಂತನೆ ಹಂಚುವಿಕೆ ನೋಡಿ ಅನ್ನುವದನ್ನ ಗಮನಿಸಬೇಕಾದ ಅಗತ್ಯವಿದೆ‌.

ನಾಡು ಕಂಡ ಒಬ್ಬ ಶ್ರೇಷ್ಠ ಸಂತನ ಅಂತ್ಯಕ್ರಿಯೆಯ ಸಮಯದಲ್ಲಿ ಬಾಣಗಳಂತೆ ತೂರಿ ಬರುವ ಎಲುಬಿಲ್ಲದ ನಾಲಿಗೆಯ ಅನಗತ್ಯ ಪ್ರಶ್ನೆಗಳು ಅತಿರೇಕ ಅನ್ನಿಸುತ್ತವೆ.

ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀಯನ್ನು ಸರ್ಕಾರಕ್ಕೆ ಮರಳಿಸಿದ, ಮತ್ತು ಗೌರವ ಡಾಕ್ಟರೇಟ್ ಪದವಿಯನ್ನು ಕೂಡ ಅಷ್ಟೇ ನಯವಾಗಿ ನಿರಾಕರಿಸಿದ ಕೊನೆಗೆ ತಮ್ಮ ಅಂತ್ಯ ಸಂಸ್ಕಾರ ವನ್ನು ಕೂಡ ಸರಳವಾಗಿ ಮಾಡಿ ಪಂಚಭೂತಗಳಲ್ಲಿ ಲೀನವಾಗುವಂತೆ ಬರೆದಿಡುವ ಮೂಲಕ ಸಜ್ಜನಿಕೆ ಮೆರೆದ ಮಹಾನುಭಾವನ ಅಂತ್ಯಕ್ರಿಯೆ ವೇಳೆ ಜಾತಿ ಧರ್ಮದ ವಿಘಟನೆ ಮಾಡುವ ಪ್ರಶ್ನೆಗಳು ಸಮಂಜಸವೇ?? ಅನ್ನುವದನ್ನ ನಮ್ಮ ಮಾಧ್ಯಮ ಮಿತ್ರರು ಆತ್ಮವಿಮರ್ಷೆ ಮಾಡಿಕೊಳ್ಳುವ ಅಗತ್ಯವಿದೆ.

ವಿಜಯಪುರದ ರಹೀಂ ನಗರದ ನಿವಾಸಿ ಈ ಪ್ರಶ್ನೆ ಕೇಳುತ್ತಿದ್ದಂತೆಯೆ ಉತ್ತರಿಸಿದ ರೀತಿ ಆ ವಿಡಿಯೋ ನೋಡಿದಾಗೆಲ್ಲ ನನ್ನ ಮನಸ್ಸನ್ನು ಆರ್ದ್ರ ಗೊಳಿಸುತ್ತಿದೆ.ನೀವು ಮಠಕ್ಕೆ ಹೋಗಿದ್ರಾ ಅಂತ ಕೇಳಿದಾಗ *“ಇಲ್ಲ ಹೋಗಲಿಲ್ಲ ಗಲಾಟೆ ಇದೆ ಅಂತ ಹೇಳತಿದ್ರು, ಅವರ ಪ್ರವಚನ ಕೇಳಬೇಕು ಅವರನ್ ನೋಡಬೇಕು ಅಂತ ಅನ್ನಿಸ್ತಿತ್ತು ಆದರೆ ನನ್ನ ದೈವದೊಳಗ ಇರಲಿಲ್ಲ ಇಂದು ಈ ರೀತಿ ಅಂತ್ಯಸಂಸ್ಕಾರ ಟೈಮನ್ಯಾಗ ನೋಡಂಗ್ ಆಗೇತಿ”* ಎಂದು ಕಣ್ಣೀರಾದ ರೀತಿ ನೋಡಿದರೆ ಸಿದ್ದೇಶ್ವರ ಶ್ರೀಗಳ ಬದುಕಿನ ಆದರ್ಶಗಳು ಜನಸಾಮಾನ್ಯರ ಮೇಲೆ ಬೀರಿದ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತದೆ. ಇಷ್ಟೇ ಅಲ್ಲ ಕೊನೆಗೆ ಆ ಮುಸ್ಲಿಂ ಹಿರಿಯರು ಹೇಳ್ತಾರೆ *“ನಿಮಗೊಂದ್ ಮಾತ್ ಹೇಳ್ತೀನಿ ಅವರಿಗೆ ಸಾವಿಲ್ಲ…ಸತ್ಪುರುಷರಿಗೆ ಸಾವಿಲ್ಲ”* ಅನ್ನುವ ಮೂಲಕ ಆಂತರ್ಯದ ಮಾತುಗಳನ್ನು ಹಂಚಿಕೊಂಡಿದ್ದಾರೆ.ಒಬ್ಬ ಸಂತನನ್ನ ಒಬ್ಬ ಪ್ರವಾದಿಯ ಅನುಯಾಯಿ ಎಷ್ಟರ ಮಟ್ಟಿಗೆ ಆಳವಾಗಿ ಅರ್ಥ ಮಾಡಿಕೊಂಡರೋ ಅದನ್ನು ಕೈಯ್ಯಲ್ಲಿ ಮೈಕು,ಹೆಗಲ ಮೇಲೊಂದು ಕ್ಯಾಮೆರಾ ಹೊತ್ತ ಸಮಾಜ ಸುಧಾರಕರೆಂಬ ಸ್ವಯಂ ಘೋಷಿತ ಹುಲುಮಾನವರು ಅರ್ಥ ಮಾಡಿಕೊಂಡರೆ ನಾವು ನೀವೆಲ್ಲ ದ್ವೇಷ ಮರೆತು ಪ್ರೀತಿಯಿಂದ ಬದುಕುವಂತಾದರೆ ಸಿದ್ದೇಶ್ವರ ಶ್ರೀಗಳಂತಹ ನಡೆದಾಡುವ ದೇವರ *ಮನುಜ ಮತ ವಿಶ್ವ ಪಥದ* ಆಶಯಗಳು ಸಫಲವಾಗುತ್ತವೆ.

ಮಾಧ್ಯಮ ಯಾವುದೇ ಇರಲಿ,ಟಿ ಆರ್ ಪಿ ಎಷ್ಟೇ ಇರಲಿ ಆದರೆ ನಮ್ಮ ನಡೆ ಸಮಾಜ ಮುಖಿಯಾಗಿರಲಿ ಏನಂತೀರಿ??

*ದೀಪಕ ಶಿಂಧೇ*
*9482766018*

Leave a Comment

Your email address will not be published. Required fields are marked *

error: Content is protected !!