ಬೆಳಗಾವಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಜುನ್ನೇದಿಯಾ ಪ್ರೌಢಶಾಲೆಯ ಶಿಕ್ಷಕರು ರಾಷ್ಟ್ರೀಯ ಉರ್ದು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಷ್ಟ್ರೀಯ ಉರ್ದು ಶಿಕ್ಷಕ ಕರ್ಮಚಾರಿ ಸಂಘ ದೆಹಲಿ ವತಿಯಿಂದ ಶನಿವಾರ ಜನೇವರಿ 14 ರಂದು ಗಾಲಿಬ್ ಅಕಾಡೆಮಿ ದೆಹಲಿಯಲ್ಲಿ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು “ರಾಷ್ಟ್ರೀಯ ಉರ್ದು ಶಿಕ್ಷಕ ಸಂಘ”ದ ಅಧ್ಯಕ್ಷರಾದ ಚೌದರಿ ವಾಸೀಲ ಅಲಿ ಗುರ್ಜರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಕ್ಯಾಬಿನೆಟ್ ಮಂತ್ರಿಗಳಾಗಿದ್ದ ಮೋಹಸಿನಾ ಕಿಡವಾಯಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ಶ್ರೀಮತಿ: ಶೀಭಾ ಭಾಟಿಯಾ ಉಪಸ್ಥಿತರಿದ್ದರು.
ಈ ಪ್ರಶಸ್ತಿ ಸಮಾರಂಭದಲ್ಲಿ ಕುಡಚಿಯ ಜುನ್ನೇದಿಯಾ ಪ್ರೌಢಶಾಲೆ ಸಹ ಶಿಕ್ಷಕರಾದ ಮೊಹಿಯೋದ್ದಿನ ಇಸ್ಮಾಯಿಲ್ ಮಗದುಮ ಇವರಿಗೆ “ರಾಷ್ಟ್ರೀಯ ಉತ್ತಮ ಉರ್ದು ಶಿಕ್ಷಕ ಪ್ರಶಸ್ತಿ” ದೊರಕಿದರೆ, ಜುನ್ನೇದಿಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಆಯ್.ಎನ್.ಪಟೇಲ ಇವರಿಗೆ “ರಾಷ್ಟ್ರೀಯ ಉತ್ತಮ ಉರ್ದು ಮುಖ್ಯೋಪಾಧ್ಯಾಯರ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು.
ಈ ಪ್ರಶಸ್ತಿಗೆ ಭಾಜನರಾಗಿ ಕುಡಚಿ ಪಟ್ಟಣಕ್ಕೆ ಕೀರ್ತಿ ತಂದ ಇವರಿಗೆ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಇಕ್ಬಾಲ್ ಸತ್ತಾರ, ಮುಖ್ಯೋಪಾಧ್ಯಯರು ಹಾಗೂ ಸಿಬ್ಬಂದಿ ವರ್ಗದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ :ಸಂಜೀವ್ ಬ್ಯಾಕುಡೆ