ಬೆಳಗಾವಿ
ರಡ್ಡೇರಹಟ್ಟಿ- ಸಮೀಪದ ಮುರಗುಂಡಿ ಗ್ರಾಮದ ವೆಕ್ತಿ ಮೂಳೆ ಮುರಿದಾಗ ಖಾಸಗಿ ವೈದ್ಯರ ಬಳಿ ಹೋದರೆ ಲಕ್ಷಾಂತರ ರೂಪಾಯಿ ಬಿಲ್ ಪೀಕುತ್ತಾರೆ. ಆದರೆ, ಇಲ್ಲೊಬ್ಬ ರೈತ, ಥೇಟ್ ನಾಟಿ ವೈದ್ಯರ ತರಹ ಕೇವಲ 50 ರೂಪಾಯಿಯೊಳಗೆ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ದೇಹದ ಯಾವುದೇ ಭಾಗದ ಮೂಳೆ ಮುರಿದರೂ, ಈ ರೈತ ವೈದ್ಯ ಕೇವಲ ಮೂರು-ನಾಲ್ಕು ವಾರಗಳಲ್ಲಿ ಸರಳ ಚಿಕಿತ್ಸೆ ಮೂಲಕ ಗುಣಮುಖರನ್ನಾಗಿ ಮಾಡುತ್ತಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಮುರಗೆಪ್ಪಾ ಸಿದ್ದಾಉಗಾರೆ ಎಂಬುವವರೆ ಈ ಚಮತ್ಕಾರಿ ನಾಟಿ ರೈತವೈದ್ಯ ಬಡವರ ಪಾಲಿಗೆ ದೇವರಂತೆ ಕೆಲಸ ಮಾಡುತ್ತಾ ಕೇವಲ 50 ರೂ.ಗಳಲ್ಲಿ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುತ್ತಾರೆ. ಗಿಡಮೂಲಿಕೆಗಳಿಂದಾದ ಒಂದು ಎಣ್ಣೆಯಿಂದ ಮಾಲಿಷ್ ಮಾಡುವ ಇವರು, ನಿಗದಿತ ಸಮಯದಲ್ಲೇ ಮೂಳೆ ಮುರಿತವನ್ನು ಗುಣ ಮಾಡುತ್ತಾರೆ. ಕಳೆದ 25 ಕ್ಕೂ ಹೆಚ್ಚು ವರ್ಷಗಳಿಂದ ನಾಟಿ ಚಿಕಿತ್ಸೆ ನೀಡುತ್ತಾ ಬೆಳಗಾವಿ, ವಿಜಯಪೂರ, ಬಾಗಲಕೋಟ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಜನರಿಗೆ ಸಂಜೀವಿನಿಯಾಗಿದ್ದಾರೆ.
ಮೂಳೆ ಮುರಿತ ಕೈಯಿಂದ ಮುಟ್ಟಿನೋಡಿ ಪರೀಕ್ಷಿಸಿ, ಮೂಳೆ ಜೋಡಣೆ ಮಾಡುತ್ತಾರೆ. ಕೂಲಿ ಕಾರ್ಮಿಕರು, ಆಟೋ ಡ್ರೈವರ್ ಸೇರಿದಂತೆ ಎಲ್ಲ ವರ್ಗದ ಜನರೂ ಇವರ ಬಳಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿದ್ದು ಕೈ ಕಾಲಿಗೆ ಪೆಟ್ಟಾದರೆ, ನಡೆಯುವಾಗ ಆಯತಪ್ಪಿ ಕಾಲು ಉಳುಕಿದರೆ, ಅವಘಡಗಳಲ್ಲಿ ಸಿಕ್ಕಿ ಕಾಲು ಮುರಿದ ತಕ್ಷಣ ಈ ಭಾಗದ ಜನರ ಮನದಲ್ಲಿ ನೆನಪಾಗುವ ಮೊದಲ ಹೆಸರೇ ಮುರಗುಂಡಿ ಗ್ರಾಮದ ಮುರಗೆಪ್ಪಾ ಸಿದ್ದಾಉಗಾರೆ ಎಂಬ ರೈತ ವೈದ್ಯ.
ದಿನಂಪ್ರತಿ ಹತ್ತಾರು ಆಸ್ಪತ್ರೆ ಅಲೆದು ಗುಣಮುಖರಾಗದೆ, ಇವರ ಬಳಿ ಚಿಕಿತ್ಸೆ ಪಡೆದು ಗುಣಮುಖರಾದ ಹಲವರು ಇವರ ಕೈಗುಣ, ಚಿಕಿತ್ಸೆ ಕುರಿತು ಹಾಡಿ ಹೊಗಳಿ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ವಿಶೇಷವಾಗಿ ಮೂಳೆ ಮುರಿತದ ತೀವ್ರತೆಯನ್ನು ಆಧರಿಸಿ 3 ದಿನದ ಅಲ್ಪಾವಧಿ ಚಿಕಿತ್ಸೆಯಿಂದ- ಆರು ತಿಂಗಳ ದೀರ್ಘಕಾಲಿಕ ಚಿಕಿತ್ಸೆಯನ್ನ ನೀಡಿ ಸರಿಪಡಿಸಿ ಮಾದರಿ ರೈತವೈದ್ಯರಾಗಿದ್ದಾರೆ.
ವರದಿ :ಸಿದ್ದಾರೂಢ ಬಣ್ಣದ