ನಿಜಶರಣ ಅಂಬಿಗರ ಚೌಡಯ್ಯನವರ ಕಾರ್ಯ ಶ್ಲಾಘನೀಯ: ಶಾಸಕ ಶ್ರೀಮಂತ ಪಾಟೀಲ್

Share the Post Now

ಬೆಳಗಾವಿ

ವರದಿ :ಸಚಿನ್ ಕಾಂಬ್ಳೆ


ಕಾಗವಾಡ : ಜಗತ್ತಿನ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ನಿಜಶರಣ ಅಂಬಿಗರ ಚೌಡಯ್ಯನವರ ಕಾರ್ಯ ಶ್ಲಾಘನೀಯವಾಗಿದೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಪಾವನವಾಗುವುದೆಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಅವರು ಶನಿವಾರ ದಿ. ೨೧ ರಂದು ಕಾಗವಾಡ ಸರ್ಕಾರಿ ಕನ್ನಡ ಶಾಲೆಯ ಸಭಾಂಗಣದಲ್ಲಿ ಕಾಗವಾಡ ತಾಲೂಕಾಡಳಿತ ಮತ್ತು ತಾಲೂಕಾ ಕೋಳಿ, ತಳವಾರ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ೯೦೩ ನೇ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು.ಅವರು ಮುಂದೆ ಮಾತನಾಡುತ್ತಾ ಮಹಾಪುರುಷರು, ಸಂತರು, ಶರಣರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗಿದಾಗ ಮಾತ್ರ ಈ ಜಯಂತೋತ್ಸವ ಕಾರ್ಯಕ್ರಮಗಳಿಗೆ ಬೆಲೆ ನೀಡಿದಂತಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅಥಣಿಯ ಕಾಡಸಿದ್ಧೇಶ್ವರ ಆಶ್ರಮದ ಪ.ಪೂ. ಶ್ರೀ ಕಾಡಯ್ಯ ಸ್ವಾಮಿಜಿ ಮಾತನಾಡುತ್ತಾ, ಶರಣರು ಸಂತರು ಜಗತ್ತಿನ ಉದ್ಧಾರಕ್ಕಾಗಿ, ಸಮಾಜದ ಉದ್ಧಾರಕ್ಕಾಗಿ, ವಿಶ್ವ ಶಾಂತಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಲೋಕ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಆ ಕಾರಣದಿಂದಲೇ ಇಂದು ನಾವು ಅವರ ಜಯಂತೋತ್ಸವವನ್ನು ಆಚರಿಸುತ್ತಿದ್ದೇವೆ. ನಾವು ಎಷ್ಟು ವರ್ಷ ಬದುಕಿದೇವು ಎನ್ನುವುದಕ್ಕಿಂತ ಬದುಕಿರುವಾಗ ಎಷ್ಟು ಸತ್ಕಾರ್ಯಗಳನ್ನು ಮಾಡಿದ್ದೇವೆ ಎಂಬುವುದನ್ನು ಅರಿತುಕೊಂಡು ಜೀವನ ಸಾಗಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ ಮಾತನಾಡುತ್ತಾ ನಿಜಶರಣ ಅಂಬಿಗರ ಚೌಡಯ್ಯನವರು ಒಂದು ಸಮಾಜಕ್ಕೆ ಸೀಮಿತವಾಗಿರದೇ ವಿಶ್ವ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ದಾರ್ಶನಿಕರು ಆಗಿದ್ದರು ಎಂದು ಬಣ್ಣಿಸಿದ ಅವರು ಇಂದಿನ ಯುವಪೀಳಿಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮಕ್ಕೆ ಮುಂಚೆ ಕಾಗವಾಡ ತಹಶೀಲ್ದಾರ ಕಾರ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ತಹಶೀಲ್ದಾರ ರಾಜೇಶ ಬುರ್ಲಿ ಹಾಗೂ ದಿವ್ಯ ಸಾನಿಧ್ಯ ವಹಿಸಿದ್ದ ಸ್ವಾಮಿಜಿಯವರಿಂದ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಇದೇ ಸಮಯದಲ್ಲಿ ಕಾಗವಾಡ ತಾಲೂಕಾ ಕೋಳಿ ಹಾಗೂ ತಳವಾರ ಸಮಾಜದ ವತಿಯಿಂದ ಶಾಸಕ ಶ್ರೀಮಂತ ಪಾಟೀಲ, ತಹಶೀಲ್ದಾರ ರಾಜೇಶ ಬುರ್ಲಿ, ಸಿಡಿಪಿಓ ಸಂಜೀವಕುಮಾರ ಸದಲಗಿ ಹಾಗೂ ಸ್ವಾಮಿಜಿ ಸೇರಿದಂತೆ ವೇದಿಕೆ ಮೇಲೆ ಆಶೀನರಾಗಿದ್ದ ಗಣ್ಯ ಮಾನ್ಯರಿಗೆ ಶಾಲು ಹೊದಿಸಿ ಸತ್ಕರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಶ್ರೀ ರಾಮಾನಂದ ಅವಧೂತ ಭಜನಾ ಮಂಡಳದ ವತಿಯಿಂದ ಅಂಬಿಗರ ಚೌಡಯ್ಯನವರ ವಚನ ಗಾಯನ ಭಜನೆ ಕಾರ್ಯಕ್ರಮ ಜರುಗಿತು.

ಈ ಸಮಯದಲ್ಲಿ ಕಾಗವಾಡ ತಾಲೂಕಾ ಕೋಳಿ, ತಳವಾರ ಸಮಾಜದ ಅಧ್ಯಕ್ಷ ಭಗವಂತ ತಳವಾರ, ಸುರೇಶ ಕೋಳಿ, ಸಿಡಿಪಿಓ ಸಂಜೀವಕುಮಾರ ಸದಲಗಿ, ದುಂಡಪ್ಪ ಚಾಳೇಕರ, ಮಾರುತಿ ಸನದಿ, ಎಸ್.ಕೆ. ಹೊಳೆಪ್ಪಣ್ಣವರ, ಚಿಂತು ಹುಲಗಬಾಳಿ, ಶ್ರೀಶೈಲ ಹೆಗಡೆ, ದೀಪಕ ತಳವಾರ, ಪದಮಣ್ಣ ಕೋಳಿ, ಸಚೀನ ಮಿರ್ಜೆ, ಶಶಿಕಾಂತ ತಳವಾರ, ಅಶೋಕ ಕೋಳಿ, ವಿಪುಲ ಕೋಳಿ, ಶ್ಯಾಮ ಕೋಳಿ, ಲಕ್ಷ್ಮಣ ಕೋಳಿ, ಅರುಣ ಮಿರ್ಜೆ, ರಾಯಪ್ಪ ಕೋಳಿ, ಪುರಂದರ ತಳವಾರ, ಅಪ್ಪಾಸಾಬ ಸನದಿ, ಉತ್ತಮ ಕೋಳಿ, ಜಯಂತ ಕೋಳಿ ಸೇರಿದಂತೆ ಕೋಳಿ, ತಳವಾರ ಸಮಾಜದವರು, ತಾಲೂಕಾಡಳಿತ ಅಧಿಕಾರಿಗಳು ಸಿಬ್ಬಂದಿ ವರ್ಗ ಅಪಾರ ಸಂಖ್ಯೆಯಲ್ಲಿ ಇದ್ದರು.

ಸುರೇಶ ಕೋಳಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

error: Content is protected !!