ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಕಾಗವಾಡ:ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅತ್ಯಗತ್ಯವಾಗಿ ಕುಡಿಯುವ ನೀರು, ಸುಸಜ್ಜಿತ ರಸ್ತೆ, ವಿದ್ಯುತ್, ನೀರಾವರಿ, ಶಿಕ್ಷಣ ವ್ಯವಸ್ಥೆ ಬೇಕೆಬೇಕು ಈ ನಿಟ್ಟಿನಲ್ಲಿ ನನ್ನ ಶಾಸಕ ಅಧಿಕಾರಾವಧಿಯಲ್ಲಿ ಈ ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನ ಮಾಡುತ್ತಿರುವೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಜಕಾರಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯತನ ನೂತನ ಕಟ್ಟಡ ಬುಧವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.ಶಿಕ್ಷಣ ಕ್ಷೇತ್ರದಲ್ಲಿಯೇ ಕ್ರಾಂತಿ ಎನ್ನುವಂತೆ ಕಾಗವಾಡ ಮತಕ್ಷೇತ್ರದಲ್ಲಿ ನನ್ನ ಐದು ವರ್ಷಗಳ ಅವಧಿಯಲ್ಲಿ ೨೫೦ ಶಾಲಾ ಕೊಠಡಿಗಳನ್ನು ನಿರ್ಮಸಲಾಗಿದೆ ಜೊತೆಗೆ ೭೪ ಹೊಸ ಅಂಗನವಾಡಿ ಕೇಂದ್ರಗಳು ಮಂಜೂರಾಗಿವೆ ಅಲ್ಲದೆ ಡಿಜಿಟಲ್ ಕ್ಲಾಸ್ ರೂಂ ಗಳನ್ನು ಸಹ ನಿರ್ಮಿಸಲಾಗಿದೆ ಎಂದ ಅವರು ಸ್ವಾತಂತ್ರದ ನಂತರ ಇಲ್ಲಿಯವರೆಗೂ ರಸ್ತೆಗಳನ್ನು ಕಾಣದ ಸಂಪರ್ಕ ರಸ್ತೆಗಳನ್ನು , ಗ್ರಾಮೀಣ ರಸ್ತೆಗಳನ್ನು ನಿರ್ಮಿಸಿರುವೆ ಅಲ್ಲದೆ ಗ್ರಾಮೀಣ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಿರುವೆ ಎಂದರು.
ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕಾರ್ಯ ಅಂತಿಮ ಹಂತ ತಲುಪಿದ್ದು, ರಾಜ್ಯ ಸರಕಾರದಿಂದ ಈಗಷ್ಟೆ ಗುತ್ತಿಗೆದಾರನಿಗೆ ಬಿಲ್ಲು ಪಾವತಿಸಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಅನುಕೂಲಕ್ಕಾಗಿ ಅಥಣಿ ಶುಗರ್ಸ ವತಿಯಿಂದ ನಾನು ೫ ರಿಂದ ೧೦ ಕೋಟಿ ರೂ.ಗಳವರೆಗೆ ತಾತ್ಕಾಲಿಕವಾಗಿ ಹಣ ಕೊಡಲು ಸಿದ್ಧನಿರುವುದಾಗಿ ಹೇಳಿದ ಅವರು ಒಟ್ಟಾರೆಯಾಗಿ ಈ ಯೋಜನೆ ಪೂರ್ಣಗೊಳ್ಳಬೇಕು ಮತ್ತು ಈ ಭಾಗದ ರೈತರ ಜಮೀನುಗಳಿಗೆ ನೀರು ಸಿಗಬೇಕು ಎನ್ನುವುದೇ ನನ್ನ ಮಹಾತ್ವಾಕಾಂಕ್ಷೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಕೌಲಗುಡ್ಡದ ಶ್ರೀ ಅಮರೇಶ್ವರ ಮಹಾರಾಜರು, ಕಾಗವಾಡ ಕ್ಷೇತ್ರದಲ್ಲಿ ಪಾದರಸದಂತೆ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಕ್ಷೇತ್ರದಲ್ಲಿ ಜನಪರ ಹಾಗೂ ಅಭಿವೃದ್ಧಿ ಪರ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತಿರುವ ಶಾಸಕ ಶ್ರೀಮಂತ ಪಾಟೀಲರು ರಾಜಕೀಯ ಕ್ಷೇತ್ರಕ್ಕೆ ಮಾದರಿ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಪಿಎಲಡಿ ಬ್ಯಾಂಕ ನೀರ್ದೆಶಕ ಮಹಾದೇವ ಕೋರೆ, ವಿನಾಯಕ ಬಾಗಡಿ, ಜಿಲ್ಲಾ ಪಂಚಾಯತನ ವೀರಣ್ಣಾ ವಾಲಿ ಹಾಗೂ ಪ್ರಾಸ್ತಾವಿಕವಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಜ್ಯುತ್ ಕುಲಕರ್ಣಿ ಮಾತನಾಡಿದರು.
ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ಸಿದ್ಧು ಖೋತ ವಹಿಸಿದ್ದರು.ಉಪಾದ್ಯಕ್ಷರಾದ ಶ್ರಿಮತಿ ರೇಶ್ಮಾ ರಾಮಚಂದ್ರ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.