ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಕಾಗವಾಡ: ಮಹಾ ಮೇದಾವಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿಶ್ರಮ ಫಲವಾಗಿ ಭಾರತ ದೇಶ ಇಂದು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಗಣತಂತ್ರ ದೇಶ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಆ ಗಣತಂತ್ರ ವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯ ಪ್ರಜೆಯದ್ದಾಗಿದೆ ಎಂದು ಕಾಗವಾಡ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲ ಹೇಳಿದರು.
ಅವರು ಗುರುವಾರ ದಿ. ೨೬ ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಕಾಗವಾಡ ತಾಲೂಕಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಟ್ಟಣ ಪಂಚಾಯತ ಕಾಗವಾಡ, ಗ್ರಾಮ ಪಂಚಾಯತಿ ಕಾಗವಾಡ, ರಾಷ್ಟ್ರೀಯ ಉತ್ಸವ ಸಮಿತಿ, ಶಿವಾನಂದ ಮಹಾವಿದ್ಯಾಲಯ ಹಾಗೂ ಸ್ಥಳೀಯ ಸರಕಾರಿ ಅರೆ ಸರಕಾರಿ ಶಾಲೆಗಳು ಹಾಗೂ ಹಲವಾರು ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಾರ್ವಜನಿಕ ೭೪ ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ ದೇಶದಲ್ಲಿ ನೂರಕ್ಕೆ ನೂರರಷ್ಟು ಶಿಕ್ಷಣವನ್ನು ಪಡೆದುಕೊಂಡಾಗ ಈ ಗಣತಂತ್ರ ವ್ಯವಸ್ಥೆಗೆ ಮತ್ತಷ್ಟು ಬಲ ಬಂದಂತಾಗುತ್ತದೆ. ಕಾರಣ ಪ್ರತಿಯೊಬ್ಬರು ಶಿಕ್ಷಣದಿಂದ ವಂಚಿತರಾಗದೇ ಸುಶಿಕ್ಷತರಾಗಿ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಹಕರಿಸುವಂತೆ ಕರೆ ನೀಡಿದರು.
ಕಾಗವಾಡ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಒಂದು ಮಾದರಿ ಮತಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿರುವ ನಮಗೆ ರಾಜ್ಯ ಮಟ್ಟದಲ್ಲಿ ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ ಅವರನ್ನು ಕಾಗವಾಡ ತಾಲೂಕಾ ಮತದಾರರ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವುದರಿಂದ ರಾಜ್ಯಪಾಲರಿಂದ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿರುವದು ಕಾಗವಾಡ ಮತಕ್ಷೇತ್ರಕ್ಕೆ ಸಂದ ಪ್ರಪ್ರಥಮ ಗೌರವವಾಗಿದೆ. ಇದೇ ರೀತಿ ಮುಂದಿನ ದಿನಮಾನಗಳಲ್ಲಿಯೂ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿ ರಾಜ್ಯ ಮಟ್ಟದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ನಾವೆಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂದು ಹೇಳಿದರು.
ಇದೇ ವೇಳೆ ಕಾಗವಾಡ ತಾಲೂಕಾ ಸಮಸ್ತ ನಾಗರಿಕರ ಪರವಾಗಿ ಶಾಸಕ ಶ್ರೀಮಂತ ಪಾಟೀಲರು ತಹಶೀಲ್ದಾರ ರಾಜೇಶ ಬುರ್ಲಿ ಅವರನ್ನು ಶಾಲು ಹೊದಿಸಿ ಸತ್ಕರಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ರಾಜೇಶ ಬುರ್ಲಿ ಮಾತನಾಡುತ್ತಾ ಅತ್ಯುತ್ತಮ ಚುನಾವಣಾ ತಾಲೂಕಾ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿ ಪ್ರಶಸ್ತಿ ಲಭಿಸಿರುವುದಕ್ಕೆ ತಾಲೂಕಿನ ಬಿಎಲ್‌ಓ ಗಳನ್ನು ಹಾಗೂ ಇನ್ನಿತರ ಸಿಬ್ಬಂದಿಯವರ ಸಹಕಾರದಿಂದ ಈ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.
ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ತಾಲೂಕಾ ತಹಶೀಲ್ದಾರ ರಾಜೇಶ ಬುರ್ಲಿ, ಮೊದಲಾದ ಗಣ್ಯಮಾನ್ಯರು ಮಹಾತ್ಮಾ ಗಾಂಧಿಜಿ ಹಾಗೂ ಡಾ.ಬಿ.ಆರ್. ಅಂಬೇಡಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನಂತರ ಶಾಸಕರಿಗೆ, ತಹಶೀಲ್ದಾರರಿಗೆ, ಮುಖ್ಯ ಅತಿಥಿಗಳಿಗೆ, ಶಾಲಾ ವಿದ್ಯಾರ್ಥಿಗಳು, ಪೋಲಿಸ್ ಸಿಬ್ಬಂದಿ ವರ್ಗ, ಸ್ಕೌಟ್ ಮತ್ತು ಗೈಡ್ಸ, ಎನ್.ಸಿ.ಸಿ., ಎನ್.ಎಸ್.ಎಸ್. ಕೆಡಿಟ್‌ಗಳಿಂದ ಗೌರವ ವಂದನೆ, ಪಥಸಂಚಲನ ಕಾರ್ಯಕ್ರಮಗಳು ಜರುಗಿದವು.
ಇದೇ ಸಮಯದಲ್ಲಿ ತಾಲೂಕಿನಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ತಾಲೂಕಾಡಳಿತ ಮತ್ತು ಗಣರಾಜ್ಯೋತ್ಸವ ಸಮಿತಿಯಿಂದ ಸತ್ಕರಿಸಿ ಸನ್ಮಾನಿಸಲಾಯಿತು.
ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಮಯದಲ್ಲಿ ಕಾಗವಾಡ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲ, ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ರವೀಂದ್ರ ಖಡಾಖಡಿ, ಎಸ್.ಬಿ.ಪಾಟೀಲ, ಶಿವಾನಂದ ಮಹಾವಿದ್ಯಾಲಯದ ಪ್ರಾ. ವ್ಹಿ.ಎಸ್.ತುಗಶೆಟ್ಟಿ, ವೈದ್ಯಾಧಿಕಾರಿ ಪುಷ್ಪಲತಾ ಸುಣ್ಣದಕಲ್ಲ, ಸಿಡಿಪಿಓ ಸಂಜೀವಕುಮಾರ ಸದಲಗಿ, ಕಾಗವಾಡ ಪಿಎಸ್‌ಐ ನೆರಲೆ, ಪಪಂ ಮುಖ್ಯಾಧಿಕಾರಿ ಪ್ರಕಾಶ ಮಗದುಮ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು, ಎಲ್ಲ ಸರ್ಕಾರಿ ಮತ್ತು ಅರೆ ಸರ್ಕಾರಿ ಸಿಬ್ಬಂದಿ ವರ್ಗ ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು.
ರವೀಂದ್ರ ಖಡಾಖಡಿ ಸ್ವಾಗತಿಸಿದರು. ಜೆ.ಕೆ.ಪಾಟೀಲ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.