ಸುದ್ದಿ ಸಂದೇಶ, ಬಾಗಲಕೋಟ
ವರದಿ :ಸಚಿನ್ ಕಾಂಬ್ಳೆ
ಜಮಖಂಡಿ :ನಮ್ಮದು ಡಬಲ್ ಎಂಜಿನ್ ಸರ್ಕಾರವಿದೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಯು ತನ್ನ ದುರಾಡಳಿತ ಹಾಗು ಜನತೆಯ ವಿರೋಧದಿಂದ ಕೂಡಿದ್ದು, ಇದೀಗ ಯೋಜನೆಗಳು ಹಳ್ಳ ಹಿಡಿಯುವದರ ಮೂಲಕ ಕೇಂದ್ರ ಹಾಗು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರದ ಡಬಲ್ ಎಂಜಿನ್ ಸಂಪೂರ್ಣ ಸೀಜ್ ಆಗಿರುವ ಸ್ಥಿತಿಯಲ್ಲಿದೆ ಎಂದು ತೇರದಾಳ ಕಾಂಗ್ರೆಸ್ ಮುಖಂಡ ಡಾ. ಪದ್ಮಜಿತ ನಾಡಗೌಡ ಪಾಟೀಲ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ಅಂಗವಿಕಲರ ಸತ್ಯಾಗ್ರಹ ಸ್ಥಳಕ್ಕೆ ಭೆಟ್ಟಿ ನೀಡಿ ಮಾತನಾಡಿದ ಅವರು, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ವೈಫಲ್ಯತೆ ಕಂಡಿದ್ದು, ಇದೇ ಕಾರಣಕ್ಕೆ ಜಿಪಂ ತಾಪಂ ಚುನಾವಣೆಗಳನ್ನು ನಡೆಸದೆ ಅನಿವಾರ್ಯವಾಗಿಯಾದರೂ ವಿಧಾನಸಭೆ ಚುನಾವಣೆಯನ್ನಾದರೂ ಎದುರಿಸಲೇಬೇಕಿದೆ.ಈ ಬಾರಿ ರಾಜ್ಯದ ಜನತೆ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆಂದು ಡಾ. ನಾಡಗೌಡ ಹೇಳಿದರು.
ತಾಲೂಕಿನಲ್ಲಿರುವ ನೂರಾರು ವಿಕಲಚೇತನರ ಕನಿಷ್ಠ ಬೇಡಿಕೆಗಳನ್ನು ಈಡೇರಿಸುವಲ್ಲಿ ಕ್ಷೇತ್ರದ ಶಾಸಕ ಸಿದ್ದು ಸವದಿ ಹಾಗು ರಾಜ್ಯ ಸರ್ಕಾರ ಮೀನಾಮೇಷ ನಡೆಸುತ್ತಿರುವದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಶಂಕರ ಸೊರಗಾಂವಿ ಮಾತನಾಡಿ ಕ್ಷೇತ್ರಾದ್ಯಂತ ಎಂದೂ ನಡೆಯದ ಕಾಮಗಾರಿಗಳು ಚುನಾವಣೆಯ ಗಿಮಿಕ್‌ಗಾಗಿ ಅಲ್ಲಲ್ಲಿ ರಸ್ತೆ, ಚರಂಡಿ ಸೇರಿದಂತೆ ಕಾಟಾಚಾರಕ್ಕೆಂಬಂತೆ ಕೆಲಸಗಳನ್ನು ಹಮ್ಮಿಕೊಂಡು ಜನತೆಯ ವಿಶ್ವಾಸ ಗಳಿಸುವಲ್ಲಿ ಹೊರಟಿರುವ ಶಾಸಕರ ಕೆಲಸ ಸಾಮಾನ್ಯ ಜನತೆಗೆ ಅರಿವಾಗುತ್ತದೆ. ತಮಗೆ ಬೇಕಾದ ಭಾಗಗಳಲ್ಲಿ ಮಾತ್ರ ಕಾರ್ಯ ನಡೆಸುತ್ತ, ಕಾಂಗ್ರೆಸ್ ಮತದಾರರಿರುವ ಭಾಗಗಳಲ್ಲಿ ಯಾವದೇ ಕಾರ್ಯ ನಡೆಸುತ್ತಿಲ್ಲವೆಂದು ಬಲವಾಗಿ ಆರೋಪಿಸಿದರು.
ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯ ಓಂಪ್ರಕಾಶ ಮನಗೂಳಿ, ಕುಮಾರ ಪಾವಟೆ, ಆನಂದ ಕೋಪರ್ಡೆ, ದುಂಡಪ್ಪ ಕುಡಚಿ, ನಾಗಪ್ಪ ಬಂಗೆನ್ನವರ, ಹನಮಂತ ಬಡ್ಡಿ, ನಾಗರಾಜ ಹಳ್ಳದ, ಗಿರಮಲ್ಲ ಗುಣದಾಳ, ಕುಬೇರ ಸಾರವಾಡ, ರವೀಂದ್ರ ಬಾಡಗಿ, ಸಿದಗಿರೆಪ್ಪ ಬಿರಾದಾರಪಾಟೀಲ, ಸಂಜು ಅಮ್ಮಣಗಿ ಸೇರಿದಂತೆ ಅನೇಕರಿದ್ದರು.