ಬೆಳಗಾವಿ,
ವರದಿ :ಸಂಗಮೇಶ ಹಿರೇಮಠ
ಸತಿ-ಪತಿ ಗಳೊಂದಾದ ಭಕ್ತಿ ಹಿತ ಒಪ್ಪುವುದು ಶಿವಂಗೆ..
ಮುಗಳಖೋಡ: ಪರಮಾತ್ಮನಿಂದ ಬಂದ ಜೀವ ಮತ್ತೆ ಶಿವನನ್ನು ಸೇರಬೇಕೆಂದರೆ ಎರಡು ದೇಹಗಳು ಒಂದೇ ಜೀವದಂತೆ ಅಂದರೆ ಸತಿ-ಪತಿ ಗಳಿಬ್ಬರೂ ಒಬ್ಬರನೊಬ್ಬರು ಅರಿತುಕೊಂಡು ಸುಖ-ದುಃಖ ಗಳಲ್ಲಿ ಶಿವನ ಧ್ಯಾನ ಮಾಡುತ್ತಾ ದಾನ ಧರ್ಮ, ಆಧ್ಯಾತ್ಮದೊಂದಿದೆ ಸತ್ಸಂಗದಲ್ಲಿ ತೊಡಗಿಕೊಂಡು ಪ್ರತಿ ನೋಟದಲ್ಲಿ ಶಿವನನ್ನು ಕಂಡರೆ ಆ ಸತಿ-ಪತಿಗಳನ್ನು ನೋಡಿ ಶಿವನು ಆನಂದಭರಿತನಾಗಿ ಮೆಚ್ಚುಗೆ ವ್ಯಕ್ತಪಡಿಸಿ ತನ್ನಲ್ಲಿಗೆ ಕರೆಸಿಕೊಳ್ಳುತ್ತಾನೆಂದು ಶೇಗುಣಸಿ ವಿರಕ್ತ ಮಠದ ಪ.ಪೂ. ಶ್ರೀ ಡಾ. ಮಹಾಂತ ಶಿವಯೋಗಿಗಳು ಹೇಳಿದರು.
ಅವರು ಮುಗಳಖೋಡ ಸಮೀಪದ ಹಂದಿಗುಂದ ಗ್ರಾಮದ ಶ್ರೀ ಸಿದ್ದೇಶ್ವರ ಮಠದ ಲೋಕಾರ್ಪಣೆ ಹಾಗೂ ಶಿವಾನಂದ ಮಹಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಂಡ ತಿಂಗಳ ಪರ್ಯಂತ ನಡೆಯುತ್ತಿರುವ ಶ್ರೀ ಬಸವ ಮಹಾ ಪುರಾಣವನ್ನು ಬೋಧಿಸುತ್ತಾ ಕೆಲ ಮಹಾತ್ಮರು ಸಂಸಾರವನ್ನು ತ್ಯಜಿಸಿ ಗೆದ್ದರೆ, 12 ನೇ ಶತಮಾನದ ಮಹಾನ್ ಪುರುಷರು ಸಂಸಾರದಲ್ಲಿದ್ದು ಗೆದ್ದಿದ್ದಾರೆ.
ಸಂಸಾರ ಯಾವ ಸಾಧನೆಗೂ ಅಡೆತಡೆ ಆಗುವುದಿಲ್ಲ. ಲೌಕಿಕ ಮತ್ತು ಪಾರಮಾರ್ಥಿಕವಾಗಿ ಸಂಸಾರದಲ್ಲಿ ಇದ್ದು ಸತಿ-ಪತಿಗಳ ದೇಹ ಎರಡಾದರೂ ನೋಡುವ ನೋಟ, ಮಾಡುವ ಚಿಂತನೆ ಒಂದೇ ಮಾರ್ಗವಾಗಿರಬೇಕು. ಸಂಸಾರದಲ್ಲಿ ಸೊನ್ನೆ ಎಂಬ ಚಿಂತನೆಯನ್ನ ತಗೆದುಹಾಕಿದರೆ ಅದು ಸಸಾರವಾಗುವದು. ಅಂದರೆ ಸಂಸಾರವನ್ನು ಯಾವುದೇ ರೀತಿಯಾಗಿ ಚಿಂತೆಗಿಡುಮಾಡದೆ ಪ್ರತಿ ಮಾತನ್ನು ಒಳಿತನ್ನಾಗಿ ತೆಗೆದುಕೊಂಡರೆ ಸಂಸಾರ ಸಸಾರವಾಗಿ ಸಾಗುವುದು.
ಇಂತಹ ಚಿಂತನೆಗಳು12 ನೇ ಶತಮಾನದ ಶರಣರು ತಿಳಿಸಿರುವ ವಿಚಾರಗಳಾಗಿವೆ, ಕಾರಣ ಇವತ್ತಿನ ಸತಿ-ಪತಿಗಳು ಕೂಡಾ ಯಾವುದೇ ವಿರೋಧಗಳನ್ನು ವ್ಯಕ್ತಪಡಿಸದೆ ಪ್ರತಿದಿನ ನಗು ಮುಖದಿಂದ ‘ದಾಸಿಮಯ್ಯ ಮತ್ತು ದುಗ್ಗಳೆ’ ಗಳಂತ ಒಮ್ಮನಸ್ಸಿನಿಂದ ಬಾಳಿದರೆ ತಮ್ಮ ಸಂಸಾರ ಸಸಾರವಾಗುವದು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ ಪ.ಪೂ ಶ್ರೀ ಶಿವಾನಂದ ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಶ್ರೀಮಠದ ಕಾರ್ಯಕರ್ತರು, ಆಡಳಿತ ಮಂಡಳಿ ಸರ್ವ ಸದಸ್ಯರು, ಮಹಿಳೆಯರು, ಮಕ್ಕಳು ಸೇರಿದಂತೆ ಸಕಲ ಭಕ್ತಾದಿಗಳು ಪಾಲ್ಗೊಂಡಿದ್ದರು.