ಬೆಳಗಾವಿ, ಸಂದೇಶ
ಪ್ರತಿಯೊಬ್ಬರೂ ಓದಲೇಬೇಕಾದ ಉತ್ತಮ ಕೃತಿ ಸಾಹಿತಿ ಡಾ: ವ್ಹಿ.ಎಸ್.ಮಾಳಿ;
ವರದಿ: ಶ್ರೀ ಪ್ರಕಾಶ ಚ ಕಂಬಾರ
ಮುಗಳಖೋಡ : ಬಾಗೇನಾಡಿನ ಹಾಲುಮತದ ಪ್ರಮುಖ ಐದು ದೈವಗಳಾದ ಆಲಖನೂರಿನ ಕರಿಸಿದ್ದೇಶ್ವರ, ಯಲ್ಪಾರಟ್ಟಿಯ ಅರಣ್ಯ ಸಿದ್ದೇಶ್ವರ, ಕಂಕಣವಾಡಿಯ ಹಾಲಸಿದ್ದೇಶ್ವರ, ಚಿಂಚಲಿಯ ಶಕ್ತಿಮಾತೆ ಮಾಯಕ್ಕ ಮತ್ತು ಬೆಕ್ಕೇರಿಯ ಲಕ್ಕವ್ವ ಈ ದೇವರುಗಳನ್ನು ಪರಿಚಯಿಸುವಂತಹ ಮಹಾಪ್ರಬಂದವು, ಕುರುಬ ಜನಾಂಗದ ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಜೊತೆಗೆ ಹಾಲುಮತದ ಆರಾಧನಾ ಕಲೆಗಳು, ಸಾಮಾಜಿಕ ಮತ್ತು ಧಾರ್ಮಿಕ ಆಚರಣೆ, ನಂಬಿಕೆ, ಸಂಪ್ರದಾಯಗಳು, ಹಾಲುಮತ ಸಂಸ್ಕೃತಿಯನ್ನು ಬಿಂಬಿಸುವುದರ ಜೊತೆಗೆ ಈ ಪರಿಸರದ ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ ಈ ಜನಾಂಗದ ಸಾಂಸ್ಕೃತಿಕ ಜೀವನದಲ್ಲಿ ಕಾಲ ಕಾಲಕ್ಕೆ ಉಂಟಾದ ತಲ್ಲಣಗಳನ್ನು ಸೂಕ್ಷ್ಮವಾಗಿ ವಿವೇಚಿಸುತ್ತಿದ್ದು ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ ಎಂದು ಸಾಹಿತಿ ಡಾ. ವ್ಹಿ.ಎಸ್.ಮಾಳಿ ಅಭಿಮತ ವ್ಯಕ್ತಪಡಿಸಿದರು.
ಅವರು ರಾಯಬಾಗ ತಾಲೂಕು ಸುಕ್ಷೇತ್ರ ಹಂದಿಗುಂದ ಗ್ರಾಮದಲ್ಲಿ ಜರಾಗುತ್ತಿರುವ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸಿದ್ದೇಶ್ವರ ಶಿವಯೋಗಿಗಳವರ ನೂತನ ಮಠದ ಲೋಕಾರ್ಪಣಾ ಕಾರ್ಯಕ್ರಮದ ಎರಡನೆಯ ದಿನದ ಮಧ್ಯಾಹ್ನದ ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವಹಿಸಿ ಮಾತನಾಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಸಾಹಿತಿ ಡಾ. ಮಧುಸೂಧನ ಬೀಳಗಿ ಇವರಿಂದ ರಚಿತವಾದ “ರಾಯಬಾಗ ಪರಿಸರದ ಹಾಲುಮತ ಪರಂಪರೆ” ಕೃತಿಯನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆ ಮಾಡಿದರು.
ಬೆಳಗಾವಿ ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಸಭೆಯ ಅಧ್ಯಕ್ಷತೆವಹಿಸಿದ್ದರು. ಹಂದಿಗುಂದ ಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮೀಜಿ, ಅತ್ತಿಗೇರಿಯ ಬಸವ ಧಾಮದ ಶ್ರೀ ಬಸವೇಶ್ವರಿ ತಾಯಿಯವರು ನೇತೃತ್ವವಹಿಸಿದ್ದರು. ಶರಣ ವೇದಿಕೆಯ ಮೇಲೆ ಪ್ರಭು ಮಹಾಸ್ವಾಮಿಗಳು, ಗುರುಪಾದ ಸ್ವಾಮಿಗಳು, ಬಸವಕಿರಣ ಸ್ವಾಮಿಗಳು, ಗುರುದೇವ ಸ್ವಾಮಿಗಳು, ಶಿವಕುಮಾರ ಸ್ವಾಮಿಗಳು, ವಿವೇಕದೇವರು ಉಪಸ್ಥಿತರಿದ್ದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಅಶೋಕ ಮಳಗಲಿ, ಪಣಪ್ಪ ತೇಲಿ, ಕೃಷ್ಣಪ್ಪ ಮಂಟೂರ, ಶರಣವಾಗಿ ವಾಹಿನಿ ಅಧ್ಯಕ್ಷರು ಐ.ಆರ್.ಮಠಪತಿ, ಸಾಹಿತಿ ಡಾ. ಅಶೋಕ ನರೋಡೆ, ಗೋಪಾಲ ಜಾಧವ, ಬೀರಪ್ಪ ತಡಸಲೂರ, ಜಿ.ಪಂ.ಮಾಜಿ ಸದಸ್ಯ ರಾಮನಗೌಡ ಪಾಟೀಲ, ರುದ್ರಪ್ಪ ಬದಶೆಟ್ಟಿ ರಮೇಶ ಬಂಡಿ, ಷಣ್ಮುಖ ತೇರದಾಳ, ಶ್ರೀಶೈಲ್ ಬಡಿಗೇರ, ಮುರಿಗೆಪ್ಪ ಅಂದಾನಿ, ರಾಯಬಾಗ ತಾಲೂಕು ಕದಳಿ ವೇದಿಕೆಯ ಸರ್ವ ಸದಸ್ಯರು ಹಾಗೂ ಶರಣರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜೆ.ಆರ್.ಮೊಗುವೀರ ಕಾರ್ಯಕ್ರಮ ನಿರೂಪಿಸಿದರು. ಎಂ.ಜಿ.ಬಾಳೋಜಿ ವಂದಿಸಿದರು.