ವರದಿ :ಸಚಿನ್ ಕಾಂಬ್ಳೆ
ಬೆಳಗಾವಿ
ಅಥಣಿ;-ಇಂದಿನ ದಿನಗಳಲ್ಲಿ ಮಕ್ಕಳು ಪ್ರತಿಯೊಂದನ್ನು ಅನುಕರಣೆ ಮಾಡುತ್ತಿದ್ದಾರೆ. ಮಕ್ಕಳ ಬಗ್ಗೆ ಜಾಗೃತಿವಹಿಸಬೇಕು. ತಮ್ಮ ಮಕ್ಕಳ ಹಿತ ದೃಷ್ಠಿಯಿಂದ ಪಾಲಕರು ಹಿತಮಿತವಾಗಿ ಮೊಬೈಲ್ ಬಳಸಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ದುಷ್ಪರಿಣಾಮಗಳೆ ಹೆಚ್ಚಾಗುತ್ತವೆಂದು ಬಬಲಾದಿ ಮೂಲ ಸಂಸ್ಥಾನ ಮಠದ ಚಕ್ರವರ್ತಿ ಶ್ರೀ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ರವಿವಾರ ಜರುಗಿದ ಗಡ್ಯಾ ಮುತ್ಯಾನ ಜಾತ್ರೆಯ ಅಂಗವಾಗಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡುತ್ತಾ ತಂದೆ ತಾಯಿಗಳ ಸೇವೆ ಮಾಡುವವರಿಗೆ ಒಳ್ಳೆಯ ಭವಿಷ್ಯವಿದೆ. ಭಕ್ತಿಯಿಂದ ಗುರು ಹಿರಿಯರ ಸೇವೆ ಮಾಡುವವರು ನಿಜ ಜೀವನದಲ್ಲಿ ಯಶ್ವಿಯಾಗುತ್ತಾರೆ. ಗ್ರಾಮದ ಚಂಡಕಿ ಮನೆತನದ ಗಡಾಮ ಮುತ್ಯಾ ಅವರ ಕಂಬಳಿಗೆ ವಿಶೇಷವಾದ ಶಕ್ತಿಯಿದೆ. ಕಂಬಳಿ ಮೂಲಕ ಹಲವಾರು ಪವಾಡಗಳನ್ನು ಮಾಡಿರುವ ಅವರ ಶಕ್ತಿ ಗ್ರಾಮದಲ್ಲಿ ನಿರಂತರವಾಗಿ ಮುಂದುವರೆಯಲಿದೆ. ಗ್ರಾಮದಲ್ಲಿ ಇಂದು ಪ್ರತಿಯೊಂದು ಕಾರ್ಯಗಳು ನಡೆಯಲು ಕಂಬಳಿಯೇ ಬೇಕು. ಅಂಬಲಿ ಕಂಬಳಿ ಆಸ್ತಿ ಮಿಕ್ಕಿದೆಲ್ಲ ಜಾಸ್ತಿ ಎಂಬುದು ನಿಜವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ಗ್ರಾಮದ ಗಡಾಮ ಮುತ್ಯಾ ಅವರ ಜೀವನ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಬಬಲಾದಿ ಸಂಪ್ರದಾಯದ ಹಾದಿಯಲ್ಲಿ ಸಾಗಿದ ಗಡಾಮ ಮುತ್ಯಾ ಅನೇಕ ಪವಾಡಗಳನ್ನು ಮಾಡಿರುವುದು ಇತಿಹಾಸದಲ್ಲಿ ಶಾಶ್ವತವಾಗಿ ಉಳಿದಿದೆ. ಬಬಲಾದಿ ಮಠದ ಕಾಲಜ್ಞಾನ ಎಂದೆಂದಿಗೂ ಸತ್ಯವಾಗಿದೆ. ಅವರು ಹೇಳಿದ ಎಲ್ಲ ನುಡಿಗಳು ನಿಜವಾಗಿವೆ. ಮುಂದಿನ ನೂರಾರು ವರ್ಷಗಳ ಭವಿಷ್ಯದ ಕಾಲ ಜ್ಞಾನ ದೊರಕುವುದು ಬಬಲಾದಿ ಮಠದಿಂದ ಮಾತ್ರ ಸಾಧ್ಯವಾಗಿದೆ. ಬಬಲಾದಿ ಮಠದ ಪೂಜ್ಯರು ನಂಬಿದ ಭಕ್ತರ ಕೈ ಬಿಡುವುದಿಲ್ಲ. ಬಬಲಾದಿ ಸಾದಾಶಿವ ಅಜ್ಜನವರು ಯಾರಿಗೂ ಕುಡಿಯಿರಿ ಎಂದು ಹೇಳಿಲ್ಲ ಆದರೇ ಭಕ್ತರು ಅವರ ಹೆಸರು ಹೇಳಿ ಮಧ್ಯಪಾನ ಮಾಡಬಾರದೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಾವಳಗಿಯ ಶ್ರೀ ಪರಶುರಾಮ ಗುರುಜಿ, ಪೆಟ್ಲೂರದ ಶ್ರೀ ಪರಶುರಾಮ ಶರಣರು, ಆಧ್ಯಾತ್ಮಿಕ ಚಿಂತಕ ಪ್ರಭು ಪೂಜಾರಿ, ಬಸಪ್ಪ ಚಂಡಕಿ, ಉದ್ಯಮಿ ಮುರುಗೇಶ ಕುಮಠಳ್ಳಿ, ರಮೇಶಗೌಡ ಪಾಟೀಲ, ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಪರಟಿ, ಮಲ್ಲಪ್ಪ ಹಂಚಿನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮುಂಜಾನೆ ಗಡಾಮ ಮುತ್ಯಾನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೇ ಸಿದ್ಧಲಿಂಗ ಬಸಪ್ಪ ಚಂಡಕಿ ಅವರನ್ನು ಗಡಾಮ ಮುತ್ಯಾನ ಹೆಸರಿನಲ್ಲಿ ದೇವರ ಸೇವೆ ಮಾಡಲು ಸಮಾಜಕ್ಕೆ ಪೂಜ್ಯರ ಸಮ್ಮುಖದಲ್ಲಿ ವಿದಿವಿಧಾನ ಪ್ರಕಾರ ಬಿಡಲಾಯಿತು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಹಿಳೆಯರು ಕುಂಭ ಕಳಶ ಹೊತ್ತು ಸಕಲ ವಾದ್ಯ ಮೇಳದೊಂದಿಗೆ ಬಬಲಾದಿ ಮಠದ ಪೂಜ್ಯರನ್ನು ಬರಮಾಡಿಕೊಂಡರು.