ವಿವಿಧ ಚರ್ಚೆಗಳ ನಂತರ ಅದ್ದೂರಿಯಾಗಿ ಜಯಂತ್ಯೋತ್ಸವ ಆಚರಿಸಲು ನಿರ್ಧಾರ.
ವರದಿ: ಸಂಗಮೇಶ ಹಿರೇಮಠ ಮುಗಳಖೋಡ.
ಮುಗಳಖೋಡ: ಜಂಗಮ ಕುಲಕ್ಕೆ ಜೋಳಿಗೆ ಕಾಯಕವನ್ನು ಕೊಟ್ಟ ಮೂಲಪುರುಷ ಹಾಗೂ ವೀರಶೈವ ಧರ್ಮ ಸಂಸ್ಥಾಪಕ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ರಾಯಬಾಗ ತಾಲೂಕಿನಲ್ಲಿ ಅದ್ದೂರಿಯಾಗಿ ಆಚರಿಸಲು ಗುರುವಾರ ಹಾರೂಗೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಹಾರೂಗೇರಿಯ ಶ್ರೀ ಆಯ್.ಆರ್. ಮಠಪತಿ ಅವರ ನಿವಾಸದಲ್ಲಿ ರಾಯಬಾಗ ತಾಲೂಕಿನ ಎಲ್ಲ ಜಂಗಮ ಬಂಧುಗಳು ಸೇರಿ ಕಾರ್ಯಕ್ರಮದ ಕುರಿತು ವಿವಿಧ ರೀತಿಯ ಚರ್ಚೆ ಮಾಡಿ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಫಾಲ್ಗುಣ ಮಾಸ, ಶುಕ್ಲ ಪಕ್ಷದ, ತ್ರಯೋದಶ ದಿನ ಆಚರಿಸುವ ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ರಾಯಬಾಗ ತಾಲೂಕಿನ ಎಲ್ಲ ಜಂಗಮ ಸಮಾಜದ ಸದಸ್ಯರೆಲ್ಲರೂ ಸೇರಿಕೊಂಡು ಈ ವರ್ಷ ಗುರುವಾರ ಮಾರ್ಚ್ 16 ರಂದು ಹಾರೂಗೇರಿ ಶ್ರೀ ಕಾಳಿಕಾ ದೇವಿಯ ಸಭಾ ಭವನದಲ್ಲಿ ಅತಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.
ಮಾರ್ಚ್ 16 ರಂದು ನಡೆಯುವ ಶ್ರೀ ರೇಣುಕಾಚಾರ್ಯ ಜಯಂತಿಯ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ಬೇಡ ಜಂಗಮ ಸಮಾಜದ ಮುಖಂಡರು, ಹಾಗೂ ರಾಯಬಾಗ್ ತಾಲೂಕಿನ ಎಲ್ಲ ಬೇಡ ಜಂಗಮ ಬಂಧುಗಳು ಸೇರಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಸೇರುವ ನಿರೀಕ್ಷೆ ಇದೆ ಎಂದು ಶ್ರೀ ಕಾಡಯ್ಯಾ ಹಿರೇಮಠ ತಿಳಿಸಿದ್ದಾರೆ.
ಮಾರ್ಚ್ 16 ರಂದು ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ವಾದ್ಯ ಮೇಳಗಳೊಂದಿಗೆ ಆರತಿ, ಕುಂಭ ಹೊತ್ತ ಮಹಿಳೆಯರ ಉಪಸ್ಥಿತಿಯಲ್ಲಿ ಶ್ರೀ ರೇಣುಕಾಚಾರ್ಯರ ಭಾವಚಿತ್ರ ಹೊತ್ತ ಬೆಳ್ಳಿ ಲೇಪಿತ ರಥ ಹಾರೂಗೇರಿ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸುವುದರೊಂದಿಗೆ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತೋತ್ಸವವನ್ನು ಆಚರಿಸಲಾಗುವುದೆಂದು ಜಂಗಮ ಸಮಾಜದ ಮುಖಂಡರು ತಿಳಿಸಿದರು.
ರಾಯಬಾಗ ತಾಲೂಕಿನ ಎಲ್ಲ ಬೇಡ ಜಂಗಮ ಸಮಾಜದ ಪ್ರತಿಯೊಬ್ಬ ಸದಸ್ಯರು ಕೂಡಾ ತನು, ಮನ, ಧನದಿಂದ ಭಾಗಿಯಾಗಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಕಾಡಯ್ಯಾ ಹಿರೇಮಠ, ಮುಪ್ಪಯ್ಯಾ ಹಿರೇಮಠ, ಗಣೇಶ್ ಹಿರೇಮಠ, ಸಿದ್ದಯ್ಯಾ ಹಿರೇಮಠ, ಶಿವಯ್ಯ ಹಿರೇಮಠ, ಮಲ್ಲಯ್ಯಾ ಹಿರೇಮಠ, ಸಂಗಯ್ಯಾ ಹಿರೇಮಠ, ರಾಚಯ್ಯಾ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ಶ್ರೀಶೈಲ ಹಿರೇಮಠ, ಚನ್ನವೀರಯ್ಯಾ ಹಿರೇಮಠ ಸೇರಿದಂತೆ ರಾಯಬಾಗ ತಾಲೂಕಿನ ವಿವಿಧ ಗ್ರಾಮಗಳ ಜಂಗಮ ಸಮಾಜದ ಮುಖಂಡರು ಭಾಗಿಯಾಗಿದ್ದರು.