ವರದಿ – ಅಬ್ದುಲಜಬ್ಬಾರ, ಚಿಂಚಲಿ,
ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ – ಹೆಚ್ಚುವರಿ ಆಯುಕ್ತ ಡಾ.ಬಿ. ವ್ಹಿ ಮುರಳಿಕೃಷ್ಣ
ಅಥಣಿ : ದೇಶದ ಆರ್ಥಿಕ ಸುಧಾರಣೆ ಹಾಗೂ ಅಭಿವೃದ್ಧಿಯಲ್ಲಿ ಆದಾಯ ತೆರಿಗೆ ಇಲಾಖೆಯ ಮಾತ್ರ ಮಹತ್ತರವಾಗಿದ್ದು, ಭಾರತದಲ್ಲಿ ಹೆಚ್ಚಿನ ಆದಾಯ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂದು ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ಬಿ. ವಿ ಮುರಳಿಕೃಷ್ಣ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಅಥಣಿ ಮತ್ತು ರಾಯಬಾಗ ತಾಲೂಕಿನ ತೆರಿಗೆ ಸಲಹೆಗಾರರ ಸಂಘ, ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಟ್ಯಾಕ್ಸ್ ಪ್ರಾಕ್ಷಿಷನರ್ಸ್ ಇಂಡಿಯಾ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತೆರಿಗೆ ಸಲಹೆಗಾರರ ಸಮಾವೇಶ ಹಾಗೂ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಾಪಾರಸ್ಥರು ಮತ್ತು ಉದ್ಯಮಿಗಳು ಸರ್ಕಾರಕ್ಕೆ ಕಾನೂನು ಚೌಕಟ್ಟಿನಲ್ಲಿ ತೆರಿಗೆ ಸಂದಾಯ ಮಾಡಲು ತೆರಿಗೆ ಸಲಹೆಗಾರರ ಮಾರ್ಗದರ್ಶನ ಮಹತ್ತರವಾಗಿರುತ್ತದೆ. ಇಂತಹ ಸಮಾವೇಶಗಳನ್ನು ಆಯೋಜಿಸುವ ಮೂಲಕ ತೆರಿಗೆ ಸಲಹೆಗಾರರು ಸರ್ಕಾರ ರೂಪಿಸಿದ ಹೊಸ ತಿದ್ದುಪಡಿಗಳನ್ನು ಮತ್ತು ತೆರಿಗೆ ಕಾನೂನುಗಳನ್ನು ಅರಿತುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದ ಅವರು ಇತ್ತೀಚಿಗೆ ತಿದ್ದುಪಡಿಯಾದ ಜಿಎಸ್‌ಟಿ ಹೊಸ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ತೆರಿಗೆ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಡಾ. ಎಂ ಜೆ ರಮೇಶ್ ಬಾಬು ಮಾತನಾಡಿ ಆದಾಯ ತೆರಿಗೆ ಪಾವತಿಸುವ
ಪ್ರತಿಯೊಬ್ಬ ವ್ಯಾಪಾರಸ್ಥರು ತೆರಿಗೆ ಸಲಹೆಗಾರರ ಮಾರ್ಗದರ್ಶನ ಪಡೆದುಕೊಳ್ಳುವುದು ಅಗತ್ಯ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ಪಾವತಿಸಿದ ಬಗ್ಗೆ ಪರಿಶೀಲನೆ ನಡೆಸುವಾಗ ಅನುಸರಿಸಬೇಕಾದ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಅನೇಕ ಸಲಹೆಗಳನ್ನ ನೀಡಿದರು.
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಟ್ಯಾಕ್ಸ್ ಪ್ರಾಕ್ಷಿಷನರ್ಸ್ನ ಚೇರ್ಮನ್ ಶ್ರೀಧರ ಪಾರ್ಥಸಾರಥಿ ತೆರಿಗೆ ಸಲಹೆಗಾರರ ಜೊತೆ ಸಂವಾದ ನಡೆಸಿ ಅವರ ಪ್ರಶ್ನೋತ್ತರಗಳಿಗೆ ಉತ್ತರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಥಣಿ ಹಾಗೂ ರಾಯಬಾಗ ತಾಲೂಕಿನ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ರವಿ ಕೋಟಿ ಮಾತನಾಡಿ ಗ್ರಾಮೀಣ ಮತ್ತು ತಾಲೂಕಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ತೆರಿಗೆ ಸಲಹೆಗಾರರಿಗೆ ತೆರಿಗೆಯ ಹೊಸ ಕಾನೂನು ಮತ್ತು ತಿದ್ದುಪಡಿ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಸಮಾವೇಶ ಮತ್ತು ಕಾರ್ಯಗಾರಗಳನ್ನು ನಡೆಸಲಾಗುತ್ತದೆ. ಅಥಣಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ ಈ ಸಮಾವೇಶದಲ್ಲಿ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಿಂದ ಅನೇಕ ತೆರಿಗೆ ಸಲಹೆಗಾರರು ಭಾಗವಹಿಸುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಿದ್ದೀರಿ. ತೆರಿಗೆ ಸಲಹೆಗಾರರ ಪ್ರಶ್ನೋತ್ತರಗಳಿಗೆ ಅನೇಕ ಸಲಹೆ ಸೂಚನೆಗಳನ್ನು ನೀಡಿದ ತೆರಿಗೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ತೆರಿಗೆ ಸಲಹೆಗಾರರಾದ ಸತ್ಯಪ್ಪ ಲಟ್ಟೆ, ರಮೇಶ ಸಿಂದಗಿ, ಮತ್ತು ಮುರುಗೇಶ ಅಂದಾನಿಮಠ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ಈ ವೇಳೆ ತೆರಿಗೆ ಇಲಾಖೆಯ ಸಹಾಯಕ ಅಯುಕ್ತರಾದ ಬಿ ಎಸ್ ಸುಂಟೆ, ಎಂ ಎ ಹುನಕುಂಟೆ, ರಿಯಾಜ್ ಪಿರಿಜಾದೆ, ಸಂಗಮೇಶ ಕುಂಟೋಜಿ, ತೆರಿಗೆ ಸಲಹೆಗಾರರ ಸಂಘದ ಪದಾಧಿಕಾರಿಗಳಾದ ಮುರುಗೇಶ ಹಿರೇಮಠ, ಬಿ ಎಂ ಪೂಜಾರಿ, ಸಂತೋಷ್ ಅಂದಾನಿಮಠ, ಮಲ್ಲಿಕಾರ್ಜುನ ಸಿಂದಗಿ, ಸುಭಾಷ್ ಕಮತೆ, ಹರ್ಷ ದೇಶಪಾಂಡೆ, ಚೇತನ್ ಮೆಣಸಿ, ರಾಜು ಸಿಂಗೆ, ಮಹೇಶ ಮುಂಗರವಾಡಿ, ಸಂತೋಷ್ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಬಿ ಎಂ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ದೇಶಿಂಗೆ ಕಾರ್ಯಕ್ರಮ ನಿರೂಪಿಸಿದರು. ಮುರುಗೇಶ ಹಿರೇಮಠ ವಂದಿಸಿದರು.