ಬೆಳಗಾವಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ. ಎಂ. ಕೃಷ್ಣ , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಂಜಾರ (ಲಂಬಾಣಿ) ಭೋವಿ, ವಡ್ಡರ, ಕೊರ್ಮ, ಕೊರ್ಚ ಮೊದಲಾದ ಜಾತಿಗಳನ್ನು ಅಸಂವಿಧಾನಿಕವಾಗಿ ಎಸ್ಸಿ ಪಟ್ಟಿಗೆ ಸೇರಿಸಿ ಒಳಮೀಸಲಾತಿ ನೀಡಿ ಹಿಂದುಳಿದ ಜಾತಿಗಳನ್ನು ಚುನಾವಣೆಗೆ ಮುನ್ನ ಸೆಳೆಯಲು ಮುಂದಾಗಿದ್ದಾರೆ. ಇದು ಸಂಪೂರ್ಣ ಕಾನೂನು ಬಾಹಿರ ಮತ್ತು ಸಂವಿಧಾನ ಬಾಹಿರ ಕೃತ್ಯ. ಇದರ ವಿರುದ್ಧ ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಒಕ್ಕೂಟ ಮಹೇಂದ್ರ ಕುಮಾರ ಮಿತ್ರ, ಮಾರುತಿ ರಾವ್ ಜಂಬಗಿ ಯಾದಗಿರಿ, ದೇವಮಿತ್ರ ರಾಯಚೂರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಜಾತಿಗಳನ್ನು ಎಸ್ ಸಿ ಪಟ್ಟಿಯಿಂದ ಹೊರಗಿಡುವಂತೆ ಒತ್ತಾಯಿಸಿದ್ದಾರೆ.
ಅದರಂತೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, 4 ವಾರಗಳಲ್ಲಿ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಿದೆ. ಈ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ಹೊರಗಿಡುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆಯೋಗ ಸೂಚಿಸಿತ್ತು. ಆದರೆ ಈ ಜಾತಿಗಳ ಶಾಸಕರು ಮತ್ತು ಸರ್ಕಾರದ ಒತ್ತಡಕ್ಕೆ ಮಣಿದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಪ್ರಸ್ತಾವನೆಗಳನ್ನು ನೀಡುವುದಾಗಿ ತಿಳಿಸಿದ ನಂತರ ಪ್ರತಿಕ್ರಿಯೆ ನೀಡುವುದಾಗಿ ಹೇಳಿ ಸುತ್ತೋಲೆ ಹೊರಡಿಸಲಾಗಿದೆ. ಕೃಷ್ಣ ಅವರು ಇಂತಹ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಯಾವುದೇ ಜಾತಿಯನ್ನು ನಿರಂಕುಶವಾಗಿ ಎಸ್ಸಿ ಪಟ್ಟಿಗೆ ಸೇರಿಸುವಂತಿಲ್ಲ. ಅದಕ್ಕಾಗಿ ನಿರ್ದಿಷ್ಟ ನಿಯಮಗಳು ಮತ್ತು ಕಾನೂನುಗಳಿವೆ. ಇದನ್ನು ಉಲ್ಲಂಘಿಸಿ ಮುಖ್ಯಮಂತ್ರಿ ಬೊಮ್ಮಾಯಿ ಅಥವಾ ಯಡಿಯೂರಪ್ಪ ಈ ಜಾತಿಗಳನ್ನು ಎಸ್ಸಿ ಪಟ್ಟಿಗೆ ಸೇರಿಸುವಂತಿಲ್ಲ. ಇಷ್ಟು ಪ್ರೀತಿ ಇದ್ದರೆ ಈ ಜಾತಿಗಳನ್ನು ಲಿಂಗಾಯತ ಅಥವಾ ಇತರೆ ಮುಂದುವರಿದ ಜಾತಿಗಳ ಪಟ್ಟಿಗೆ ಏಕೆ ಸೇರಿಸಲಿಲ್ಲ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಪದಾಧಿಕಾರಿಗಳು ಉಪಸ್ಥಿತರಿದ್ದರು.