ಗಂಗಾವತಿ:ಗಂಗಾವತಿ ವಿಧಾನ ಸಭಾ ಕ್ಷೇತ್ರದ ಚುನಾವಣೆ ಸಮೀಪಿಸುತ್ತಿದ್ದರೂ,ಕ್ಷೇತ್ರದಲ್ಲಿ ಸುಮಾರು 16 ಸಾವಿರಕ್ಕೂ ಹೆಚ್ಚು ಇರುವ ವೀರಶೈವ ಜಂಗಮರ ನಡೆ,ಯಾವ ಪಕ್ಷದ ಕಡೆ ಎಂಬುದು ಸ್ಪಷ್ಟವಾಗಿಲ್ಲ.
ವೀರಶೈವ ಉಪ ಪಂಗಡವಾದ ಬಣಜಿಗ ಸಮಾಜದ ವ್ಯಕ್ತಿಗಳಿಂದ ಕಳೆದ ವರ್ಷ ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ವಕೀಲರ ಮೇಲೆ ನಡೆದ ಹಲ್ಲೆಯೇ ಇದಕ್ಕೆ ಮೂಲ ಕಾರಣ.
ಅದೂ ಅಲ್ಲದೇ ತಿಪ್ಪೇರುದ್ರಸ್ವಾಮಿಯವರ ಹಲ್ಲೆಗೂ ಮುಂಚೆ ನಡೆದ ಘಟನೆಯನ್ನು ಚಿತ್ರೀಕರಿಸಿ,ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಟ್ಟಿದ್ದು ,ಇಡೀ ಕ್ಷೇತ್ರದಲ್ಲಿನ ಜಂಗಮ ಸಮಾಜದವರಿಗೆ ಅದು ತಲುಪಿ ಜಂಗಮರು, ಬಣಜಿಗ ಸಮಾಜದವರ ಮೇಲೆ ಮುನಿಸಿಕೊಂಡಿರುವುದು ಮಾತ್ರವಲ್ಲ ಹೆಚ್ಚು ನೊಂದು ಕೊಂಡಿದ್ದಾರೆ.ಶಾಸಕರಾಗಿದ್ದ ಪರಣ್ಣ ಮುನವಳ್ಳಿ ಈ ಘಟನೆ ನಡೆಯುವ ಕೆಲವೇ ಕೆಲವು ಗಂಟೆಗಳ ಮುನ್ನ ಗಂಗಾವತಿಯಿಂದ ಬೇರೆ ಕಡೆ ಹೋಗಿ,ಕುಳಿತಿದ್ದರಿಂದ ಪಲಾಯನವಾದದ ಅಪಾದನೆಗೆ ಗುರಿಯಾಗಿದ್ದಾರೆ.
ಬಹುತೇಕ ಭಾರತೀಯ ಜನತಾ ಪಕ್ಷದ ಬೆಂಬಲಿಗರಾಗಿದ್ದ ಜಂಗಮರು, ಈಗ ತಟಸ್ಥ ಭಾವನೆ ತೆಳೆದಿದ್ದಾರೆ.ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಪರಣ್ಣ ಮುನವಳ್ಳಿಯವರ ಕರೆಗೂ ನ್ಯಾಯವಾದಿ ತಿಪ್ಪೇರುದ್ರಸ್ವಾಮಿ ಸ್ಪಂದಿಸಿಲ್ಲ.ಪರಣ್ಣ ಮುನವಳ್ಳಿಯವರ ಸಹೋದರ ಶಂಕ್ರಣ್ಣ ಮುನವಳ್ಳಿಯವರ ಸಂಧಾನದಿಂದ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸಿದ್ರಾಮಸ್ವಾಮಿ, ಮೃದು ಧೋರಣೆ ತೆಳೆದಿದ್ದಾರೆನ್ನಲಾಗಿದೆ.
ಕೊಪ್ಪಳ ಜಿಲ್ಲಾ ಬಿ.ಜೆ.ಪಿ.ಪಕ್ಷದ ಕಾರ್ಯಧ್ಯಕ್ಷರಾಗಿ ನೇಮಕವಾಗಿರುವ ಎಚ್.ಗಿರೆಗೌಡ ವಕೀಲರು ಮತ್ತು ಸಂಸದ ಸಂಗಣ್ಣ ಕರಡಿ ಈ ವಿಷಯವಾಗಿ ಮಧ್ಯೆ ಪ್ರವೇಶಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಕಲ್ಮಠದ ಪ್ರಕರಣದಲ್ಲಿಯೂ ನಿರ್ಲಕ್ಷ ತೋರಿದ್ದು ಅಲ್ಲದೆ,ಚುನಾವಣೆಯ ಕಾರಣಕ್ಕಾಗಿ ಕಲ್ಮಠ ಸ್ವಾಮಿಯ ಜೊತೆ ಮುನವಳ್ಳಿ ಈಗ ಕೈ ಜೋಡಿಸಿದ್ದು ಮತ್ತು ಕಳೆದ ಚುನಾವಣೆಯಲ್ಲಿ ಕಲ್ಮಠದ ಸ್ವಾಮಿಯ ವಿಷಯವಾಗಿ ನಡೆಯುತ್ತಿದ್ದ ಸತ್ಯಾಗ್ರಹವನ್ನು ಕೈ ಬಿಡಿಸಿ, ಚುನಾವಣೆಯ ನಂತರ ಶಾಸಕರಾದ ಪರಣ್ಣ ಅವರನ್ನು, ಬಸವ ದಳದವರೂ ಸೇರಿದಂತೆ ಇತರ ಹೋರಾಟಗಾರರು ಭೇಟಿಯಾಗಿ ಕಲ್ಮಠದ ವಿಷಯ ಪ್ರಸ್ಥಾಪಿಸಿದಾಗ “ನೀವೇ ಸಭೆ ಕರೆಯಿರಿ.ನಾನು ಶಾಸಕ. ಸಮಾಜದ ಮುಖಂಡನಲ್ಲ” ಎಂದು ಮುಖಕ್ಕೆ ಹೊಡೆದಂತೆ ಮಾತನಾಡಿರುವುದು, ಹೋರಾಟಗಾರರೂ ಮುನಿಸಿಕೊಳ್ಳಲು ಕಾರಣವಾಗಿದೆ.
ಇತ್ತ ಜಂಗಮ ಸಮಾಜದ ಪ್ರಮುಖರು,ಜಂಗಮ ಸಮಾಜದ ಗೌರವ ಅಧ್ಯಕ್ಷ ಮತ್ತು ಶ್ರೀ ವೀರಮಹೇಶ್ವರ ಪತ್ತಿನ ಸಹಕಾರ ನಿಯಮಿತ ಬ್ಯಾಂಕಿನ ಅಧ್ಯಕ್ಷರಾಗಿರುವ ನ್ಯಾಯವಾದಿ ಅಶೋಕಸ್ವಾಮಿ ಹೇರೂರ ಅವರನ್ನು ಸಂಪರ್ಕಿಸುತ್ತಿದ್ದು ,ಯಾವ ಪಕ್ಷವನ್ನು ಬೆಂಬಲಿಸಬೇಕು ಸ್ಪಷ್ಟ ಆದೇಶ ನೀಡಿ ಎಂದು ಒತ್ತಾಯಿಸುತ್ತಿದ್ದಾರಂತೆ.
ಗಂಗಾವತಿ ವಿಧಾನ ಸಭಾ ಕೇತ್ರದ ಅಭ್ಯರ್ಥಿ ಬಿ.ಜೆ.ಪಿ.ಯ ಪರಣ್ಣ ಮುನವಳ್ಳಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಜನರ್ಧನ ರೆಡ್ಡಿ ಮತ್ತು ಜೆ.ಡಿ.ಎಸ್.ಪಕ್ಷದ ಎಚ್.ಆರ್. ಚನ್ನಕೇಶವ ಮತ್ತು ಅಖಿಲ ಭಾರತ ವೀರಶೈವ ಮಹಾ ಸಭಾದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಕಳಕನಗೌಡ ಕಲ್ಲೂರ ಅಶೋಕಸ್ವಾಮಿ ಹೇರೂರ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಈ ಮಧ್ಯೆ ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಅಶೋಕಸ್ವಾಮಿ ಹೇರೂರ ಅವರನ್ನು ಸಂಪರ್ಕಿಸಿ,ತಮ್ಮನ್ನು ಬೆಂಬಲಿಸಲು ಕೋರಿದ್ದಾರೆ.ಕಾಂಗ್ರೆಸ್ ಪಕ್ಷದ ನಾಯಕಿ ಎಚ್.ಎಮ್.ಶೈಲಜಾ ಈ ಬಗ್ಗೆ ಹೇರೂರ ಅವರೊಡನೆ ಚರ್ಚಿಸಿದ್ದಾರೆ.
ತಮ್ಮನ್ನು ಸಂಪರ್ಕಿಸುವ ಜಂಗಮ ಸಮಾಜದ ಮುಖಂಡರಿಗೆ ಕಾಯ್ದು ನೋಡೋಣ ಎಂಬ ಅಭಿಪ್ರಾಯವನ್ನು ಅಶೋಕಸ್ವಾಮಿ ಹೇರೂರ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.ಹೀಗಾಗಿ ಜಂಗಮರ ನಡೆ ಯಾವ ಪಕ್ಷದ ಕಡೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.






