ಕೃಷ್ಣಾ ತೀರದ ಬಹುಮುಖ ಪ್ರತಿಭೆ:ಡಾ.ಬಸವರಾಜ ಹಳಕಲ್

Share the Post Now

ದಕ್ಷಿಣದ ಗಂಗೆ ಕೃಷ್ಣಾ ತೀರದಲ್ಲಿರುವ ಸಿದ್ದಾಪುರವು ರಾಯಬಾಗ ತಾಲ್ಲೂಕಿನ ಕಟ್ಟ ಕಡೆಯಲ್ಲಿ ಬರುವ ಪುಟ್ಟ ಗ್ರಾಮ.ಗ್ರಾಮ ಚಿಕ್ಕದಾದರೂ ಈ ನೆಲದಲ್ಲಿ ಅಪರೂಪದ ಪ್ರತಿಭೆಗಳಿಗೆ ಕೊರತೆಯೇ ಇಲ್ಲ.ಇಂತಹ ಅಪರೂಪದ ಎಲೆ ಮರೆಯ ಕಾಯಿ ಬಹುಮುಖ ಪ್ರತಿಭೆಯ ಡಾ.ಬಸವರಾಜ ಹಳಕಲ್ ಈ ಭಾಗದಲ್ಲಿ ಎಲ್ಲರ ನಾಲಿಗೆಯ ಮೇಲೆ ಜೇನಾಗಿದ್ದಾರೆ.ವೃತ್ತಿಯಿಂದ ಖಾಸಗಿ ವೈದ್ಯರಾಗಿ ಸೇವೆಯಲ್ಲಿರುವ ಇವರು ಪ್ರವೃತ್ತಿಯಲ್ಲಿ ಓರ್ವ ಆದರ್ಶ ಕವಿಯಾಗಿ ಗುರುತಿಸಿಕೊಂಡಿದ್ದಾರೆ.

ವೃತ್ತಿ ಪ್ರವೃತ್ತಿಗಳೆರಡರಲ್ಲಿಯೂ ಯಶಸ್ಸಿನ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಕಳೆದ 20 ವರುಷ ಪರ್ಯಂತ ಗ್ರಾಮೀಣ ಭಾಗದಲ್ಲಿದ್ದುಕೊಂಡು ಜನಪರ ಕಾಳಜಿಯನ್ನು ಇರಿಸಿಕೊಂಡು ಸಂಚಾರಿ ವೈದ್ಯರಾಗಿ ಬಡ ಬಗ್ಗರ ಸೇವೆ ಮಾಡಿದ್ದಾರೆ. ಇಂದಿಗೂ ಮಾಡುತ್ತಿದ್ದಾರೆ. ಪ್ರಾಮಾಣಿಕತೆಯೇ ಇವರ ಮೂಲ ಬಂಡವಾಳ. ಮಾನವೀಯತೆಯೇ ಇವರ ನೈಜ ಆಸ್ತಿ. ಸತ್ಸಂಗ ಇವರು ತಮ್ಮ ಜೀವನದ ಅವಿಭಾಜ್ಯ ಅಂಗ ಮಾಡಿಕೊಂಡಿದ್ದಾರೆ. “ಸೇವೆ ಮಾಡುವ ಮೊದಲು ಪ್ರೀತಿಸುವುದನ್ನು ಕಲಿ” ಎಂದು ಹೇಳಿದ ಡಾ.ಅಂಬೇಡ್ಕರ್ ಅವರ ನುಡಿಯನ್ನು ಚೆನ್ನಾಗಿ ಅರಿತು ನಿಜ ಜೀವನದಲ್ಲಿ ಬಾಬಾಸಾಹೇಬರು ಹೇಳಿದ ಮಾತುಗಳನ್ನು ಮೈಗೂಡಿಸಿಕೊಂಡು, ಸಕಲರಿಗೂ ಲೇಸೆನಿಸಿಕೊಂಡು ಸಾರ್ಥಕ ಜೀವನ ನಡೆಸುತ್ತಿದ್ದಾರೆ.ಕೆಳವರ್ಗ ಜನಾಂಗದಲ್ಲಿ ಜನಿಸಿದ್ದರೂ ಸಹ ಸಜ್ಜನರ ಸಂಘದಲ್ಲಿ ಇದ್ದುಕೊಂಡು ಗುರುಪಥದಲ್ಲಿ ಸಾಗಿ ಉತ್ತಮ ಶರಣಜೀವಿಯಾಗಿದ್ದಾರೆ. ಕಲಾ ವಿಭಾಗದಲ್ಲಿ ರಾಯಬಾಗ ಪದವಿ ಕಾಲೇಜಿನಲ್ಲಿ ಬಿ.ಎ. ಸ್ನಾತಕವರೆಗೆ ಮಾತ್ರ ಓದಿದ ಇವರು ಪದವಿ ಹಂತದಲ್ಲಿಯೇ ನಾಡಿನ ಹೆಸರಾಂತ ಬಂಡಾಯ ಸಾಹಿತಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಯ್.ಬಿ.ಹಿಮ್ಮಡಿ, ಹಾಗೂ ಬಾಗೆನಾಡಿನ ಪ್ರೇಮ ಕವಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶಿವಾನಂದ ಬೆಳಕೂಡ ರಂತಹ ಕ್ರಿಯಾಶೀಲ ಗುರುಗಳ ಗಾಢ ಪ್ರಭಾವಕ್ಕೆ ಒಳಗಾಗಿ ಕಾವ್ಯ ಬರೆಯುವ ಗೀಳು ಹಚ್ಚಿಕೊಂಡು ಆಗಿನ ಕಾಲದಲ್ಲಿಯೇ ಉದಯೋನ್ಮುಖ ಕವಿಯಾಗಿ ಗುರುತಿಸಿಕೊಂಡು ಸದುವಿನಯದ ಸ್ನೇಹ ಜೀವಿಯಾಗಿದ್ದಾರೆ.



ಪ್ರತಿಭೆ,ವಿನಯ,ಹಾಗೂ ಸೃಜನಶೀಲತೆಗಳು ಡಾ. ಬಸವರಾಜರಲ್ಲಿ ಕೂಡಲಸಂಗಮವಾಗಿವೆ.ದಲಿತ ಜನಾಂಗದಲ್ಲಿ ಹುಟ್ಟಿ,ದಲಿತರ ನೋವು ಯಾತನೆಗಳನ್ನು ತಮ್ಮ ಕಾವ್ಯದಲ್ಲಿ ಚೆನ್ನಾಗಿ ಭಟ್ಟಿ ಇಳಿಸುವ ಇವರೊಳಗೊಬ್ಬ ಅಪೂರ್ವ ಕಲಾವಿದ, ಉತ್ತಮ ಗಾಯಕ ಆದರ್ಶ ಶಿವ ಭಜನಾ ಕಲಾವಿದ ಅಡಗಿಕೊಂಡಿದ್ದಾನೆ.


ದೀಪ ದೀಪ್ತಿ ಎಂಬ ಚೊಚ್ಚಿಲ ಕವನ ಸಂಕಲನ ಪ್ರಕಟಿಸುವ ಮೂಲಕ ಸಾರಸ್ವತ ಲೋಕ ಪ್ರವೇಶ ಮಾಡಿದ್ದಾರೆ. ಮುಗಳಖೋಡದ ಇವರ ಆರಾಧ್ಯ ದೈವ ಶ್ರೀ ಯಲ್ಲಾಲಿಂಗ ಮಹಾರಾಜರು ಇವರ ಪರಿಕಲ್ಪನೆಯಲ್ಲಿ ಕಂಡಂತೆ “ಶ್ರೀಗುರು ಲೀಲಾಮೃತ” ಎಂಬ ಗದ್ಯ ಕೃತಿ ರಚಿಸಿ ಈ ಭಾಗದ ಅನೇಕ ವಾಚಕರ ಮನ ಗೆದ್ದಿದ್ದಾರೆ. ಇನ್ನೂ ನೂರಾರು ಕವಿತೆಗಳನ್ನು ಬರೆದಿರುವ ಇವರು ಅವೆಲ್ಲವೂ ಹಸ್ತಪ್ರತಿಯಲ್ಲಿವೆ. ಕರಿಯ, ನನಸಾದ ಕನಸು, ಹಾಗೂ ಜೀತ ಎಂಬಂತಹ 3 ಕತೆಗಳನ್ನು ಬರೆದು ತಾವೊಬ್ಬ ಉತ್ತಮ ಕತೆಗಾರ ಎಂದು ದೃಡೀಕರಿಸಿದ್ದಾರೆ. ರಕ್ತ ತಿಲಕ,ಕಲಿಯುಗದ ಗಾಳಿ,ಹಾಗೂ ತಾಯಿ ಹರಕೆ ಎಂಬ ಸಾಮಾಜಿಕ ನಾಟಕಗಳನ್ನು ಬರೆದಿದ್ದಾರೆ ಆದರೆ ಅವೆಲ್ಲವನ್ನೂ ಹಸ್ತಪ್ರತಿಯಲ್ಲಿವೆ. ಈವರೆಗೂ ಆರ್ಥಿಕ ಅನಾನುಕೂಲತೆಯಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಡಾ.ಹಳಕಲ್ ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ..



ಗ್ರಾಮದ ಬೇರೆ ಬೇರೆ ಉತ್ಸವ ಹಾಗೂ ಜಾತ್ರೆಗಳಲ್ಲಿ ಜರುಗುವ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಒಟ್ಟು 15 ನಾಟಕಗಳಲ್ಲಿ ಅಭಿನಯಿಸಿ ಈ ಭಾಗದ ಕಲಾ ರಸಿಕರ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗಿ ಕಂಗೊಳಿಸಿದ್ದಾರೆ. ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ 1998 ಹಾಗೂ 2001 ರಲ್ಲಿ ಇವರ ಮೂರೂ ಕತೆಗಳು “ಕಥಾ ವಿಹಾರ” ಎಂಬ ಕಾರ್ಯಕ್ರಮದಲ್ಲಿ ಪ್ರಸಾರಗೊಂಡು ಶೋತೃಗಳ ಮನ ತಣಿಸಿದ್ದಾರೆ. ಮುಗಳಖೋಡ ಮಹಾರಾಜರು ಹಾಗೂ ಶ್ರೀಗಳ ಮೇಲೆ ಭಕ್ತಿಗೀತೆಗಳನ್ನು ರಚಿಸುವ ಮೂಲಕ ಆಧ್ಯಾತ್ಮಿಕ ಹಂಬಲ ಅರುಹಿದ್ದಾರೆ..


ಕಳೆದ 6 ವರುಷಗಳ ಹಿಂದೆಯೇ ಗ್ರಾಮದಲ್ಲಿ ಸಮುದಾಯದ ಬೆಂಬಲ ಹಾಗೂ ಗ್ರಾಮಸ್ಥರ ಪ್ರೋತ್ಸಾಹದೊಂದಿಗೆ ಹಾರೂಗೇರಿಯ ಶರಣ ವಿಚಾರ ವಾಹಿನಿಯ ಸಂಸ್ಥಾಪಕ ಅಧ್ಯಕ್ಷ ಶಿವಶರಣರಾದ ಶ್ರೀ ಆಯ್ ಆರ್ ಮಠಪತಿ ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ನಾಡಿನ ಹೆಸರಾಂತ ಕ್ರಾಂತಿಕಾರಿ ಹಾಗೂ ಪ್ರಗತಿಪರ ಚಿಂತನೆಯ ಸ್ವಾಮೀಜಿ ಎಂದೇ ಜನಜನಿತರಾದ ಬೈಲೂರಿನ ನಿಷ್ಕಲ ಮಂಟಪದ ಪೂಜ್ಯ ಶ್ರೀ ನಿಜಗುಣಾನಂದ ಪ್ರಭುಗಳನ್ನು ಹಾಗೂ ಹಲವು ಪೂಜ್ಯರನ್ನು ಗ್ರಾಮಕ್ಕೆ ಆಹ್ವಾನಿಸಿ ಶರಣ ಶ್ರೀ ಮಾದಾರ ಚೆನ್ನಯ್ಯ ಅವರ ಜಯಂತ್ಯೋತ್ಸವವನ್ನು ಆಚರಿಸಿ ಪ್ರಗತಿಪರ ಚಿಂತನೆ ಹಾಗೂ ಜಾತ್ಯತೀತ ತತ್ವಗಳನ್ನು ಇಡೀ ಗ್ರಾಮದ ನಾಗರೀಕರಿಗೆ ತಲುಪುವಂತೆ ಮಾಡಿದ ಚತುರ ಸಂಘಟಕ.

ತಮ್ಮ ಆದರ್ಶ ಗುರುಗಳಾದ ಶ್ರೀ ಆಯ್ ಆರ್ ಮಠಪತಿ ಅವರ ಸತ್ಸಂಗದಲ್ಲಿ ಬೆಳೆದ ಡಾ ಬಸವರಾಜ ಹಳಕಲ್ ಅವರು ಈಗ ಎರಡ್ಮೂರು ವರುಷಗಳಿಂದ ತಮ್ಮ ಮಹಾಮನೆಯಲ್ಲಿಯೇ ಶರಣ ಶ್ರೀ ಮಾದಾರ ಚೆನ್ನಯ್ಯ ಅವರ ಜಯಂತಿಯನ್ನು ಹಮ್ಮಿಕೊಂಡು ಅನುಭಾವಿಗಳನ್ನು ಆಮಂತ್ರಿಸಿ ಶಿವಾನುಭವ ಕಾರ್ಯಕ್ರಮ ಮಾಡುತ್ತಾರೆ. 5 ವರುಷ ಪರ್ಯಂತ ಪ್ರತಿ ವರುಷ ಶಿವಶರಣ ಶ್ರೀ ಆಯ್ ಆರ್ ಮಠಪತಿ ಅವರು ಕೈಗೊಳ್ಳುವ ಬಸವ ಭೂಮಿ ಯಾತ್ರೆಯಲ್ಲಿ ಡಾ.ಹಳಕಲ್ ಅವರು ಪತಿ ಪತ್ನಿ ಸಮೇತ ಪಾಲ್ಗೊಂಡು ಸಂಪೂರ್ಣವಾಗಿ ಶರಣ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದು ವಿಶೇಷವಾಗಿದೆ. ತನು ಮನ ಭಾವ ಶುದ್ದಿಯಾಗಿಸಿಕೊಂಡ ಇವರ ಸದ್ಭಕ್ತಿಗೆ ಮುಗಳಖೋಡ ಮುಕ್ತಿ ಮಂದಿರದ ಸದ್ಯದ ಪೀಠಾಧಿಪತಿ ಪೂಜ್ಯ ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಇವರ ತೋಟದ ನಿವಾಸಕ್ಕೆ ಒಂದು ಬಾರಿ ದಯಮಾಡಿಸಿ ಆಶೀರ್ವಚನ ನೀಡಿದ್ದನ್ನು ಡಾ ಹಳಕಲ್ ಹಾಗೂ ಅವರ ಕುಟುಂಬದವರು ಮನಪೂರ್ವಕವಾಗಿ ತುಂಬುಹೃದಯದಿಂದ ಸ್ಮರಿಸುತ್ತಾರೆ.

ಮನೆ ನೋಡಾ ಬಡವರು ಮನ ನೋಡಾ ಘನ ಮನ ಸಂಪನ್ನರು ಎಂಬ ಅಣ್ಣ ಬಸವಣ್ಣನವರ ವಚನದಂತೆ ಹೃದಯ ಶ್ರೀಮಂತಿಕೆಯಿಂದ ಎಲ್ಲರ ಮನಗೆಲ್ಲುವ ಡಾ ಬಸವರಾಜ ಹಳಕಲ್ ಅವರು ತಮ್ಮ ತೋಟದ ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಶಾಲೆಯ ಉನ್ನತಿಗೆ ಶ್ರಮಿಸಿದ್ದಾರೆ.ಪ್ರಸ್ತುತ ರಾಯಬಾಗ ತಾಲ್ಲೂಕು ಕ.ಸಾ.ಪ. ಘಟಕದ ಕಾರ್ಯಕಾರಿ ಸಮೀತಿಯ ಸದಸ್ಯರಾಗಿದ್ದಾರೆ. “ವೈದ್ಯೋ ನಾರಾಯಣ ಹರಿ” ಎಂಬ ನುಡಿ ವೈದ್ಯರನ್ನು ನಾರಾಯಣ ಎಂದು ವರ್ಣಿಸಿರುವ ಬಗ್ಗೆ ಎಲ್ಲರಿಗೂ ತಿಳಿದ ವಿಷಯ.ನಿಜಕ್ಕೂ ಈ ಭಾಗದಲ್ಲಿ ಬಡ ರೋಗಿಗಳ ಡಾಕ್ಟರ್ ಆಗಿ ಹೆಸರು ಗಳಿಸಿರುವ ಈ ಕೃಷ್ಣಾ ತೀರದ ಎಲೆ ಮರೆಯ ಕಾಯಿ ಬಹುಮುಖ ಪ್ರತಿಭೆಯ ಡಾ.ಬಸವರಾಜ ಹಳಕಲ್ ಅವರ ಬದುಕು ಬರಹ ಸಿರಿವಂತಗೊಳ್ಳಲಿ ಎಂದು ಪ್ರೀತ್ಯಾಭಿಮಾನದಿಂದ ಆಶಿಸುತ್ತೇನೆ.

🖊️:~ಡಾ.ಜಯವೀರ ಎ.ಕೆ
【ಕನ್ನಡ ಪ್ರಾಧ್ಯಾಪಕರು】
ಖೇಮಲಾಪುರ

Leave a Comment

Your email address will not be published. Required fields are marked *

error: Content is protected !!