ಕಡಲ ತಡಿಯ ಕುವರ, ಸೇವಾ ಧುರಂಧರ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು

Share the Post Now

ಅವರೊಂದು ವಿಸ್ಮಯ. ಕಾಲೇಜು ಮೆಟ್ಟಿಲು ಹತ್ತಿದವರಲ್ಲ,ಮಹಾಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದಿಲ್ಲ, ಅವರ ಜೀವನ ಸಾಧನೆ ಅಧ್ಯಯನಗೈದು ಪಿ ಎಚ್ ಡಿ ಪಡೆಯಲು ಯೋಗ್ಯ. ಹತ್ತಾರು ಸಾಹಿತ್ಯ ಕೃತಿ ಬರೆದವರಲ್ಲ, ಆದರೆ ಸಹಸ್ರಾರು ಸಾಹಿತಿಗಳ ಆಪ್ತಮಿತ್ರ. ಲಯನ್ಸ್ ಸಂಸ್ಥೆಗೆ ಲಗ್ಗೆಯಿಟ್ಟರು, ಕಣ್ಣಿಲ್ಲದವರಿಗೆ ಕಣ್ಣು ಕೊಟ್ಟು ವಿಧವಿಧದ ಸೇವಾ ಧುರಂಧರನೆನೆಸಿಕೊಂಡರು. ಮನೆಯೇ ಮಂತ್ರಾಲಯವೆಂದು ಪೂಜಿಸಿದ ಇವರು,ಕರಾವಳಿ ಕರ್ನಾಟಕದ ದೇವಮಂದಿರಗಳಲ್ಲಿ ಧರ್ಮ ಮಾರ್ಗ ತೋರಿ ಧರ್ಮದರ್ಶಿ ಎನಿಸಿಕೊಂಡರು. ಸೂರು ಇಲ್ಲದವರಿಗೆ ನೂರಾರು ಸೂರು ಕಟ್ಟಿ ಕೊಟ್ಟು ಬಡವರ ಬಂಧುವಾದರು. ಕಲಿಯುವ ಬಡ ಮಕ್ಕಳಿಗೆ ದಾನ ಧರ್ಮಾದಿಗಳ ನೀಡಿ ಧನ್ಯತೆಯ ಪಡೆದರು. ದೇವಾಲಯ, ವಿದ್ಯಾಲಯಗಳು ನಮ್ಮೆರಡು ಕಣ್ಣುಗಳೆಂದು ತಿಳಿದು ಧನ ಕನಕಗಳ ನೀಡುತ ಸಾರ್ಥಕ್ಯ ಭಾವ ತಾಳಿದರು. ಬಾಲ್ಯದಲ್ಲಿ ತಾನು ಭಾರತ್ ಸೇವಾದಳ ಕಂಡರಿಯದೆ ಹೋದರೂ, ಸಹಸ್ರಾರು ಮಕ್ಕಳು ತಿಳಿಯುವಂತೆ ಮಾಡಿದರು. ಇವರೇ ಕಡಲತಡಿಯ ಕುವರ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು. ಸೇವಾ ಕ್ಷೇತ್ರದಲ್ಲಿ ಕರಾವಳಿಯ ದಂತ ಕಥೆಯಾದರು.

ಎದ್ದು ತೋರುವ ಆರಡಿ ಎತ್ತರದ ನಿಲುವು. ಬಿಳಿ ಪಂಚೆ ಅದರ ಮೇಲೊಂದು ಉದ್ದ ತೋಳಿನ ಅರ್ಧ ಮಡಚಿದ ಬಿಳಿ ಅಂಗಿ. ಮನಸ್ಸು, ವ್ಯವಹಾರಗಳು ಅಷ್ಟೇ ಶುಭ್ರ. ಮುಂಜಾನೆ ಪೂಜೆ ಮುಗಿಸಿ ಏಳರ ವೇಳೆ ಹೊರಟು ರಾತ್ರಿ ಎಂಟರ ಹೊತ್ತಿಗೆ ಮನೆ ತಲುಪಿಯಾರು. ನಿತ್ಯ ಸಂಚಾರಿ ಆದ ಇವರಿಗೆ ಹಲವು ಕಾಲದ ನೆಚ್ಚಿನ ಸಾರಥಿ ಅದೇ ‘ಸುಂದರ’. ನಿತ್ಯವೂ ಹತ್ತಾರು ಸಭೆ ಸಮಾರಂಭಗಳು. ಆಪ್ತರೆನಿಸಿಕೊಂಡರೆ ಕರೆಯದೆಯೂ ಹೋಗಬಲ್ಲರು. ತನ್ನ ಉದ್ಯಮ ನೆಲೆಗಳಿಗೆ ನಿಯಮಿತ ಭೇಟಿ. ಕೆಲಸಗಾರರಿಲ್ಲದೆ ಹೋದರೂ ಆ ಜಾಗ ತುಂಬ ಬಲ್ಲ ತಾಕತ್ತು ಇವರದು.

ಅರ್ಚಕರ ಕುಟುಂಬದಿಂದ ಬಂದ ಇವರ ಹಿರಿಯರು ಶಾನುಭೋಗರಾಗಿ ದುಡಿದವರು. ಕೃಷಿ ಭೂಮಿ ಸಾಕಷ್ಟಿದ್ದರೂ ಭೂ ಮಸೂದೆಯಿಂದ ಒಂದಷ್ಟು ಕಳಕೊಂಡರು. ಕೃಷಿಯನ್ನೇ ಮೆಚ್ಚಿಕೊಂಡರೆ ಬದುಕು ಸಾಗದೆಂದು ಹೋಟೆಲ್ ಉದ್ಯಮ ಚೆನ್ನೈ ಕೇರಳಗಳಲ್ಲಿ ನಡೆಸಿ,ಪರಿಣತಿ ಪಡೆದು ಮುಲ್ಕಿ, ಮಂಗಳೂರಲ್ಲಿ ಧನಲಕ್ಷ್ಮಿ ಕೈಹಿಡಿದು ಮುನ್ನಡೆಸಿದಳು. ಕೃಷಿ ಇಲ್ಲದ ನಾಡು ಬರಗಾಲದ ಬೀಡೆಂದು ಭಾವಿಸಿ,ಬೆಳೆಸುವ ಕೈಯಾಗಿ ಮಾದರಿ ಕೃಷಿಕರೂ ಆದರು.

ಸೇವೆಯನ್ನೇ ಜೀವನ ವ್ರತವಾಗಿ ಸ್ವೀಕರಿಸಿದ ಮಹಾಶಯರು. ಕಲೆ, ಸಾಹಿತ್ಯ,ಧಾರ್ಮಿಕ, ಶೈಕ್ಷಣಿಕ, ಆರೋಗ್ಯ, ಸಮಾಜ ಕಲ್ಯಾಣ ಹೀಗೆ ದಣಿವರಿಯದ, ಜನತಾ ಸೇವೆಯೇ ಜನಾರ್ದನ ಸೇವೆ ಎಂದು ಬಗೆದು ನೊಂದು ಬೆಂದವರಲ್ಲಿ ದೇವರ ಕಂಡ ಮಹಾಪುರುಷ.

ಬಪ್ಪನಾಡು ದೇವಾಲಯದ ಉತ್ಸವ ಕಾಲದಲ್ಲಿ ಸಿಡಿಮದ್ದು ತುಂಬಿದ ಕದಣಿ ಸಿಡಿದು, ಬದುಕುಳಿದ ಪುಣ್ಯವಂತನಂತೆ ಇವರು. ಅದೇ ದೇವಾಲಯದ ಆಡಳಿತ ಪ್ರಮುಖರಾಗುವ ಆಶೀರ್ವಾದವಿತ್ತು ದೇವಿ ಹರಸಿದಳು. ಪರಶುರಾಮ ಕ್ಷೇತ್ರದ ಉದ್ದಗಲಗಳಲ್ಲಿ ಹತ್ತು ಹಲವು ಧರ್ಮ ಕ್ಷೇತ್ರಗಳ ಆಡಳಿತ ನಡೆಸಿ ಕುಂದು ಕೊರತೆ ನೀಗಿಸಿದ ಮಹಾಪುರುಷರಾದರು. ಹರಿಕೃಷ್ಣ ಪುನರೂರರ ಸ್ಪರ್ಶವಿಲ್ಲದ ದೇವ ಮಂದಿರಗಳಿಲ್ಲವೆಂಬಷ್ಟು ನಮ್ರ ಸೇವಕರಾದರು. ಜಡ್ಡು ಗಟ್ಟಿದ ಚೌಕಟ್ಟಿನೊಳಗೆ ಬದಲಾವಣೆ ತಂದಿತ್ತು ಭಕ್ತರ ಪ್ರೀತಿಗೆ ಪಾತ್ರರಾದರು.

ಸುಮಾರು 1990ರ ದಶಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನಗಳನ್ನು ಹಳ್ಳಿ ಹಳ್ಳಿಗಳಲ್ಲಿ ಜಾತ್ರೆಯಂತೆ ನಡೆಸಿ, ಕನ್ನಡ ಜಾಗೃತಿ ಮೂಡಿಸಿ ಕನ್ನಡ ಸಾಹಿತ್ಯಕ್ಕೆ ಸಂಭ್ರಮದ ಮೆರುಗು ತುಂಬಿದವರು. ತುಳುನಾಡು ಹೆತ್ತಮ್ಮ,ಕನ್ನಡ ತಾಯಿ ಸಾಕಮ್ಮ, ಭಾರತಾಂಬೆ ಪೊರೆವಮ್ಮನೆಂದು ನೆನೆದ, ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷತೆ ಒಲಿದು ಬಂದದು ಅಚ್ಚರಿಯ ಸಂಗತಿ. ಅದೇ ಬಿಳಿ ಲುಂಗಿ,ಅದರ ಮೇಲಿನ ಬಿಳಿಯಂಗಿ ತೊಟ್ಟು ರಾಜ್ಯದ ಉದ್ದಗಲ ಸಂಚರಿಸಿ ಕ್ರಿಯಾಶೀಲತೆಯಿಂದ ಕನ್ನಡದ ಕಣ್ಮಣಿಯಾದರು. ನಾಡಿನ ಉದ್ದಗಲದಿ ಸಾಹಿತ್ಯ ಸರಸ್ವತಿಯ ತೇರನೆಳೆದು ಪ್ರಿಯದರ್ಶಿಯೆನಿಸಿದರು. ಸಾಹಿತಿಗಳ ಪೋಷಕರಾದರು. ತಾಯಿ ಭಾರತಾಂಬೆಗೆ ಕನ್ನಡದಾರತಿ ಬೆಳಗಿದ ಲಕ್ಷ್ಮೀಪುತ್ರ ಇವರು.

ಜನಸಾಮಾನ್ಯರು ಒಗ್ಗಿಸಿಕೊಳ್ಳದ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಗೆ ಧುಮುಕಿದ ಪುನರೂರು, ಸಂಚಲನ ಸೃಷ್ಟಿಸಿದ ಪರಿ ಅವರ್ಣನೀಯ. ಗವರ್ನರ್ ಆಗಿ ಊರೂರಲ್ಲಿ ನೇತ್ರ ಶಿಬಿರ ನಡೆಸಿ,ಕಣ್ಣಿದ್ದು ಕುರುಡರಂತಿದ್ದ ಬಡಬಗ್ಗರೂ ಜಗದ ಸೌಂದರ್ಯ ಮತ್ತು ಒಡನಾಡಿಗಳ ಕಂಡು ನಲಿಯುವಂತೆ, ಸಹಸ್ರಾರು ದೃಷ್ಟಿ ಹೀನರ ಆಸರೆಗೆ ಕೈಚಾಚಿದರು. ನೊಂದವರಿಗೆ ಬೆಳಕಾದರು. ಹತ್ತಾರು ಸಂಘ ಸಂಸ್ಥೆಗಳ ಆಶ್ರಯದಾತರಾದರು. ಹೀಗೂ ಮಾಡಲು ಸಾಧ್ಯವೇ ಎಂಬಂತೆ ಸೇವೆಯ ವಿರಾಟದರ್ಶನ ಮಾಡಿಸಿದರು.



ಅಶನ, ವಸನ,ವಸತಿ ಈ ಮೂರು ಸಾಮಾನ್ಯ ಜನರನ್ನು ಬೆಂಬಿಡದೆ ಕಾಡುವ ಅಗತ್ಯಗಳು. ದುಡಿವ ಕೈಗಳು ಅಷ್ಟಿಷ್ಟು ಗಳಿಸಿದ ಹೊನ್ನು ನಿತ್ಯ ಹೊಟ್ಟೆ ಹೊರೆಯಲು ಸಮ. ಇನ್ನೊಂದಷ್ಟು ಮಾನ ಮುಚ್ಚಿಕೊಳ್ಳುವ ವಸನಕ್ಕೆ ವ್ಯಯ. ಬಹು ಜನರಿಗೆ ವಸತಿ ಎಂಬುದು ಬರಿ ಕನಸು. ಸೂರಿಲ್ಲದೆ ತನ್ನ ಕಣ್ಣ ಮುಂದೆ ನಿತ್ಯ ಕಣ್ಣೀರ ಬದುಕು ಕಂಡ ಬಡವರಿಗೆ,ನೂರೊಂದು ಮನೆಗಳ ಕಟ್ಟಿಸಿ ಸಂತಸ ಉಕ್ಕುವಂತೆ ಮುಕ್ಕೋಟಿ ವ್ಯಯಿಸಿದ ಧೀಮಂತ. ಹುಟ್ಟಿದರೆ ಹುಟ್ಟಬೇಕು ಪುನರೂರಂತಹ ಮಕ್ಕಳೆಂಬ ಮನೆ ಮಾತು ಸೃಷ್ಟಿಯಾಯಿತು. ಬಡವರ ಸರಕಾರಿ ಶಾಲೆಗಳೆಂದರೆ ಶಿಕ್ಷಕರಿಲ್ಲ, ಪೀಠೋಪಕರಣಗಳಿಲ್ಲ, ಕೊಠಡಿಗಳಿಲ್ಲ, ಮಕ್ಕಳಿಗೆ ಪುಸ್ತಕಗಳಿಲ್ಲವೆಂಬ ಕಾಲ ಸುಮಾರು 20 ವರ್ಷಗಳ ಹಿಂದಿನದು. ನೆರವಿನಾಸರೆ ಬಯಸಿ ಬಂದವರ ನಿರಾಶೆಗೆ ಕೆಡವಿದವರಲ್ಲ. ಅಕ್ಷಯ ಪಾತ್ರೆಯೆನಿಸಿದರು. ಕನ್ನಡ ಶಾಲೆಗಳ ಉಳಿವಿಗೆ ಕಟಿಬದ್ಧರಾದರು. ಅಲೆಮಾರಿ ಮಕ್ಕಳಿಗೆ ಆಸರೆಯಾದರು.



ಪುನರೂರರು ಹಠವಾದಿ, ಮಿತಭಾಷಿ ಹಿತಭಾಷಿ, ಎಣೆಯಿರದ ಕೊಸರಿರದ ಗುಣಗ್ರಾಹಿ. ವೃಕ್ಷದಂತೆ ಎಲ್ಲರಿಗೂ ಸಮಾನ ನೆರಳು, ಸಮಾಜ ಸೇವೆಯ ಕಂಕಣ ತೊಟ್ಟವರು. ತನ್ನ ದಾರಿಯ ತಾನೇ ಕಂಡು ನಡೆವರು. ತನ್ನೆದೆಯ ಪ್ರೀತಿಯಿಂದ ಸಕಲರ ಬಳಿ ಸೆಳೆದರು. ಘಟನೆ ಸಂಘಟನೆಗಳಲಿ ಕರಾಳವೆನಿಸಿದರೆ ಪ್ರತಿಭಟನೆ. ಸರಳತೆಯ ಪ್ರತಿರೂಪ, ಸಾಹಿತ್ಯದ ನಿತ್ಯೋತ್ಸವ ಮೆರೆಸಿದರು. ಶತ್ರುಗಳಲ್ಲಿ ಮಿತ್ರ ಪ್ರೇಮದ ಕಾರುಣ್ಯ ತೋರಿದವರು. ನಾನು ಬರೆಯಲಿಲ್ಲ ಬರೆಯುವವರು ಬರೆಯಲೆಂದು ದಾನವಿತ್ತರು. ಜಾತಿ ವಿಜಾತಿ,ಆಸ್ತಿಕ ನಾಸ್ತಿಕರ ಪ್ರೀತಿಪಾತ್ರ. ಯಕ್ಷ ಭಾರತಿ ಸ್ಥಾಪಿಸಿ ಯಕ್ಷಗಾನದ ಗೆಜ್ಜೆ ತೊಡಿಸಿದರು. ಕರ್ಣಾಟಕ ಬ್ಯಾಂಕ್ ನಿರ್ದೇಶಕರೂ ಆದರು. ವಸ್ತ್ರಾಪಹರಣಕ್ಕೊಳಗಾದರು ಛಲ ಬಿಡದ ಛಲದಂಕ ಮಲ್ಲ.! ಕರಾವಳಿಯ ಗಂಡೆದೆಯ ಕನ್ನಡದ ಕಟ್ಟಾಳು.!!


ಕುಟುಂಬ ಗಟ್ಟಿಗೊಂಡರೆ ತಾನೇ ಎಲ್ಲಾ ಸೇವೆಗಳು. ಪತ್ನಿ ಉಷಾರಾಣಿ ನಿರ್ಮಲ ಭಾವದ ಛಾಯಾನುವರ್ತಿ. ಪತಿಯ ಅವಿರತ ಸೇವೆ ಕಂಡು ಹರುಷ ಪಟ್ಟ ಮಹಾರಾಣಿ. ನಿತ್ಯ ಸಂಚಾರವಿಟ್ಟರು ಮನೆ ನಡೆಸಿದ ಧೀರೆ. ಅಪ್ಪನಂತೆ ನಿತ್ಯ ಕಾಯಕದಲ್ಲಿ ಶ್ರಮವಹಿಸಿ ಬೆನ್ನೆಲುಬಿನಂತೆ ನಿಂತ ವರಪುತ್ರ, ದೇವ ಪ್ರಸಾದ ಪುನರೂರು. ಮನೆ ವಾರ್ತೆ ನಡೆಸಬಲ್ಲ ಗಟ್ಟಿಗಳಾದ ಸೊಸೆ ಶ್ರೇಯಾ. ರಾಧಿಕಾ, ಮಲ್ಲಿಕಾ, ಚಂದ್ರಿಕಾ ಮಗಳಂದಿರು. ಸುಧೀರ್, ಅರವಿಂದ, ಸುಧೀರ್ ಅಳಿಯಂದಿರು ಹಾಗೂ ಮೊಮ್ಮಕ್ಕಳಿಂದ ಕೂಡಿದ ಸಂತೃಪ್ತ ಕುಟುಂಬ.

ಪುನರೂರರ ವಯಸ್ಸು 80. ಸುಮಾರು 50 ರಿಂದ 60 ವರ್ಷಗಳಲ್ಲಿ ಸಮಾಜಕ್ಕೆ ಸುರಿದ ಸಂಪತ್ತು ಲೆಕ್ಕವಿಟ್ಟವರಾರು. ದೇವರೊಬ್ಬನಿಗೆ ಗೊತ್ತು. ಕೋಟಿಗಳಲ್ಲಿ ಎಣಿಸಿ ತಿಳಿಸಿದರೆ ಅದರ ಬೆಲೆ ಅಲ್ಪವೆನಿಸಬಹುದು. ಇಂತಹ ಧನಿಕರಿಗೆ ಇನ್ನಷ್ಟು ಸಂಪತ್ತು ಹರಿದು ಬರಲಿ. ನದಿ ನೀರು ಜನರಿಗೆ ಆಸರೆಯಾದಂತೆ ಇವರ ಸಂಪತ್ತು ಸಮಾಜಕ್ಕೆ ಕೈಯಾಸರೆಯಾಗಬಹುದು. ಪೇಜಾವರ ಶ್ರೀ ಶ್ರೀ ವಿಶ್ವೇಶ ತೀರ್ಥರ ಪರಮ ಭಕ್ತ ಹಾಗೂ ಕರಾವಳಿಯ ಎಲ್ಲ ಸಂತರ ಸಮೀಪವರ್ತಿ. ಇವರ ಸೇವೆ ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪೇಜಾವರ ಶ್ರೀಗಳು ನೀಡಿದ ಧರ್ಮದರ್ಶಿ ಬಿರುದು, ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಅಲ್ಲದೆ ನೂರಾರು ಪ್ರಶಸ್ತಿ ಪುರಸ್ಕಾರಗಳ ಸರಮಾಲೆ ಕೊರಳ ಹಾರವಾಗಿದೆ

ಲೇಖನ:ಡಾ.ಜಯವೀರ ಎ.ಕೆ*.
*ಕನ್ನಡ ಪ್ರಾಧ್ಯಾಪಕರು*
*【ಖೇಮಲಾಪುರ*】

Leave a Comment

Your email address will not be published. Required fields are marked *

error: Content is protected !!