ಶ್ರೀ ಶರೀಫ ಮುಲ್ಲಾ ಅವರ ಕಲಾ ಶ್ರೀಮಂತಿಕೆಅಮೋಘ:ಎ.ಎಂ.ಕಾಂಬಳೆ

Share the Post Now

ರಾಯಬಾಗ:ಇತ್ತೀಚೆಗೆ ನಿಧನರಾದ ಸುಕ್ಷೇತ್ರ ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಸದ್ಭಕ್ತರು ಹಾಗೂ ಈ ಭಾಗದ ಉತ್ತಮ ಕಲಾವಿದರಾಗಿದ್ದ ಶ್ರೀ ಷರೀಫ್ ಮುಲ್ಲಾ ಅವರು ತಮ್ಮ ಅಪೂರ್ವ ಗಾಯನದ ಮೂಲಕ ಜನರ ಮನದಲ್ಲಿ ಅದ್ವಿತೀಯ ಗಾಯಕರಾಗಿ ಗಮನ ಸೆಳೆದಿದ್ದರು.

ಅವರ ತಂದೆ ಅನುಭಾವಿ ಕವಿ ಜನಾಬ ಮೀರಾಸಾಬ ಮುಲ್ಲಾ ಅವರ ಆದರ್ಶದ ದಾರಿಯಲ್ಲಿ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಶ್ರೀಗಳ ಪರಮ ಶಿಷ್ಯರಾಗಿದ್ದ ಇವರು ಗುರುಪಥದಲ್ಲಿ ನಡೆದು ಉತ್ತಮ ಶರಣ ಜೀವಿ ಎನಿಸಿಕೊಂಡಿದ್ದರು. ಇಹಲೋಕ ತ್ಯಜಿಸಿದ ಶ್ರೀ ಶರೀಫ ಮುಲ್ಲಾ ಅವರು ಹಾರ್ಮೋನಿಯಂ ಬಾರಿಸುತ್ತ ಭಜನೆ,ಹಾಗೂ ಭಕ್ತಿ ಗೀತೆಗಳನ್ನು ಹಾಡುತ್ತಿದ್ದರೆ ಎಲ್ಲರೂ ತಲೆದೂಗುತ್ತಿದ್ದರು .ಅವರ ಕಲಾ ಶ್ರೀಮಂತಿಕೆ ಅಮೋಘ ಹಾಗೂ ಅಪ್ರತಿಮವಾದುದು ಎಂದು ಆಶ್ರಮದ ಹಿರಿಯ ಸದ್ಭಕ್ತರು, ಹಾಗೂ ಪರಮಾನಂದವಾಡಿಯ ಹಿರಿಯ ಪ್ರಾಥಮಿಕ ಶಾಲೆಯ ವಿಶ್ರಾಂತ ಮುಖ್ಯೊಪಾಧ್ಯಾಯರು ಶರಣ ಶ್ರೀ ಎ.ಎಂ.ಕಾಂಬಳೆ ಅಭಿಮತ ವ್ಯಕ್ತಪಡಿಸಿದರು.


ಅವರು ಇತ್ತೀಚೆಗೆ ತಾಲ್ಲೂಕಿನ ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ನಡೆದ ದಿವಂಗತ ಶ್ರೀ ಷರೀಫ್ ಮುಲ್ಲಾ ಅವರಿಗೆ ನುಡಿ ನಮನ ಹಾಗೂ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರ ಘನ ವ್ಯಕ್ತಿತ್ವದ ವಿವಿಧ ಮುಖಗಳನ್ನು ಮಾರ್ಮಿಕವಾಗಿ ವಿಶ್ಲೇಷಿಸಿದರು.
ಆಶ್ರಮದ ಸಂಗೀತ ಬಳಗದ ಕಲಾವಿದರಾದ ಶ್ರೀ ರಣಧೀರ ಕಾಂಬಳೆ,ಹಾಗೂ ಶರಣ ಶ್ರೀ ಶಂಕರ ಹೊನವಾಡೆ ಅವರು ಶ್ರೀ ಷರೀಫ್ ಮುಲ್ಲಾ ಅವರೊಂದಿಗೆ ಇದ್ದ ಉತ್ತಮ ಒಡನಾಟವನ್ನು ತಮ್ಮ ಮನದಾಳದ ಮಾತುಗಳ ಮೂಲಕ ಸ್ಮರಿಸಿಕೊಂಡರು.ಸಿದ್ದಾಪುರದ ಶ್ರೀ ಕಾಡಯ್ಯ ಸ್ವಾಮಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ದಿವ್ಯ ಸಾನಿಧ್ಯ ವಹಿಸಿದ್ದ ಆಶ್ರಮದ ಪೀಠಾಧಿಪತಿಗಳಾದ ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ “ದಿವಂಗತ ಶ್ರೀ ಷರೀಫ್ ಮುಲ್ಲಾ ಅವರು ತಮ್ಮ ಇಡೀ ಜೀವನವನ್ನು ಆಶ್ರಮಕ್ಕೆ ಮುಡಿಪಿಟ್ಟು ಓರ್ವ ಪರಮ ಸದ್ಭಕ್ತರಾಗಿದ್ದರು.ಪರಮತ ಸಹಿಷ್ಣುತೆಯ ತತ್ವವನ್ನು ಚೆನ್ನಾಗಿ ಮೈಗೂಡಿಸಿಕೊಂಡು

ಸಕಲರಿಗೂ ಲೇಸನ್ನೇ ಬಯಸುತ್ತಿದ್ದ ಶ್ರೀ ಷರೀಫ್ ಮುಲ್ಲಾ. ಎಲ್ಲ ಪೂಜ್ಯರಿಗೆ ತಮ್ಮ ಗಾಯನದ ಮೂಲಕ ಅಪ್ಯಾಯಮಾನವಾಗಿದ್ದರು.ಆಶ್ರಮದ ವತಿಯಿಂದ ಅವರಿಗೆ ನುಡಿ ನಮನ ಸಲ್ಲಿಸುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಅವರ ಪರಿಶುದ್ಧ ಹಾಗೂ ಜಾತ್ಯತೀತ ಮನೋಭಾವ ನಮಗೆಲ್ಲಾ ಆದರ್ಶವಾಗಿದೆ. ಅವರ ಅಗಲಿಕೆ ಇಡೀ ಆಶ್ರಮದ ಭಕ್ತ ಸಂಕುಲಕ್ಕೆ ಹಾಗೂ ಗ್ರಾಮಕ್ಕೆ ಭರ ಸಿಡಿಲು ಎರಗಿದಂತಾಗಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು..ಸದ್ಭಕ್ತರಾದ ಶ್ರೀ ಸುನೀಲಗೌಡ ಪಾಟೀಲ, ಶ್ರೀ ಬಸವರಾಜ ಸನದಿ,ಹಾಗೂ ಗ್ರಾಮದ ಅನೇಕ ಗಣ್ಯ ಮಾನ್ಯರು,ಪಾಲ್ಗೊಂಡಿದ್ದರು. ಶ್ರೀ ಸದಾಶಿವ ವಾಳಕೆ ಕಾರ್ಯಕ್ರಮ ನಿರೂಪಿಸಿದರು..

ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!