ರಾಯಬಾಗ*:~ ಚಿಂಚಲಿ ಪಟ್ಟಣವು ರಾಯಬಾಗ ತಾಲ್ಲೂಕಿನ ಒಂದು ಸುಕ್ಷೇತ್ರ. ಇಲ್ಲಿನ ಶಕ್ತಿದೇವತೆ ಮಾಯಕ್ಕಾದೇವಿ ದೇವಸ್ಥಾನವು ಉತ್ತರ ಕರ್ನಾಟಕ, ಮಹಾರಾಷ್ಟ್ರ ಗೋವಾ ರಾಜ್ಯಗಳಲ್ಲಿ ಪ್ರಸಿದ್ಧಿಯನ್ನು ಪಡೆದು ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಕೆಲವು ವರುಷಗಳ ಹಿಂದೆಯೇ ಪಟ್ಟಣ ಪಂಚಾಯತಿ ಆಗಿ ರೂಪುಗೊಂಡ ಈ ಪಟ್ಟಣವು ನವನಾಗರೀಕತೆಯನ್ನು ಮೈಗೂಡಿಸಿಕೊಂಡು ಪ್ರಗತಿಯ ದಾಪುಗಾಲು ಇಡುತ್ತಿದ್ದರೂ ಈ ಪಟ್ಟಣಕ್ಕೆ ಒಂದು ಸುಸಜ್ಜಿತ ಬಸ್ ನಿಲ್ದಾಣವಿಲ್ಲದಿರುವುದು ತೀವ್ರ ಖೇದಕರ ಸಂಗತಿ.ಶ್ರೀ ಮಾಯಕ್ಕ ದೇವಿ ದೇವಸ್ಥಾನವು ಈ ಪಟ್ಟಣಕ್ಕೆ ಮೆರುಗು ನೀಡಿದ್ದೂ ನಿಜ.ಆದರೆ ಈ ಪಟ್ಟಣಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುವ ಅಸಂಖ್ಯಾತ ಯಾತ್ರಿಗಳಿಗೆ ಅನುಕೂಲಕರವಾದ ಇಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿಲ್ಲದೇ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿ ಭಾನುವಾರ ಹುಣ್ಣಿಮೆಯ ದಿನ, ಹಾಗೂ ಪ್ರತಿವರುಷ ನಡೆಯುವ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವದಲ್ಲಿ ಸುಮಾರು 20 ಲಕ್ಷ ಜನರು ಈ ಕ್ಷೇತ್ರಕ್ಕೆ ಬಂದು ಹೋಗುತ್ತಾರೆ.
ಮಹಾರಾಷ್ಟ್ರದ ದೂರದ ಗ್ರಾಮಗಳಿಂದ ಬರುವ ಯಾತ್ರಿಕರು, ಬಸ್ ಗಳಿಗೆ ಸಂಚರಿಸಲು ವ್ಯವಸ್ಥಿತವಾಗಿ ಕುಳಿತುಕೊಳ್ಳಲು ಸೂಕ್ತ ಸ್ಥಳವಿಲ್ಲದೇ ಇರುವುದರಿಂದ ಅನಿವಾರ್ಯವಾಗಿ ಕೀಲ ಕಟ್ಟ ಪೂಜಾ ಸ್ಥಳವೇ ಸದ್ಯ ತಂಗುದಾಣವಾಗಿ ಬಿಟ್ಟಿದೆ.ಕೀಲ ಕಟ್ಟ ಪೂಜಾ ಸ್ಥಳವು ಕುಡಚಿ ರಾಯಬಾಗ ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಇಲ್ಲಿ ಅನೇಕ ವಾಹನಗಳು ಸಂಚರಿಸುತ್ತವೆ.ಈ ಪ್ರದೇಶದಲ್ಲಿ 4 ದಿಕ್ಕಿನಿಂದ ವಾಹನಗಳು ಸಂಚರಿಸುತ್ತವೆ.ಕೆಲಕಾಲ ಟ್ರಾಫಿಕ್ ನಿಂದ ಸಾರ್ವಜನಿಕರು ತೀವ್ರ ತೊಂದರೆಗೆ ಸಿಲುಕುತ್ತಾರೆ. ಕಿಸ್ಕಿಂದೆ ಆಗಿ ಬಿಡುವ ಈ ಪ್ರದೇಶದಲ್ಲಿ ಪಾದಚಾರಿಗಳು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ದುಸ್ಥಿತಿ ಸರ್ವೇ ಸಾಮಾನ್ಯವಾಗಿದೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರುಷಗಳೇ ಗತಿಸಿದ್ದರೂ ಇಲ್ಲಿನ ದೇಶವಾಸಿಗಳಿಗೆ ಇನ್ನೂ ಮೂಲಭೂತ ಸೌಲಭ್ಯಗಳು ಈಡೇರದೇ ಇರುವುದು ವಿಪರ್ಯಾಸ.
ಚಿಂಚಲಿ ಪಟ್ಟಣವು ಸುಮಾರು 27 ಸಾವಿರ ಜನಸಂಖ್ಯೆ ಹೊಂದಿದೆ.ಪಟ್ಟಣ ಪ್ರಮುಖ ವ್ಯಾಪಾರಿ ಕೇಂದ್ರವೂ ಹೌದು. ಪ್ರತಿ ಭಾನುವಾರ ಈ ಪಟ್ಟಣದಲ್ಲಿ ವಾರದ ಸಂತೆ ಕೂಡುತ್ತದೆ. ಸುತ್ತಲಿನ ಅನೇಕ ಸಾರ್ವಜನಿಕರು ಆಗಮಿಸುತ್ತಾರೆ. ದೂರದ ಬೇರೆ ಬೇರೆ ಗ್ರಾಮದ ಪ್ರಯಾಣಿಕರು ಮಳೆಗಾಲ ಬೇಸಿಗೆಯಲ್ಲಿ ಇಕ್ಕೆಲಗಳ ರಸ್ತೆ ಪಕ್ಕದ ಅಂಗಡಿ ಮುಂಗಟ್ಟುಗಳ ಮುಂದೆ ಬಸ್ಸಿಗಾಗಿ ಕಾಯುವ ದುಸ್ಥಿತಿಯನ್ನು ಅನೇಕ ವರುಷಗಳಿಂದ ಅನಿವಾರ್ಯವಾಗಿ ಅನುಭವಿಸುತ್ತಿದ್ದಾರೆ.
ಸುಸಜ್ಜಿತ ಬಸ್ ನಿಲ್ದಾಣವಾಗಲು ಇಲ್ಲಿ ಸರಕಾರಿ ನಿವೇಶನ ಇದ್ದರೂ ಈವರೆಗೂ ಬಸ್ ನಿಲ್ದಾಣ ಆಗದೇ ಇರುವುದು ದಿವ್ಯ ನಿರ್ಲಕ್ಷ್ಯವೋ? ಅಥವಾ ಇಚ್ಚಾಶಕ್ತಿ ಕೊರತೆಯೋ? ಇದೊಂದು ಯಕ್ಷಪ್ರಶ್ನೆಯಾಗಿರುವುದು ವಾಸ್ತವ ಸತ್ಯ. ದಕ್ಷಿಣ ಕರ್ನಾಟಕದ ಅನೇಕ ಪ್ರಸಿದ್ಧ ದೇವಸ್ಥಾನಗಳು ಇರುವ ಪಟ್ಟಣ ಅಥವಾ ಗ್ರಾಮಗಳಲ್ಲಿ ಪ್ರಯಾಣಿಕರಿಗೆ ಸಕಲ ಮೂಲಭೂತ ಸೌಲಭ್ಯಗಳು ಇರುವುದನ್ನು ಗಮನಿಸಬಹುದು. ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿಯ ವರೆಗೂ ಚಿಂಚಲಿ ಪಟ್ಟಣದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಿಸಲು ಯಾವ ಅಡೆತಡೆಗಳು ಎದುರಾಗಿವೆ ಎಂಬುದು ತಿಳಿಯುತ್ತಿಲ್ಲ.
ಸರಕಾರದ ಮಹತ್ವಾಕಾಂಕ್ಷಿ “ನಗರೋತ್ಥಾನ” ಯೋಜನೆಯಲ್ಲಿ ಅನೇಕ ಕೋಟ್ಯಾಂತರ ರೂಪಾಯಿ ಅನುದಾನ ಇರುತ್ತದೆ. ಅದರ ಸದ್ಭಳಕೆಗೆ ಮೊದಲ ಆದ್ಯತೆ ನೀಡಿದಾಗ ಮಾತ್ರ ಇಂತಹ ಕ್ಷೇತ್ರದಲ್ಲಿ ಮಾದರಿ ಸಾರ್ವಜನಿಕ ಬಸ್ ನಿಲ್ದಾಣ ನಿರ್ಮಿಸಲು ಸಾಧ್ಯವಾದೀತು!!.ಬಸ ನಿಲ್ದಾಣವೇ ಇಲ್ಲದ ಪಟ್ಟಣ ಎಂಬ ಅಪಕೀರ್ತಿಗೆ ಪಾತ್ರವಾದ ಈ ಸುಕ್ಷೇತ್ರ ಚಿಂಚಲಿ ಪಟ್ಟಣಕ್ಕೆ ಇನ್ನಾದರೂ ಮೀನಾಮೇಷ ಎಣಿಸದೇ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನ ಮುರಿದು ಅಸಂಖ್ಯಾತ ಸಾರ್ವಜನಿಕರ ಮೂಲಭೂತ ಅಗತ್ಯಗಳಲ್ಲಿ ಒಂದಾದ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಕ್ರಮಕೈಗೊಳ್ಳುವರೆ?
“ಚಿಂಚಲಿ ಪಟ್ಟಣಕ್ಕೆ ಪ್ರತಿದಿನವೂ ನೂರಾರು ಜನರು ಹುಣ್ಣಿಮೆ, ಹಬ್ಬ,ಜಾತ್ರೆಗೆ ಸಾವಿರಾರು ಭಕ್ತರು ದೂರದ ಊರುಗಳಿಂದ ಬರುತ್ತಾರೆ. ವ್ಯಾಪಾರ ವಹಿವಾಟು ದೃಷ್ಟಿಯಿಂದ ಬಸ್ ನಿಲ್ದಾಣದ ತುರ್ತು ಅಗತ್ಯವಿದೆ.ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ನಾಗರೀಕರಿಗೆ ಮತ್ತು ಯಾತ್ರಾ ಕೇಂದ್ರದಲ್ಲಿ ಒಂದು ಸುಸಜ್ಜಿತ ಬಸ್ ನಿಲ್ದಾಣ ಬೇಕೇ ಬೇಕು”.】
*ಡಾ.ವಿಷ್ಣು ಎಂ. ಶಿಂದೆ* (ಗ್ರಾಮಸ್ಥರು) ಹಾಗೂ ಪ್ರಾಧ್ಯಾಪಕರು,ಕ.ರಾ.ಮ.ವಿ.ವಿ.
ವಿಜಯಪುರ
【”ಅನೇಕ ವರುಷಗಳಿಂದ ನಮ್ಮೂರಿಗೆ ಬಸ್ ನಿಲ್ದಾಣವೇ ಮಂಜೂರಿ ಆಗಿಲ್ಲ ಎಂದು ವಿಷಾದದಿಂದಲೇ ಹೇಳಬೇಕಾಗಿದೆ. ಬರುವ ಸಾವಿರಾರು ಭಕ್ತರಿಗೆ ದೇವಸ್ಥಾನದ ವತಿಯಿಂದ ಅಗತ್ಯ ಮೂಲ ಸೌಕರ್ಯಗಳನ್ನುನೀಡಿದ್ದೇವೆ.ಆದರೆ ಮಹಾರಾಷ್ಟ್ರದಿಂದ ಈ ಕ್ಷೇತ್ರಕ್ಕೆ ಬಂದು ಹೋಗುವ ಅಸಂಖ್ಯ ಭಕ್ತರಿಗೆ ಹಾಗೂ ಆಸರೆಗೆ ಹಾಗೂ ಕುಳಿತುಕೊಳ್ಳಲು ಇಲ್ಲಿ ಒಂದು ಸುಸಜ್ಜಿತ ಮಾದರಿ ಬಸ್ ನಿಲ್ದಾಣ ಅವಶ್ಯವಾಗಿ ಆಗಬೇಕು”】
*ಶ್ರೀ ಜಿತೇಂದ್ರ ಜಾಧವ*
(ಅಧ್ಯಕ್ಷರು,ಶ್ರೀ ಮಾಯಕ್ಕಾದೇವಿ ಟ್ರಸ್ಟ್ ಕಮೀಟಿ.ಚಿಂಚಲಿ)
ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*





