ಬೆಳಗಾವಿ. ರಾಯಬಾಗ : ದಕ್ಷಿಣದ ಗಂಗೆ ಎನಿಸಿಕೊಂಡ ಈ ಭಾಗದ ಜನರ ಜೀವನಾಡಿ ಕೃಷ್ಣೆಯ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ನದಿ ದಂಡೆಯ ಗ್ರಾಮಗಳಾದ ಸಿದ್ದಾಪುರ, ಖೇಮಲಾಪುರ, ಶಿರಗೂರ, ಹಾಗೂ ಗುಂಡವಾಡ ಗ್ರಾಮಸ್ತರಲ್ಲಿ ಆತಂಕದ ಕಾರ್ಮೋಡ ಕವಿದಿದೆ.ಈ ಬಾರಿ ರಾಜ್ಯಕ್ಕೆ ಮುಂಗಾರು ವಿಳಂಬವಾಗಿ ಪ್ರವೇಶ ಮಾಡುತ್ತಿರುವುದರಿಂದ ಈ ಪ್ರದೇಶದ ಜನ ಜಾನುವಾರುಗಳಿಗೆ ಬೇಸಿಗೆಯ ತೀವ್ರ ಬವಣೆ ತಟ್ಟಿದೆ.ಕೃಷ್ಣೆಯ ನದಿ ನೀರು ಕಡಿಮೆಯಾಗುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳ ತೆರೆದ ಭಾವಿ ಹಾಗೂ ಕೊಳವೆ ಭಾವಿಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿಯುತ್ತಿರುವುದು ರೈತರಿಗೆ ತಲೆನೋವಾಗಿದೆ. ತಾಲ್ಲೂಕಿನ ಸುಟ್ಟಟ್ಟಿ ಗ್ರಾಮಕ್ಕೆ ಟ್ಯಾಂಕರ ಮೂಲಕ ಅಲ್ಲಿನ ಗ್ರಾಮಸ್ಥರಿಗೆ ಪ್ರಸ್ತುತ ನಿತ್ಯ ಕುಡಿಯುವ ನೀರು ಪೂರೈಕೆ ಮಾಡುವ ಸಂದರ್ಭ ಬಂದಿದ್ದು, ರೈತರು ಹಣೆಮೇಲೆ ಕೈ ಇಟ್ಟುಕೊಂಡು ಮುಗಿಲಿಗೆ ಮುಖ ಮಾಡಿ ಮಳೆರಾಯನ ದಾರಿ ಕಾಯುತ್ತ ಕುಳಿತಿದ್ದಾರೆ. ಮಳೆ ಯಾವಾಗ ಆಗುತ್ತದೆಯೋ ಏನೋ ಎಂದು ರೈತರು, ಕೂಲಿ ಕಾರ್ಮಿಕರು ನಿಟ್ಟುಸಿರು ಬಿಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.ಜೂನ್ ಮೊದಲ ವಾರವಾದರೂ ಇನ್ನೂ ಬಿಸಿಲಿನ ತಾಪಮಾನ ಕಡಿಮೆಯಾಗಿಲ್ಲ. ಸದ್ಯ ಈ ಬಿಸಿಲಿನ ಸೆಖೆ ನೋಡಿದರೆ ಇನ್ನೂ ಏಪ್ರಿಲ್ ಮೇ ತಿಂಗಳು ಇದ್ದಂತೆಯೇ ಬಿಸಿಲು ಇದೆ ಎಂದು ರೈತರು ಅಲ್ಲಲ್ಲಿ ತಮ್ಮ ಮನದ ಮಾತುಗಳ ಮೂಲಕ ಉದ್ಗಾರ ತೆಗೆಯುತ್ತಿದ್ದಾರೆ.!!

ಪ್ರಸ್ತುತ ಕೃಷ್ಣೆಯ ಒಡಲು ಈಗ ದಿನದಿಂದ ದಿನಕ್ಕೆ ಬರಿದಾಗುತ್ತಿರುವುದರಿಂದ ಈ ಭಾಗದ ರೈತರ ಬದುಕು ಬಂಗಾರ ಮಾಡುವ ಕಬ್ಬು ಬೆಳೆಗೆ ಸಮರ್ಪಕವಾಗಿ ನೀರು ಪೂರೈಕೆ ಆಗದೇ ಇರುವುದು ರೈತರ ಮನದಲ್ಲಿ ಆತಂಕ ಶುರುವಾಗಿದೆ. ಈ ಭಾಗದ ಜನಪ್ರತಿನಿಧಿಗಳು ಬರಿದಾಗುತ್ತಿರುವ ಕೃಷ್ಣೆಯ ಒಡಲು ಪೂರ್ಣ ಪ್ರಮಾಣ ಖಾಲಿ ಆಗಿ ಭೀಮರೂಪದ ಸಮಸ್ಯೆಗಳು ಉಲ್ಬಣಗೊಳ್ಳುವ ಮುಂಚೆಯೇ ಸಮರ್ಪಕ ಮಳೆ ಆಗುವವರೆಗೆ ಪ್ರಸ್ತುತ 1 ಟಿ.ಎಂ.ಸಿ ನೀರು ಮಹಾರಾಷ್ಟ್ರ ರಾಜ್ಯದ ಸಂಬಂಧಿಸಿದ ಅಧಿಕಾರಿಗಳಿಗೆ ವಿನಂತಿಸಿ ನೀರು ಬಿಡುವಂತೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ನದಿ ತೀರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*





