ಬೆಳಗಾವಿ.ರಾಯಬಾಗ:~* ನವಭಾರತದ ನಿರ್ಮಾಪಕರಾದ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೇ ಸಜ್ಜನರ ಸತ್ಸಂಗ ಮಾಡಬೇಕು.ಈ ರಾಷ್ಟ್ರದ ಭರವಸೆಯ ಬೆಳಕಾದ ನಿಮ್ಮ ದಿವ್ಯ ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ ಒಳ್ಳೆಯ ಹವ್ಯಾಸಗಳು ನಿಮ್ಮ ಹಣೆಬರಹವನ್ನೇ ಬದಲಿಸುತ್ತವೆ ಎಂದು ಮಜಲಟ್ಟಿ ಸರಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕರು, ಸಾಹಿತಿ ಪ್ರೊ ವಿ.ಬಿ.ಚೌಗಲಾ ಅಭಿಮತ ವ್ಯಕ್ತಪಡಿಸಿದರು.
ಅವರು ಕೆ.ಎಲ್.ಇ. ಪದವಿ ಮಹಾವಿದ್ಯಾಲಯ ಶಿರಗುಪ್ಪಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತುಗ್ರಾಮ ಇಂಗಳಿಯಲ್ಲಿ ಗುರುವಾರ ದಿನಾಂಕ 22 ರಂದು ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಉಪನ್ಯಾಸಕರಾಗಿ ಪಾಲ್ಗೊಂಡು “ಮಾದಕ ವ್ಯಸನಗಳ ನಿರ್ಮೂಲನೆ ಬಗ್ಗೆ ಯುವಕರಿಗೆ ಜಾಗೃತಿ ಅಭಿಯಾನ” ಕುರಿತು ಉಪನ್ಯಾಸ ನೀಡಿದರು.ಮಾಧ್ಯಮಗಳಲ್ಲಿ ಬರುವ ಕೆಲವು ಜಾಹೀರಾತುಗಳನ್ನು ನೋಡುವ ಯುವಕರು ಅದಕ್ಕೆ ತೀವ್ರ ಮೋಹಿತರಾಗಿ ಆಕರ್ಷಿಸುತ್ತಿದ್ದು ,
ಇಂದಿನ ಬಹುತೇಕ ವಿದ್ಯಾರ್ಥಿಗಳು ಮೋಜು ಮಸ್ತಿಯಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡಿ ವಿಕೃತರಾಗಿ ಕೆಟ್ಟ ಹಾದಿ ಹಿಡಿದಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪ್ರೊ.ವಿ.ಬಿ.ಚೌಗಲಾ ಅವರನ್ನು ಎನ್. ಎಸ್.ಎಸ್.ಘಟಕದ ಪರವಾಗಿ ವೇದಿಕೆ ಮೇಲಿನ ಗಣ್ಯ ಮಾನ್ಯರು ಆತ್ಮೀಯವಾಗಿ ಸತ್ಕರಿಸಿದರು. ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಸ್.ಬಿ.ಪಾಟೀಲ ಅವರು ಮಾತನಾಡಿ,”ಎನ್. ಎಸ್.ಎಸ್., ಇಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಈ ಜಗತ್ತಿನಲ್ಲಿ ಹೇಗೆ ಬಾಳಿ ಬದುಕಬೇಕು ಎಂದು ಚೆನ್ನಾಗಿ ಪಾಠ ಕಲಿಸುತ್ತದೆ.ಸಹಬಾಳ್ವೆ, ಸಹಕಾರ,ಶಿಸ್ತು,ನೈತಿಕ ಮೌಲ್ಯಗಳು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಬಹಳ ಸಹಕಾರಿ ಆಗುತ್ತವೆ ಎಂದು ಮಾರ್ಮಿಕವಾಗಿ ನುಡಿದರು.ಸದಾವಕಾಲ ತಾವೆಲ್ಲರೂ ಸಜ್ಜನರ ಸಹವಾಸ ಮಾಡಿ ಒಳ್ಳೆಯ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ತಮ್ಮ ಅಧ್ಯಕ್ಷೀಯ ಆಶಯ ನುಡಿಗಳನ್ನು ಹಂಚಿಕೊಂಡರು.
ಶಿಬಿರಾಧಿಕಾರಿ ಶ್ರೀ ಎಂ.ಎಸ್.ಕೌಲಗುಡ್ಡ,ಸಹಾಯಕ ಶಿಬಿರಾಧಿಕಾರಿ ಪ್ರೊ.ಎಲ್.ಎಸ್.ವಂಟಮೂರೆ, ಕನ್ನಡ ಉಪನ್ಯಾಸಕರಾದ ಡಾ.ಜಯವೀರ ಎ.ಕೆ.,ಪ್ರೊ.ರಾಧಿಕಾ ಯಾದವ ಹಾಗೂ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಿಬಿರಾರ್ಥಿ. ಕು.ಸಿದ್ದಾರ್ಥ ಐತವಾಡೆ ಮಾದಕ ವ್ಯಸನಗಳ ಕುರಿತು ಅಭಿಪ್ರಾಯ ಹಂಚಿಕೊಂಡರು.ಪ್ರಾರಂಭದಲ್ಲಿ ಕು.ನಂದಿನಿ ಅಂಬಿ ಸ್ವಾಗತಿಸಿದರು. ಕು.ನಫೀಸಾ ಅರಬ ಹಾಗೂ ಕು. ಸೂರಜ್ ಐದಮಾಳೆ ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ಕು.ಶುಭಂ ಭರಮದೆ ಶರಣು ಸಮರ್ಪಿಸಿದರು.
ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*





