ಲೇಖನ: ಡಾ.ಜಯವೀರ ಎ.ಕೆ*.
*ಕನ್ನಡ ಪ್ರಾಧ್ಯಾಪಕರು*
*ಖೇಮಲಾಪುರ
ನಮ್ಮ ಪುರಾತನ ಪಾರಂಪರಿಕ ವೈದ್ಯ ಚಿಕಿತ್ಸೆಯಲ್ಲಿ ಆಯುರ್ವೇದ ಮತ್ತು ನಾಟಿ ವೈದ್ಯ ತನ್ನದೇ ಆದ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.ಸನಾತನ ಚಿಕಿತ್ಸೆಯೊಂದಿಗೆ ವೃತ್ತಿಯಾಗಿ ಬಿಂಬಿಸಿ, ಇಂದು ವಿಶ್ವಾದ್ಯಂತ ತನ್ನ ಚಿಕಿತ್ಸೆಯ ವಿಧಾನದ ಮೂಲಕ ಎಲ್ಲರ ಗಮನ ಸೆಳೆದಿದೆ. ಅನೇಕ ಗುಣಪಡಿಸಲಾಗದ ಕಾಯಿಲೆಗಳು ನಮ್ಮ ನಾಟಿ ವೈದ್ಯದ ಮೂಲಕ ಗುಣಪಡಿಸಿ ಅಚ್ಚರಿಯನ್ನುಂಟು ಮಾಡಿದೆ.
ಅನೇಕ ತಲೆಮಾರುಗಳ ಮಾರ್ಗದರ್ಶನದಲ್ಲಿ ನಮ್ಮ ಕಾಡು, ಮೇಡುಗಳ ಮತ್ತು ಮತ್ತು ಸಿದ್ದ ಗಿಡಮೂಲಿಕೆಗಳ, ಔಷಧಿಗಳ ಚಿಕಿತ್ಸಾ ವಿಧಾನ ಇನ್ನೂ ನಮ್ಮ ದೇಶದಲ್ಲಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಕರ್ನಾಟಕದಲ್ಲಿ ನಮ್ಮ ನಾಟಿ ವೈದ್ಯ ಪರಂಪರೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.ನಮ್ಮ ನಾಡಿನಲ್ಲಿ ಅನೇಕ ನಾಟಿ ವೈದ್ಯರು ಒಂದೊಂದು ರೋಗಕ್ಕೆ ಮದ್ದು ನೀಡುತ್ತ ಸಾಧನೆಯ ಪಥದಲ್ಲಿ ಹೆಗ್ಗುರುತು ಮುಡಿಸುತ್ತಿದ್ದಾರೆ. ಇಂತಹ ಅನೇಕ ಪಾರಂಪರಿಕ ನಾಟಿ ವೈದ್ಯರಲ್ಲಿ ಗದಗ ಜಿಲ್ಲೆ ನರಗುಂದ ತಾಲ್ಲೂಕು ವಾಸನ ಎಂಬ ಪುಟ್ಟ ಗ್ರಾಮದ ಡಾ.ಹನುಮಂತ ಮಳಲಿ ಅಗ್ರಗಣ್ಯರಾಗಿ ಸೂಜಿಗಲ್ಲಿನಂತೆ ಜನಮನ ಸೆಳೆಯುತ್ತಿದ್ದಾರೆ.
ತಮ್ಮ ತಂದೆ ತುಳಸಿಗಿರಿಯಪ್ಪ, ತಾಯಿ ಶ್ರೀಮತಿ ದೇವಕ್ಯಮ್ಮ ದಂಪತಿಗಳ ಉದರದಿ ಜನಿಸಿದ ಡಾ.ಮಳಲಿ ಅವರಿಗೆ ಜೀವನದಲ್ಲಿ ತಾನೊಬ್ಬ ವೈದ್ಯನಾಗಬೇಕೆಂಬ ಉತ್ಕಟ ಬಯಕೆ ಇತ್ತು. ಅವರು ಆರಂಭದಲ್ಲಿ ಮಶಿನಿಸ್ಟ ವಿಷಯದಲ್ಲಿ ಐ.ಟಿ.ಆಯ್.ಶಿಕ್ಷಣ ಪಡೆದು, ಬೆಂಗಳೂರಿನ ಎಚ್.ಎ.ಎಲ್.ನಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದಾರೆ. ತಮ್ಮ ತಾಯಿಯ ಅಪೇಕ್ಷೆಯಂತೆ 1994 ರಲ್ಲಿ ತವರೂರಿಗೆ ಆಗಮಿಸಿ “ತಾನೊಂದು ಬಗೆದರೆ ದೈವೊಂದು ಬಗೆಯಿತು” ಎಂಬ ಉಕ್ತಿಯಂತೆ ತಮ್ಮ ಗದ್ದೆಯಲ್ಲಿಯೇ ಸಾವಯವ ಕೃಷಿ ಮಾಡುವತ್ತ ಆದ್ಯ ಗಮನ ನೀಡಿದರು.ಹಲವಾರು ಗಿಡಮೂಲಿಕೆಗಳನ್ನು ಬೆಳೆದು ಹಲವು ವಿಪರೀತ ಮಾರಕ ರೋಗಗಳಿಗೆ ಔಷಧಿ ಸಿದ್ಧಪಡಿಸಿ ಬರುವ ರೋಗಿಗಳ ಅನೇಕ ಕಾಯಿಲೆಗಳಿಗೆ ಮದ್ದು ನೀಡುವ ಕಾರ್ಯದಲ್ಲಿ ನಿರತರಾದರು. ಜೀವನದಲ್ಲಿ ವೈದ್ಯರಾಗಬೇಕೆಂಬ ಬಯಕೆಯನ್ನು ಈ ಮೂಲಕ ಈಡೇರಿಸಿಕೊಂಡರು.
ಅವರು ಜೀವನದಲ್ಲಿ ಓದಿದ್ದು ಬೇರೆ ಘಟಿಸಿದ್ದು ಬೇರೆಯೇ ಆಗಿದ್ದು ಗಮನಾರ್ಹ!!! ತಮ್ಮ ಮನೆತನದ ಪರಂಪರೆಯಿಂದ ಬಂದ ದೇಶಿ ಪದ್ಧತಿಯ ಉಪಚಾರ ಸಲಹೆ ಇವುಗಳನ್ನೇ ಪ್ರವೃತ್ತಿಯನ್ನಾಗಿಸಿಕೊಂಡರು.
ಕ್ರಿಯಾಶೀಲತೆಯ ಶೋಧಕ ಮನಸ್ಸಿನ ಡಾ.ಮಳಲಿ ಅವರು ಕಳೆದ 29 ವರುಷಗಳಲ್ಲಿ 2 ಲಕ್ಷ 20 ಸಾವಿರಕ್ಕೂ ಅಧಿಕ ರೋಗಿಗಳಿಗೆ ತಮ್ಮ ಗದ್ದೆಯಲ್ಲಿ ಬೆಳೆದ ಗಿಡಮೂಲಿಕೆಗಳಿಂದ ತಾವೇ ಮದ್ದು ಸಿದ್ಧಪಡಿಸಿ, ಮಾರಕ ದೀರ್ಘಕಾಲದ ಕಾಯಿಲೆಗಳಿಗೆ ಔಷಧಿ ನೀಡಿದ್ದು ಅವರ ಸಾಮಾಜಿಕ ಸೇವಾ ಕೈಂಕರ್ಯಕ್ಕೆ ಒಂದು ಅತ್ಯುತ್ತಮ ನಿದರ್ಶನ.
ಇವರೊಳಗೆ ಒಬ್ಬ ವಿಶಿಷ್ಟ ಪ್ರವಚನಕಾರ ಅಡಗಿಕೊಂಡಿದ್ದಾನೆ ಎಂಬ ನುಡಿಗೆ ಉತ್ತಮ ನಿದರ್ಶನ ಎಂಬಂತೆ ತಮ್ಮ ವಿಶಿಷ್ಟ ದೇಶಿ ಸೊಗಡಿನ ಮೂಲಕ ಆಕರ್ಷಕ ಚತುರ ವಾಗ್ಮಿ ಎಂದು ಜನಮಾನಸದಲ್ಲಿ ಹೆಸರು ಗಳಿಸಿರುವ ಇವರು ಕಳೆದ 15 ವರುಷಗಳಿಂದ 3000 ಕ್ಕೂ ಹೆಚ್ಚು ಧಾರ್ಮಿಕ, ಸಾಮಾಜಿಕ ಪ್ರವಚನಗಳನ್ನು ನೀಡುವುದರ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಬೌದ್ಧಿಕ ಶ್ರಮದಾನ ಮಾಡಿ “ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಮೇಲು” ಎಂಬ ಮಹಾತ್ಮಾ ಗಾಂಧೀಜಿಯವರ ನುಡಿಯನ್ನು ಇಡೀ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಅಮೂಲ್ಯ ಸಮಯ ವಿನಿಯೋಗಿಸಿದ್ದು ಅತ್ಯಂತ ಸ್ಮರಣೀಯ ಎನಿಸಿದೆ.
ಡಾ.ಹನುಮಂತ ಮಳಲಿ ಅವರ ಬಗ್ಗೆ ನಾನು ಮೊದಲು ಕಂಡಿದ್ದು ತೀರಾ ಇತ್ತೀಚೆಗೆ, ಅದು ಸಾಮಾಜಿಕ ಜಾಲತಾಣದಲ್ಲಿ, ಅವರ “ಆರೋಗ್ಯ ಸೂತ್ರಗಳು” ಶೀರ್ಷಿಕೆಯ ವಿಡಿಯೋ ಪೂರ್ಣವಾಗಿ ಆಲಿಸಿದೆ. ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ತಲೆನೋವಿಗೆ ಮನೆಮದ್ದು ಹೇಗೆ ಮಾಡಬೇಕು ಎಂಬ ಬಗ್ಗೆ ಸೊಗಸಾದ ಶೈಲಿಯಿಂದ ವಿಶ್ಲೇಷಣೆ ಮಾಡುತ್ತ, ಶುದ್ಧ ದೇಶಿ ಹಸುವಿನ ತುಪ್ಪ ನಮ್ಮ ಮೂಗಿನ ಹೊರಳೆಗೆ ತಲಾ ಎರಡು ಹನಿ ಹಾಕಿದರೆ ಜೀವನದಲ್ಲಿಯೇ ತಲೆನೋವು ಎಂದೆಂದಿಗೂ ಬರಲಾರದು ಎಂದು ಹೇಳಿದರು. ಅದರಂತೆ ಈ ಮೊದಲು ನನಗೂ ಈ ಒತ್ತಡದ ಬದುಕಿನಲ್ಲಿ ಆಗಾಗ ತಲೆನೋವು ಬರುತ್ತಿತ್ತು. ನಾನೂ ಸಹ ಔಷಧಿ ಅಂಗಡಿಗಳಲ್ಲಿ ಸಿಗುವ ಆಲೋಪಥಿಕ್ “ನೈಸ್” ಮಾತ್ರೆಯನ್ನು ಪದೇ ಪದೇ ಸೇವನೆ ಮಾಡುತ್ತಿದ್ದೆ.ಡಾ.ಮಳಲಿ ಅವರು ವಿಪರೀತ ತಲೆನೋವಿಗೆ ಮನೆಮದ್ದು ನೀಡಿದ ಸಲಹೆಯಂತೆ ಮೂಗಿನ ಹೊರಳಿಗೆ ಶುದ್ಧ ದೇಶಿ ಆಕಳಿನಿಂದ ಮಾಡಿದ ತುಪ್ಪವನ್ನು ಎರಡೆರಡು ಹನಿ ಹಾಕಿಕೊಂಡೆ. ನಿಜಕ್ಕೂ ನನಗೆ ತಲೆನೋವೆ ಮಾಯವಾಗಿದ್ದು ಡಾ.ಮಳಲಿ ಅವರ ಮನೆ ಮದ್ದಿನ ಮೇಲೆ ನನಗೆ ಹಂತ ಹಂತವಾಗಿ ನಂಬಿಕೆ ಹೆಚ್ಚುತ್ತಾ ಹೋಯಿತು. ಅವರ ಈ ಹಿಂದೆಯೇ ಯೂಟ್ಯೂಬ್ ನಲ್ಲಿ ಪ್ರಸರಣಗೊಂಡ ಎಲ್ಲಾ ವಿಡಿಯೋಗಳನ್ನು ಬಿಡುವಿನಲ್ಲಿ ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ
ಡಾ.ಮಳಲಿ ಅವರು ಅನೇಕ ರೋಗಗಳಿಗೆ ಮನೆಮದ್ದು ಹೇಗೆ ಮಾಡಬೇಕೆಂದು ಉತ್ತಮ ಉಪಯುಕ್ತವಾದ ಮಾಹಿತಿ ನೀಡಿರುವ “ಸ್ವಯಂ ಸಂಜೀವಿನಿ” ಎಂಬ ಕೃತಿ ಬರೆದಿದ್ದಾರೆ. ಎಂದು ಶಿರೋಳದ ನನ್ನ ಆತ್ಮೀಯ ಸ್ನೇಹಿತರು, ಸಾಹಿತಿ ಶ್ರೀ ಚಿದಂಬರ ಪಿ.ನಿಂಬರಗಿ ಅವರು ಮಾಹಿತಿ ನೀಡಿದ ನಂತರ ತಡಮಾಡದೇ ಬೆಂಗಳೂರಿನಿಂದ ಈ ಕೃತಿ ತರಿಸಿದೆ.
ಪ್ರಸ್ತುತ ಈ “ಸ್ವಯಂ ಸಂಜೀವಿನಿ” ಕೃತಿಯು ಮನುಷ್ಯನ ಪಾದದಿಂದ ಮೊದಲು ಮಾಡಿಕೊಂಡು ಆತನ ಮಸ್ತಕದವರೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳಿಗೆ, ಜೊತೆಗೆ ಮಾರಕ ರೋಗಗಳಾದ ಕ್ಯಾನ್ಸರ್, ಗ್ಯಾಂಗರಿನ್,ಸೊರೈಸಿಸ್ ದಂತಹ ರೋಗಗಳಿಗೆ ಮಾಡುವ ನಿಸರ್ಗ ಕ್ರಮ ಜೊತೆಗೆ ರಾಮಬಾಣವಾಗುವ “ಮನೆಮದ್ದು” ಮಾಡುವ ವಿಧಾನಗಳನ್ನು ಚೆನ್ನಾಗಿ ಅನಾವರಣಗೊಳಿಸಿದೆ.ಈ ಕೃತಿ ಓದಿ ಮುಗಿಸಿದಾಗ ನನ್ನ ಮನದಲ್ಲಿ ಆರೋಗ್ಯದ ಕುರಿತು ಮೂಡಿದ ಭಾವಗಳು ನೂರೆಂಟು. “ಆರೋಗ್ಯ ಭಾಗ್ಯಕ್ಕಿಂತ ಮತ್ತೊಂದು ಭಾಗ್ಯವಿಲ್ಲ.ಮನುಷ್ಯ ಶತ್ರುಗಳ ವಿರುದ್ಧ ಹೋರಾಡಿ ಜಯ ಸಾಧಿಸಬಹುದು.ಆದರೆ ಅನಾರೋಗ್ಯದ ವಿರುದ್ಧದಿಂದ ಸಾಧ್ಯವಿಲ್ಲ. ನಾವು ಎಷ್ಟೇ ಐಶ್ವರ್ಯ ಸಂಪಾದಿಸಿದರೂ ಆರೋಗ್ಯ ಇಲ್ಲದಿದ್ದರೆ ಅದು ಶುದ್ಧ ವ್ಯರ್ಥವೇ ಎನಿಸಿತು.
ಈ ಕೃತಿಯು ಈಗಾಗಲೇ 5 ಬಾರಿ ಮರುಮುದ್ರಣಗೊಂಡು ವಾಚಕರನ್ನು ತನ್ನತ್ತ ಸೆಳೆದಿದೆ.ಪ್ರಸ್ತುತ ಇದು 5 ನೇ ಪರಿಷ್ಕೃತ ಆವೃತ್ತಿ.ಕೆಲವು ವನಸ್ಪತಿ, ಗೋವು, ಅಗ್ನಿಹೋತ್ರ,ಮುಂತಾದ ಉಪಯುಕ್ತ ಆರೋಗ್ಯಕರ ವಿಷಯಗಳನ್ನು ಇದರಲ್ಲಿ ಸೇರಿಸಿ ಪ್ರಕಟಿಸಿದ್ದಾರೆ.
“ಗಾವೋ ವಿಶ್ವಸ್ಯ ಮಾತರಃ” ಎಂಬ ದಿವ್ಯ ಸಂದೇಶ ಮುಖಪುಟದಲ್ಲಿ ಪ್ರಕಟಿಸಿ ಈ ಮೂಲಕ “ಗೋ ಮಾತೆಯೇ ನನ್ನ ಆರಾಧ್ಯ ದೈವ” ಎಂದು ಡಾ.ಮಳಲಿ ಅವರು ಹೆಮ್ಮೆಯಿಂದಲೇ ಸ್ಮರಿಸುತ್ತಾರೆ.ಸುದೀರ್ಘವಾಗಿಯೇ ಸದಾಶಯದ ಮಾತುಗಳನ್ನು ಅಕ್ಷರರೂಪದಲ್ಲಿ ಪೋಣಿಸಿ, ಈ ಕೃತಿಗೆ ಹೆಸರು ಸೂಚಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರೀಯ ಕಾರ್ಯಕಾರಿಣಿಯ ಆಮಂತ್ರಿತ ಹಿರಿಯ ಸದಸ್ಯರಾದ ಶ್ರೀ ನ.ಕೃಷ್ಣಪ್ಪ ಅವರ ಮುನ್ನುಡಿಯ ಮಾತುಗಳನ್ನು ಸೊಗಸಾಗಿ, ಮಾರ್ಮಿಕವಾಗಿ ಹಂಚಿಕೊಂಡಿದ್ದಾರೆ.
ಶ್ರೀ ಆರ್.ನಾಗೇಶ್,ಶ್ರೀ ಮಂಗೇಶ ಬೇಂಡೆ, ಡಾ.ರಾಘವೇಂದ್ರರಾವ ಕುಲಕುರ್ಣಿ, ಹಾಗೂ ಶ್ರೀ ಮಾರುತಿ ಸಿ.ಕಟ್ಟಿಮನಿ ಅವರ ಅಂತರಾಳದಿಂದ ಹೊರಹೊಮ್ಮಿದ ಮನದಾಳದ ಶುಭಾಶಯಗಳೆಂಬ ಜಗುಲಿಯ ಮೇಲೆ ಸೊಗಸಾಗಿ ಸಮೃದ್ಧವಾಗಿ ಡಾ.ಮಳಲಿ ಅವರು ವಿರಾಜಮಾನರಾಗಿದ್ದಾರೆ. ಈ ಕೃತಿಯ ಪ್ರತಿಯೊಂದು ಪುಟದ ಕೆಳಭಾಗದಲ್ಲಿಯೂ ಒಂದೊಂದು ಸಾಲಿನಲ್ಲಿ ವೈವಿಧ್ಯಮಯ ಮದ್ದುಗಳು ಚೆನ್ನಾಗಿ ಓದಿಸಿಕೊಂಡು ಹೋಗುತ್ತವೆ.
ಇದು ರೋಗ ಬಂದವರು ಮಾತ್ರ ಓದುವ ಪುಸ್ತಕ ಅಲ್ಲ.!! ನಾವೆಲ್ಲರೂ ಈಗ ಸಮಾಜದಲ್ಲಿ ಆರೋಗ್ಯದಿಂದ ಹೇಗೆ ಇರಬೇಕು, ಹೇಗೆ ಬದುಕಬೇಕು ಎಂದು ತಿಳಿಯಾದ ಶೈಲಿಯಲ್ಲಿ ಚೆನ್ನಾಗಿ ತಿಳಿಸುತ್ತದೆ. ಮಾತ್ರವಲ್ಲ, ಹೇಗೆ ಇರಬಾರದು ಎಂದು ಚಿಂತನೆಗೆ ಹಚ್ಚುವ ವಿಶಿಷ್ಟ ವಿಭಿನ್ನವಾದ ಕೃತಿಪುಷ್ಪ.
ಸಮಾಜ ಸೇವೆಯೇ ಒಂದು ತಪಸ್ಸು ಎಂದು ತಿಳಿದುಕೊಂಡಿರುವ ಡಾ.ಮಳಲಿ ಅವರು ಪ್ರಸೂತಿ, ಅಪಘಾತ, ಹಾಗೂ ಸುಟ್ಟುಕೊಂಡ ಕಾಯಿಲೆಗಳನ್ನು ಹೊರತುಪಡಿಸಿ, ಮಾನವ ಜೀವಿಗೆ ಬರುವ ಎಲ್ಲಾ ರೋಗಗಳಿಗೆ ತಮ್ಮ ಪಾರಂಪರಿಕ ನಾಟಿ ಔಷಧಿ ನೀಡುತ್ತ ರೋಗಿಗಳ ಪಾಲಿನ ಆಶಾಕಿರಣ ಎನಿಸಿದ್ದಾರೆ.ರಾಜ್ಯ ಹೊರರಾಜ್ಯಗಳಿಂದ ವಿದೇಶದಿಂದ ಇವರು ಇರುವ ವಾಸನದತ್ತ ರೋಗಿಗಳು ಹಂಬಲಿಸಿ ಬರುತ್ತಾರೆ.ವೈದ್ಯಲೋಕದಲ್ಲಿಯೇ ಗುಣವಾಗದ ಅನೇಕ ರೋಗಿಗಳು ಡಾ.ಮಳಲಿ ಅವರ ಮದ್ದಿನಿಂದ ಅದೆಷ್ಟೋ ರೋಗಿಗಳು ಪುನರ್ಜನ್ಮ ಪಡೆದು ನೆಮ್ಮದಿಯ ಜೀವನ ನಡೆಸುತ್ತಿರುವ ಉದಾಹರಣೆಗಳು ಸಾಕಷ್ಟಿವೆ.
ಪ್ರತಿ ಬುಧವಾರ ಜಾತ್ರೆಯ ಸ್ವರೂಪದಲ್ಲಿ ಸಹಸ್ರಾರು ರೋಗಿಗಳು ದೂರದ ಊರುಗಳಿಂದ ಗದಗ ಜಿಲ್ಲೆ ನರಗುಂದ ತಾಲ್ಲೂಕಿನಲ್ಲಿ ಬರುವ ಕೊಣ್ಣೂರಿನಿಂದ 2 ಕಿ.ಮೀ. ದೂರದ ವಾಸನ ಗ್ರಾಮದ ಡಾ.ಮಳಲಿ ಅವರ ನಿವಾಸದ ಮುಂದೆ ಆಗಮಿಸಿ ಸಾಲುಗಟ್ಟಿ ನಿಂತು ಔಷಧಿ ಪಡೆದುಕೊಂಡು ನಿರ್ಗಮಿಸುತ್ತಾರೆ.ಚಿಕಿತ್ಸೆಗೆ ನಿರ್ದಿಷ್ಟವಾಗಿ ಶುಲ್ಕ ನಿಗಧಿಪಡಿಸದೇ ಇರುವ ಇವರು, ಬಡ ಬಗ್ಗರಿಗೆ ಆರ್ಥಿಕ ಬಿಕ್ಕಟ್ಟು ಎಂದು ಬಂದ, ಹಲವು ರೋಗಿಗಳಿಗೆ ಔಷಧ ನೀಡಿ, ಕಾರುಣ್ಯದ ಕಿರಣ ಬೀರಿದ್ದಾರೆ. “ಸ್ವಯಂ ಸಂಜೀವಿನಿ” ಕೃತಿಯು ಪ್ರತಿಯೊಬ್ಬರ ಮನೆಯಲ್ಲಿ ಇದ್ದರೆ ನಿಸ್ಸಂದೇಹವಾಗಿ ಒಬ್ಬ ಪಾರಂಪರಿಕ ವೈದ್ಯ ಇದ್ದಂತೆಯೇ ಎಂದು ಹೇಳಿದರೆ ಉತ್ಪ್ರಕ್ಷೆ ಎನಿಸಲಾರದು. 150 ರೂಪಾಯಿ ಮುಖಬೆಲೆಯ ಈ ಪುಸ್ತಕವು “ಸ್ವಯಂ ಸಂಜೀವಿನಿ ಪ್ರಕಾಶನ” ಮೂಲಕ ಬೆಳಕು ಕಂಡಿದೆ. ತಮ್ಮ ಹೆತ್ತ ಮಾತೆ ಶ್ರೀಮತಿ ದೇವಕ್ಯಮ್ಮ ಅವರ ಪಾದಕಮಲಗಳಿಗೆ ನೆಮ್ಮದಿಯ ಜೀವನದ ದಿವ್ಯ ರಕ್ಷಾ ಕವಚವಾದ “ಸ್ವಯಂ ಸಂಜೀವಿನಿ” ಗ್ರಂಥ ಸಮರ್ಪಿಸಿದ್ದು, ಇವರ ಮಾತೃಪ್ರೇಮಕ್ಕೆ ಒಂದು ಉತ್ತಮ ಸಾಕ್ಷಿ.
“ಆಹಾರವೇ ಅದ್ಬುತ ಔಷಧಿ, ಅಡುಗೆ ಮನೆಯೇ ಔಷದಾಲಯ”, ಕೋಟಿ ವಿದ್ಯೆಗಳಲ್ಲಿ ನಾಟಿ ವೈದ್ಯವೇ ಮೇಲು ಎಂಬ ಮೆಲ್ಲುವ ಸಂದೇಶಗಳನ್ನು ಚೆನ್ನಾಗಿ ತಿಳಿದುಕೊಂಡು ಎಂದಿಗೂ ಪ್ರಚಾರ ಬಯಸದ ಇವರು ಗುಣಮುಖರಾಗಿ ಹೋದ ರೋಗಿಗಳ ಹಂಬಲದ ಹಾರೈಕೆಗಳೇ ನನಗೆ ದೊಡ್ದ ಪ್ರಶಸ್ತಿ ಪುರಸ್ಕಾರಗಳು ಎಂದು ಅರಿತ ವಿಶಾಲ ಘನ ಮನದ ಡಾ.ಮಳಲಿ ಅವರು ಸ್ವಾಸ್ಥ್ಯಕರ ಸಮಾಜ ನಿರ್ಮಾಣಕ್ಕೆ ಹಗಲಿರುಳು ತಮ್ಮ ದೇಹ ಸವೆಸುತ್ತಿರುವ ಶ್ರಮಜೀವಿ, ಕಾಯಕಜೀವಿ ಇವರ ಶ್ರದ್ಧೆಯ, ನಿಷ್ಠೆಯ ಸೇವಾ ಕೈಂಕರ್ಯ ಅನವರತವೂ ಹೀಗೆಯೇ ಸಾಗುತ್ತಿರಲಿ ಎಂದು ನಾನು ಮನದುಂಬಿ ಆಶಿಸುತ್ತೇನೆ.
【”ವಾಸನ ಎಂಬ ಪುಟ್ಟ ಗ್ರಾಮವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪಸರಿಸಿದ ಕೀರ್ತಿ ಡಾ.ಮಳಲಿ ಅವರಿಗೆ ಸಲ್ಲಬೇಕು. ಇಂದು ಅತೀ ಹೆಚ್ಚು ವ್ಯಾಪಾರೀಕರಣವಾಗುತ್ತಿರುವ ವೈದ್ಯಕೀಯ ರಂಗದಲ್ಲಿ ಇಂಥಹ ಸಾಧಕರು ಇದ್ದಾರೆಯೇ? ನಮ್ಮೂರು ಸಮೀಪದಲ್ಲಿ ಡಾ.ಹನುಮಂತ ಮಳಲಿ ಅವರ ಗ್ರಾಮ ವಾಸನ ಎಂದು ಹೇಳಲು ನನಗೆ ಅತೀವ ಸಂತೋಷ ಹಾಗೂ ಅಭಿಮಾನವಾಗುತ್ತದೆ.”】
ಚಿದಂಬರ ಪಿ.ನಿಂಬರಗಿ
(ಶಿರೋಳ) ತಾ.ನರಗುಂದ
*ಗದಗ ಜಿಲ್ಲೆ





