ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಬೆಳಗಾವಿ ವಲಯ ಜಂಟಿ ನಿರ್ದೇಶಕರಾಗಿ ಬಸವರಾಜ ಹೂಗಾರ ಅಧಿಕಾರ ಸ್ವೀಕಾರ  

Share the Post Now

 ಬೆಳಗಾವಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಅಧಿಕಾರ ವಿಕೇಂದ್ರಿಕರಣ ಮಾಡುವ ನಿಟ್ಟಿನಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಇಲಾಖೆಯ ಜಂಟಿ ನಿರ್ದೇಶಕರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ಕಂದಾಯ ವಿಭಾಗಕ್ಕೆ ಬೆಳಗಾವಿ ವಲಯದ ಜಂಟಿ ನಿರ್ದೇಶಕರಾಗಿ ಬಸವರಾಜ ಹೂಗಾರ ಸೋಮವಾರ (ಸೆ.20) ಬೆಳಗಾವಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಬೆಳಗಾವಿ ವಲಯವು ಬಾಗಲಕೋಟ, ವಿಜಯಪೂರ, ಹಾವೇರಿ, ಗದಗ, ಕಾರವಾರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಾಂಸ್ಕೃತಿಕ ವ್ಯಾಪ್ತಿಯನ್ನು ಹೊಂದಿದೆ.

ಈ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಟ್ರಸ್ಟ್‌ ಗಳು, ಅಕಾಡೆಮಿಗಳು ಮತ್ತು ರಂಗಾಯಣ, ರಂಗಮಂದಿರಗಳು ಹಾಗೂ ಏಳು ಜಿಲ್ಲೆಗಳ ಸಹಾಯಕ ನಿರ್ದೆಶಕರ ಮೇಲ್ವಿಚಾರಣೆಯ ಅಧಿಕಾರವನ್ನು ನೂತನ ಜಂಟಿ ನಿರ್ದೇಶಕರಿಗೆ ನೀಡಲಾಗಿದೆ.

ಕವಿ, ಬರಹಗಾರ ಬಸವರಾಜ ಹೂಗಾರ ಅವರು ಮೂಲತಃ ಬಾಗಲಕೋಟ ಜಿಲ್ಲೆಯ ಸೀಮಿಕೇರಿ ಗ್ರಾಮದವರಾಗಿದ್ದು, ಸಹಾಯಕ ನಿರ್ದೆಶಕರಾಗಿ ತುಮಕೂರ, ಕೊಪ್ಪಳ, ಕಾರವಾರ, ಮಂಡ್ಯ ಮತ್ತು ಧಾರವಾಡ ಹೀಗೆ ಅನೇಕ ಜಿಲ್ಲೆಗಳಲ್ಲಿ ಅಲ್ಲದೇ ಬೆಂಗಳೂರಿನ ಲಲಿತಕಲಾ ಅಕಾಡೆಮಿ ರಜಿಸ್ಟಾರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಇವರ ತತ್ರಾಣಿ ಕಾವ್ಯಕ್ಕೆ ಬಹುಮಾನ ನೀಡಿ ಗೌರವಿಸಿದೆ. “ತತ್ರಾಣಿ”, “ಹಾದಿಜಂಗಮ”, “ಬೀದಿ ಬೆಳಕಿನ ಕಂದಿಲು”‌ ಇವರ ಪ್ರಮುಖ ಕೃತಿಗಳು. ಅನೇಕ ಸಮ್ಮೇಳನಗಳಲ್ಲಿ ಇವರು ಪ್ರಬಂಧಗಳನ್ನು ಮಂಡಿಸಿದ್ದಾರೆ. ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಇವರ ಕವಿತೆ ಹಾಗೂ ಲೇಖನಗಳು ಪಠ್ಯವಾಗಿವೆ.

Leave a Comment

Your email address will not be published. Required fields are marked *

error: Content is protected !!