ಬೆಳಗಾವಿ : ಶನಿವಾರ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದಿಗೋಷ್ಟಿಯಲ್ಲಿ ಪರ್ಯಾಯ ಎಂಬ ಕನ್ನಡ ಚಿತ್ರತಂಡದ ಸದಸ್ಯರು ಭಾಗಿಯಾಗಿ, ಚಿತ್ರದ ಎರಡು ಹಾಡು ಬಿಡುಗಡೆ ಚಿತ್ರದ ವಿಶೇಷತೆ ಮತ್ತು ಬಿಡುಗಡೆಯ ತಯಾರಿಯ ಬಗ್ಗೆ ಮಾಹಿತಿ ಹಂಚಿಕೊಂಡರು..
ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕರಾದ ರಮಾನಂದ ಮಿತ್ರಾ ಅವರು, ಬೆಳಗಾವಿ ಜಿಲ್ಲೆಯಲ್ಲಿಯೇ ಬಹುತೇಕ ಚಿತ್ರೀಕರಣವಾದ ಈ ಪರ್ಯಾಯ ಚಿತ್ರದಲ್ಲಿ ಬೆಳಗಾವಿಯ ಕಲಾವಿದರು ನಟಿಸಿದ್ದು ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ..
ಈ ಪರ್ಯಾಯ ಚಿತ್ರದಲ್ಲಿ ಕಥೆಯೇ ನಾಯಕ, ಕಥೆ ಗಟ್ಟಿಯಾಗಿ ಇರುವದರಿಂದ ಜೊತೆಗೆ ಕಲಾವಿದರು ಅತ್ಯುತ್ತಮ ನಟನೆ ಮಾಡಿದ್ದರಿಂದ ಜನರಿಗೆ ಚಿತ್ರ ಖಂಡಿತ ಇಷ್ಟವಾಗುತ್ತದೆ ಎಂದ ಅವರು, ಚಿತ್ರದ ನಿರ್ಮಾಪಕರಾದ ರಾಜಕುಮಾರ ಅವರ ಊರಿನಲ್ಲಿ ನಡೆದ ಒಂದು ಘಟನೆಯ ಆಧಾರದ ಮೇಲೆ ಚಿತ್ರಕಥೆ ಹೆಣೆಯಲಾಗಿದ್ದು, ಇದೊಂದು ನೈಜ ಘಟನೆ ಆಧಾರಿತ ಚಿತ್ರ ಎಂದಿದ್ದಾರೆ..
ಇನ್ನು ಬೆಳಗಾವಿಯ ಪತ್ರಿಕಾ ಸಂಪಾದಕರು, ನಿರ್ಮಾಪಕರು, ನಟರು ಆಗಿರುವ ಮುರುಗೇಶ ಶಿವಪೂಜೆ ಅವರು ಮಾತನಾಡಿ, ಚಿತ್ರದಲ್ಲಿ ನನ್ನದೂ ಕೂಡ ಪ್ರಧಾನ ಪಾತ್ರ ಇದ್ದು, ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಚಿತ್ರಕಥೆಗೆ ಹೊಂದುವಂತಹ ಸನ್ನಿವೇಶಗಳನ್ನು ಹುಡುಕಿ ಅಲ್ಲಿ ಚಿತ್ರೀಕರಣ ಮಾಡಿದ್ದು, ಚಿತ್ರಕ್ಕೆ ಯಾವ ಕೊರತೆಯೂ ಇಲ್ಲದಂತೆ ಚಿತ್ರ ನಿರ್ಮಾಣ ಮಾಡಿದ್ದೇವೆ, ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದ್ದು ಪ್ರೇಕ್ಷಕರಿಗೆ ಇಷ್ಟವಾಗುವದರಲ್ಲಿ ಸಂಶಯವೇ ಇಲ್ಲಾ ಎಂದರು..
ಇನ್ನು ಚಿತ್ರದ ನಿರ್ಮಾಪಕ ಮತ್ತು ನಟರಾದ ರಾಜಕುಮಾರ್ ಅವರು ಮಾತನಾಡಿ, ಬೆಳಗಾವಿ ಜಿಲ್ಲೆಯಿಂದ ಒಂದು ಉತ್ತಮ ಅಭಿರುಚಿಯ, ಕುಟುಂಬ ಸಮೇತ ಕುಳಿತುಕೊಂಡು ನೋಡುವ ಚಿತ್ರ ಮಾಡಿದ್ದು, ಬೆಳಗಾವಿ ಜಿಲ್ಲೆಯಾದಿಯಾಗಿ, ಇಡೀ ರಾಜ್ಯಾದ್ಯಂತ ಸೆಪ್ಟೆಂಬರ್ 8 ನೇ ತಾರಿಕಿಗೆ ಚಿತ್ರ ಬಿಡುಗಡೆ ಆಗಲಿದೆ, ಕನ್ನಡ ಸಿನಿ ರಸಿಕರು ದಯಮಾಡಿ ಈ ಚಿತ್ರ ನೋಡಿ ನಿಮ್ಮ ನೆಲದ ನಿರ್ಮಾಪಕ ಮತ್ತು ಕಲಾವಿದರನ್ನು ಹರಸಬೇಕು ಎಂಬ ಮನವಿ ಮಾಡಿದರು..
ಈ ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ದೇಶಕ, ನಿರ್ಮಾಪಕ, ಕಲಾವಿದರು ಹಾಗೂ ತಂತ್ರಜ್ಞರ ಜೊತೆಗೆ ಸ್ನೇಹಿತರು ಹಾಗೂ ಹಿತೈಷಿಗಳು ಭಾಗಿಯಾಗಿದ್ದರು.