ಬೆಳಗಾವಿ :ನನ್ನ ಮಣ್ಣು, ನನ್ನ ದೇಶ’ ಕಾರ್ಯಕ್ರಮದ ಅಂಗವಾಗಿ ಪ್ರತಿ ಮನೆಗೂ ತ್ರಿವರ್ಣ ಧ್ವಜ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಆ. 13 ರಿಂದ 15 ರವರೆಗೆ ಜಿಲ್ಲೆಯ ಮನೆ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರತಿಯೊಬ್ಬರಲ್ಲೂ ದೇಶಪ್ರೇಮ ಮೂಡಿಸಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದ್ದಾರೆ.
ಸಾರ್ವಜನಿಕರೂ ಸ್ವಯಂಪ್ರೇರಿತರಾಗಿ ಭಾಗವಹಿಸಿ, ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಧ್ವಜ ಶಿಷ್ಟಾಚಾರ ಪಾಲನೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಗೆ ಒಟ್ಟಾರೆ 35 ಸಾವಿರ ರಾಷ್ಟ್ರ ಧ್ವಜಗಳನ್ನು ಹಂಚಿಕೆ ಮಾಡಲಾಗಿದೆ. ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಸಾರ್ವಜನಿಕರಿಗೆ ರಾಷ್ಟ್ರಧ್ವಜ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ.
ಪ್ರತಿ ರಾಷ್ಟ್ರಧ್ವಜಕ್ಕೆ ₹25.50 ದರ ನಿಗದಿಪಡಿಸಲಾಗಿದೆ. ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮನವಿ ಮಾಡಿದ್ದಾರೆ.