ಬೆಳಗಾವಿ :ನಿಪ್ಪಾಣಿ-; ಮನುಷ್ಯ ಪುಸ್ತಕಗಳ ಲೋಕದ ಮೂಲಕವೇ ಉಳಿದ ಲೋಕಗಳನ್ನು ಅರಿಯಲು ಸಾಧ್ಯ. ಪುಸ್ತಕ ನಮ್ಮ ಬದುಕನ್ನು ಬೆಳಗುವುದರ ಜೊತೆಗೆ ಮನುಷ್ಯ ಪುಸ್ತಕಗಳಿಂದ ತನ್ನದಲ್ಲದ ಅನುಭವಗಳನ್ನು ತನ್ನದಾಗಿಸಿಕೊಳ್ಳತ್ತಾನೆ. ಹಾಗೆ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುತ್ತಾನೆ. ಪುಸ್ತಕವನ್ನು ಓದುವುದರಿಂದ ಒಬ್ಬ ವ್ಯಕ್ತಿಯನ್ನ ಒಂದು ಉತ್ತಮ ಸ್ಥಾನಕ್ಕೆ ಬರುವಂತೆ ಮಾಡುತ್ತದೆ. ಓದುವುದು ಅದರ ಜೊತೆಗೆ ವಿಷಯವನ್ನು ಸಂಗ್ರಹಿಸುವುದು ಒಂದು ಅತ್ಯುತ್ತಮ ಹವ್ಯಾಸವಾಗಿದೆ. ಪುಸ್ತಕಗಳು ನಮ್ಮ ಜೀವನದಲ್ಲಿ ಅತ್ಯುತ್ತಮ ಒಡನಾಡಿಗಳಾಗಿವೆ. ಪುಸ್ತಕಗಳು ಎಂದಿಗೂ ನಮ್ಮನ್ನು ಒಂಟಿಯಾಗಿ ಬಿಡುವುದಿಲ್ಲ ಮತ್ತು ನಮ್ಮ ಉತ್ತಮ ಸ್ನೇಹಿತರಂತೆ ಇರುತ್ತಾರೆ ಎಂದು ಕೆ.ಎಲ್.ಇ ಸಂಸ್ಥೆಯ ಸ್ಥಳೀಯ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಶನಿವಾರ ನಡೆದ ೧೩೧ನೇ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಡಾ. ಎನ್. ಆರ್. ಬಿರ್ಸಾಳ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಮತ್ತು ಸರಿ ಮತ್ತು ತಪ್ಪುಗಳ ನಡುವೆ ನಿರ್ಣಯಿಸಲು ಪುಸ್ತಕಗಳು ನಮಗೆ ಸಹಾಯ ಮಾಡುತ್ತವೆ. ಜನರಂತೆ ಪುಸ್ತಕಗಳು ಏನನ್ನೂ ಬಯಸುವುದಿಲ್ಲ. ಬದಲಿಗೆ ನಮ್ಮ ಜ್ಞಾನ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ಪ್ರಾಂಶುಪಾಲರಾದ ಡಾ. ಎಂ.ಎಂ. ಹುರಳಿ ಅಭಿಪ್ರಾಯಪಟ್ಟರು.
ಗಣ್ಯರು ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್ ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಡಾ. ಆರ್. ಜಿ. ಖರಾಬೆ, ಐಕ್ಯೂಎಸಿ ಸಂಯೋಜಕ ಡಾ.ಎ. ಎ. ಕಾಂಬಳೆ, ಗ್ರಂಥಪಾಲಕ ಡಾ. ಆನಂದ ಕೆಂಚಕ್ಕನವರ, ಪಿಯು ಪ್ರಾಚಾರ್ಯೆ ಹೆಚ್. ಡಿ. ಚಿಕ್ಕಮಠ, ಡಾ. ವಿ.ಬಿ. ಧಾರವಾಡ, ಡಾ. ಎಸ್. ಎಂ. ರಾಯಮಾನೆ, ಎಸ್.ಎಸ್. ಕೋಠೀವಾಲೆ, ಡಾ. ಬಿ. ಎಂ. ಜನಗೌಡ, ಶೋಭಾ ರಣದೆವ್, ಡಾ. ಅಶೋಕ ರಾಠೋಡ, ಶಶಿಧರ್ ಕಂಬಾರ, ಅಂಕುಶ್ ಕವಾಲೆ, ವಿಜಯ ಮುರದಂಡೆ, ಪ್ರೀಯಾ ಗಾವಡೆ, ಭಾಗ್ಯಶ್ರೀ ಸನದಿ, ಶಕ್ತಿ ಕರಾಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.





