ಹುಕ್ಕೇರಿ: ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪ್ರತಿಮೆಯನ್ನು ಲೋಕೊಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಸತೀಶ ಜಾರಕಿಹೊಳಿ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ, ಹಾಗೂ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರಾಗಿದ್ದರು. ಅವರ ತತ್ವ, ಆದರ್ಶ, ದೇಶ ಭಕ್ತಿಯನ್ನು ಇಂದಿನ ಯುವ ಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೇವಲ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದರೆ ಸಾಲದು, ಮಹಾಪುರುಷರ ಮೂರ್ತಿಗಳ ಸುತ್ತಲೂ ನಿತ್ಯವೂ ಸ್ವಚ್ಛತೆಯನ್ನು ಕಾಪಾಡಬೇಕು. ಮಹಾಪುರುಷರ ಆದರ್ಶಗಳ ಕುರಿತು ಜನರಲ್ಲಿ ಮನವರಿಕೆ ಮಾಡಬೇಕು. ಈ ಮೂಲಕ ಮಹಾನ್ಪುರುಷರ ಜೀವನ ಸಂದೇಶ ನಮಗೆಲ್ಲ ದಾರಿದೀಪವಾಗಬೇಕು ಎಂದು ಅವರು ಹೇಳಿದರು.
ಸಾನಿಧ್ಯ ವಹಿಸಿದ್ದ ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕೌಲಗುಡ್ಡದ ಸಿದ್ದಶ್ರೀ ಅಮರೇಶ್ವರ ಸ್ವಾಮೀಜಿ, ಶಾಸಕ ನಿಖಿಲ ಕತ್ತಿ ಮಾತನಾಡಿ, ಭಾರತೀಯ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ವೀರ-ಶೂರ ಸಂಗೊಳ್ಳಿ ರಾಯಣ್ಣನ ಜೀವನಾಧಾರಿತ ಕುರಿತ ಪುಸ್ತಕ ಹೊರತರುವ ಕೆಲಸವಾಗಬೇಕು ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಮಹಾನ್ ಪುರುಷರನ್ನು ಒಂದೇ ಜಾತಿಗೆ ಸೀಮಿತಗೊಳಿಸುವ ಕೆಲಸ ನಡೆದಿದ್ದು ರಾಯಣ್ಣನ ಬದುಕು ನಮಗೆ ಆದರ್ಶಪ್ರಾಯವಾಗಬೇಕು. ಹಾಲುಮತ ಸಮಾಜಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸಬೇಕು. ತನ್ಮೂಲಕ ಅಲೆಮಾರಿ ಜನಾಂಗಕ್ಕೆ ಸಿಗುವ ಸೌಲಭ್ಯಗಳೂ ಹಾಲುಮತ ಸಮಾಜಕ್ಕೆ ಸಿಗುವಂತಾಗಬೇಕು ಎಂದರು.
ಶAಕರಲಿAಗ ಮಠದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಹಿರಿಯ ಮುಖಂಡ ಅಪಾಸಾಹೇಬ ಶಿರಕೋಳಿ ಅಧ್ಯಕ್ಷತೆ ವಹಿಸಿದ್ದರು.
ಹಾಲುಮತ ಸಮಾಜದ ಅಧ್ಯಕ್ಷ ಗಜಾನನ ಕ್ವಳ್ಳಿ, ಮುಖಂಡರಾದ ಶಂಕರರಾವ್ ಹೆಗಡೆ, ಡಾ.ಜಯಪ್ರಕಾಶ ಕರಜಗಿ, ಸಂತೋಷ ಮುಡಸಿ, ದಿಲೀಪ ಹೊಸಮನಿ, ಸಚಿನ ಹೆಗಡೆ, ಸುನೀಲ ಪರ್ವತರಾವ್, ಶ್ರೀಕಾಂತ ಹತನೂರೆ, ಅಜೀತ ಕರಜಗಿ, ಅಮರ ನಲವಡೆ, ಭರಮಾ ಪೂಜೇರಿ, ಭೀಮರಾವ್ ಮಲ್ಹಾರಗೋಳ, ಗಣಪತಿ ಹೆಗಡೆ, ಬೀರು ಹೆಗಡೆ, ಸಾಗರ ಕ್ವಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಪಟ್ಟಣದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಜ್ಯೋತಿ ಹಾಗೂ ಕುಂಭಹೊತ್ತ ಸುಮಂಗಲೆಯರ ಭವ್ಯ ಮೆರವಣಿಗೆ ಗಮನ ಸೆಳೆಯಿತು. ಶಿಕ್ಷಕ ಭೀಮರಾವ ಘಂಟಿ ನಿರೂಪಿಸಿದರು.





