ಕಾಗವಾಡ:ಭರವಸೆಯ ನಿರೂಪಕಿ ಕು.ನಪೀಸಾ ಅರಬ”

Share the Post Now

ಶಿರಗುಪ್ಪಿ ಮರಾಠಿಯ ದಟ್ಟ ಪ್ರಭಾವ ಹೊಂದಿರುವ ಒಂದು ವಿಶಿಷ್ಟ ಗ್ರಾಮ. ಮೂರ್ನಾಲ್ಕು ಬಾರಿ “ಸ್ವಚ್ಛಗ್ರಾಮ” ಎಂದು ರಾಜ್ಯ ಸರ್ಕಾರದಿಂದ ವಿಶೇಷ ಪುರಸ್ಕಾರಕ್ಕೆ ಪಾತ್ರವಾದ ಈ ಗ್ರಾಮದ ಪೂರ್ವ ದಿಕ್ಕಿನಲ್ಲಿ, ಮರುನೆಲದ ಮಧ್ಯದಲ್ಲಿ ತಿಳಿನೀರ ಬುಗ್ಗೆಯಂತೆ ಬೆಂದೆದೆಯ ತೋಯಿಸಲು ಉದ್ಭವಿಸಿದ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಈ ಜ್ಞಾನ ದೇಗುಲವನ್ನು “ಶತಮಾನದ ಸಂತ” “ನಡೆದಾಡುವ ಮಾತನಾಡುವ ದೇವರೆಂದೇ” ಜನಮಾನಸದಲ್ಲಿ ಚಿರಸ್ಥಾಯಿ ಆಗಿದ್ದ ಲಿಂಗೈಕ್ಯ ಪರಮ ಪೂಜ್ಯ ಶ್ರೀ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಲಿಂಗಹಸ್ತದಿಂದ ಉದ್ಘಾಟನೆಗೊಂಡ ಈ ಮಹಾವಿದ್ಯಾಲಯವು “ಕರುಣಾಳು ಬೆಳಕಾಗಿ, ಬೆಳದಿಂಗಳದಾ ಹೊಳೆಯಾಗಿ,ತಮದ ತಿಮಿರ ಕುಹರವನ್ನು ಬೆಳಗಲೆಂದೇ ಗ್ರಾಮೀಣ ವಿದ್ಯಾರ್ಥಿಗಳಿಗೆ ನಗರೀಯ ಸೌಲಭ್ಯಗಳನ್ನು ನೀಡುತ್ತಿರುವ ಒಂದು ಉತ್ಕೃಷ್ಟ ಸಂಸ್ಥೆಯಾಗಿ ಈ ಭಾಗದಲ್ಲಿ ಗ್ರಾಮೀಣ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿದೆ.



ಕೆ.ಎಲ್.ಇ. ಮಹಾವಿದ್ಯಾಲಯದಲ್ಲಿ ಈ ಹಿಂದೆಯೇ ಅಧ್ಯಯನ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಬೇರೆ ಬೇರೆ ವಲಯಗಳಲ್ಲಿ ಉನ್ನತ ಸ್ಥಾನದಲ್ಲಿ ಅನುಪಮ ಸೇವೆಯಲ್ಲಿ ನಿರತರಾಗಿ ಹೆತ್ತ ತಂದೆ ತಾಯಿಯರಿಗೆ ಹಾಗೂ ವಿದ್ಯಾರ್ಜನೆ ಮಾಡಿದ ಈ ಸಂಸ್ಥೆಗೆ ಅಪಾರ ಕೀರ್ತಿ ಹಾಗೂ ಗೌರವ ಹೆಚ್ಚಿಸಿದ್ದು ಗಮನಾರ್ಹ.



ಪ್ರಕೃತಿಯ ಮಡಿಲಲ್ಲಿ ಸಮೃದ್ಧವಾಗಿ ಕಂಗೊಳಿಸುವ ಈ ಜ್ಞಾನ ದೇಗುಲವು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ, ಈ ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿ ಮಾಡಿ ಸಂಸ್ಕಾರವಂತ ಹಾಗೂ ಆದರ್ಶ ವಿದ್ಯಾರ್ಥಿಗಳನ್ನು ರೂಪಿಸಿದೆ. ರೂಪಿಸುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯೇ ತನ್ನ ಪ್ರಥಮ ಆದ್ಯತೆಯನ್ನಾಗಿಸಿಕೊಂಡ ಈ ಜ್ಞಾನ ದೇಗುಲದಲ್ಲಿ, ಬೋಧನಾಮೃತವನ್ನು ದಯಪಾಲಿಸುವ ಅನುಭವಿ ಪ್ರಾಮಾಣಿಕ ಸಮರ್ಥ ಗುರು ಬಳಗವು ತನು ಮನ ಭಾವಗಳಿಂದ ನಿರಂತರವಾಗಿ ಜ್ಞಾನದ ಸುಧೆಯನ್ನು ನೀಡುತ್ತಿರುವ ಇವರು ನಿಜಕ್ಕೂ ಈ ಜ್ಞಾನ ದೇಗುಲದ ದೀಪ ಸ್ತಂಭಗಳು!.

ಈ ಜ್ಞಾನ ದೇಗುಲದಲ್ಲಿ ಶ್ರದ್ಧೆ ಹಾಗೂ ನಿಷ್ಠೆಗಳಿಂದ ಅಧ್ಯಯನ ಮಾಡುತ್ತಿರುವ ಅನೇಕ ವಿದ್ಯಾರ್ಥಿಗಳು ತಮ್ಮ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು “ಜಯಕ್ಕಿಂತ ಸ್ಪರ್ಧೆ ಮುಖ್ಯ” ಎಂಬ ಉದಾತ್ತ ತತ್ವ ಮೈಗೂಡಿಸಿಕೊಂಡು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿ ಕಾಲೇಜು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದು ಒಂದು ಅವಿಸ್ಮರಣೀಯ. ಇಂದಿಗೂ ಎಲೆ ಮರೆಯ ಕಾಯಿಯಾಗಿ ಅರಳುವ ಅರಳುತ್ತಿರುವ ಹಲವು ಗ್ರಾಮೀಣ ಅಪೂರ್ವ ಪ್ರತಿಭೆಗಳು ಈ ಕಾಲೇಜಿನ ಸಕಲ ಅಧ್ಯಾಪಕರನ್ನು ಸೂಜಿಗಲ್ಲಿನಂತೆ ಸೆಳೆದು ಭರವಸೆ ಮೂಡಿಸುತ್ತಿರುವುದು ಅಧ್ಯಾಪಕರ ವಲಯದಲ್ಲಿ ತೀವ್ರ ಸಂತಸದ ಕಾರಂಜಿ ಚಿಮ್ಮಿಸುತ್ತಿದೆ.

ಪ್ರಸ್ತುತ ಈ ಮಹಾವಿದ್ಯಾಲಯದಲ್ಲಿ ಅಂತಿಮ ಬಿ.ಕಾಂ. ವರ್ಗದಲ್ಲಿ ಅಧ್ಯಯನ ಮಾಡುತ್ತಿರುವ ಕು.ನಪೀಸಾ ಅರಬ, ಅತ್ಯುತ್ತಮ ಕಾರ್ಯಕ್ರಮ ನಿರೂಪಕಿಯಾಗಿ ಹೆಸರು ಮಾಡಿದ್ದಾರೆ. .ಕು.ನಪೀಸಾ ಅರಬ ಅವರು ಮೂಲತಃ ಶಿರಗುಪ್ಪಿ ಸಮೀಪದಲ್ಲಿರುವ ಜುಗೂಳ ಎಂಬ ಪುಟ್ಟ ಗ್ರಾಮದವರು. ತಂದೆ ನಜೀರ ಅರಬ, ತಾಯಿ ಆತ್ಮಾ ನಜೀರ ಅರಬ. ಕೃಷಿಕರಾದ ನಜೀರ ಅರಬ ಅವರಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗ ಇರುವ ಚಿಕ್ಕ ಕುಟುಂಬ. ಎಲ್ಲಾ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ ಶ್ರೀ ನಜೀರ ಅರಬ ಅವರ ಎರಡನೆಯ ಸುಪುತ್ರಿಯಾದ ಕು.ನಪೀಸಾ, ತಂದೆ ತಾಯಿಯರ ಅಚ್ಚುಮೆಚ್ಚಿನ ಮುದ್ದಿನ ಸುಪುತ್ರಿ. ಹುಟ್ಟೂರು ಜುಗೂಳದ ಪ್ರತಿಷ್ಟಿತ ಕೆ.ಎಸ್.ಎಸ್.ಪ್ರೌಢ ಶಾಲೆಯಲ್ಲಿ ಚೆನ್ನಾಗಿ ವ್ಯಾಸಂಗ ಮಾಡಿದ ಇವರು ಮುಂದೆ ಸಮೀಪದ ಕೆ.ಎಲ್.ಇ. ಮಹಾವಿದ್ಯಾಲಯ ಶಿರಗುಪ್ಪಿಗೆ ಪಿ.ಯು.ಸಿ.ಗೆ ಪ್ರವೇಶ ಪಡೆದು ನಂತರ ಇಲ್ಲಿಯೇ ವಾಣಿಜ್ಯ ಪದವಿಯಲ್ಲಿ ಅಧ್ಯಯನ ಮುಂದುವರೆಸುತ್ತಾರೆ. ಕು.ನಪೀಸಾ ಮೂಲತಃ ಸಮಾಧಾನ, ಸೌಮ್ಯ ಸ್ವಭಾವದ ಸದ್ಗುಣ ಸಂಪನ್ನೆ. ಆದರ್ಶ ಜಾಣ ವಿದ್ಯಾರ್ಥಿನಿ ಎನಿಸಿರುವ ನಪೀಸಾ,ಎಲ್ಲ ಉಪನ್ಯಾಸಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಕ್ಕೆ ಇವರೇ ಕಾರ್ಯಕ್ರಮ ನಿರೂಪಣೆ ಮಾಡಲು ಅನಿವಾರ್ಯ ಎನಿಸಿದ್ದಾರೆ..ಕು.ನಪೀಸಾ ಅರಬ ಅವರ ಮನೆತನದ ಮಾತೃ ಭಾಷೆ ಉರ್ದು. ಆದರೆ ಕನ್ನಡ ಭಾಷೆಯಲ್ಲಿ ಅಚ್ಚುಕಟ್ಟಾಗಿ ಹಾಗೂ ಮನೋಜ್ಞವಾಗಿ ಲಿಂಗ ಮೆಚ್ಚಿ ಅಹುದಹುದೆನ್ನುವಂತೆ ಆಕರ್ಷಕವಾಗಿ ನಿರೂಪಣೆ ಮಾಡುವ ಕು. ನಪೀಸಾ, ಕನ್ನಡ ಭಾಷೆಯ ಮೇಲಿಟ್ಟ ವಿಪರೀತ ಅಭಿಮಾನ ನಿಜಕ್ಕೂ ಗಮನೀಯ.

ಪ್ರತಿಭೆ ಎಂಬುದು ಪರಿಶ್ರಮದ ಸತ್ಫಲ. ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ರೀತಿಯಾದ ಪ್ರತಿಭೆ ಇರುತ್ತದೆ. ಆದರೆ ಅದನ್ನು ಕೆಲವರು ತೋರಿಸಿಕೊಂಡು ಖ್ಯಾತ ವ್ಯಕ್ತಿಗಳಾಗುತ್ತಾರೆ. ಇನ್ನು ಕೆಲವರು ಅದನ್ನು ತೋರಿಸಿಕೊಳ್ಳದೆ ಸಾಮಾನ್ಯ ವ್ಯಕ್ತಿಗಳಾಗಿಯೇ ಇದ್ದುಬಿಡುತ್ತಾರೆ. ಅದ್ಬುತ ಪ್ರತಿಭೆಯನ್ನು ತನ್ನಲ್ಲಿ ಸುಪ್ತವಾಗಿ ಹುದುಗಿಸಿಕೊಂಡಿದ್ದ ಈ ಅಪೂರ್ವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹದ ಮಳೆಗರೆಯಲು ಆರಂಭಿಸಿದ ವಾಣಿಜ್ಯ ವಿಭಾಗದ ಸಂಯೋಜಕರು,ಸಾಹಿತ್ಯ ಪ್ರೇಮಿ ಹಾಗೂ ಯುವ ಚುಟುಕು ಕವಿ ಎಂದು ಹೆಸರಾದ ಪ್ರೊ.ಎಲ್.ಎಸ್.ವಂಟಮೂರೆ ಅವರು ಆರಂಭದಲ್ಲಿ ಬಿ.ಕಾಂ.ಪ್ರಥಮ ವರುಷ ಅಧ್ಯಯನ ಮಾಡುವಾಗ ಹಲವು ವಿದ್ಯಾರ್ಥಿಗಳಿಗೆ ಸೆಮಿನಾರ್ ಮಾಡಲು ಸುವರ್ಣ ಅವಕಾಶ ನೀಡುತ್ತಾರೆ.ಇದರಲ್ಲಿ ಎಲ್ಲ ವಿದ್ಯಾರ್ಥಿಗಳಿಗಿಂತ ಕೊಂಚ ವಿಭಿನ್ನವಾಗಿ ವಿಶಿಷ್ಟವಾಗಿಯೇ ಕು. ನಪೀಸಾ ಅರಬ ಅವರ ವಿಷಯ ವಿಶ್ಲೇಷಣೆ ಮಾಡುವ ವಿಧಾನ, ಅಭಿವ್ಯಕ್ತಪಡಿಸುವ ಕೌಶಲ್ಯವನ್ನು ಸೂಕ್ಷ್ಮವಾಗಿ ಕಂಡು ಸಂತಸಗೊಂಡ ಪ್ರೊ.ವಂಟಮೂರೆ ಅವರು ಕಾಲೇಜಿನಲ್ಲಿ ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ಕು. ನಪೀಸಾಗೆ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ನೀಡುತ್ತಾರೆ. ಮೊದಲು ಸ್ವಾಗತ, ನಂತರ ವಂದನಾರ್ಪಣೆ ಮಾಡಲು ನಿರ್ದೇಶನ ನೀಡಿದರು. ಹಂತ ಹಂತವಾಗಿ ಮುಂದೆ ಉತ್ತಮ ಬೆಳವಣಿಗೆಯನ್ನು ಗಮನಿಸಿ ನೇರವಾಗಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಲು ಹೇಳಿದರು. ಅಚ್ಚುಕಟ್ಟಾಗಿ ನಿರೂಪಣೆ ಮಾಡಿದ್ದನ್ನು ಕಂಡು ಗುರುಗಳಾದ ಪ್ರೊ.ವಂಟಮೂರೆ ಅವರು ನನಗೆ ನಿರೂಪಣೆ ಮಾಡುವ ಅಭಿರುಚಿ ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬಿದ್ದನ್ನು ಕು.ನಪೀಸಾ ಹೆಮ್ಮೆಯಿಂದ ಹಾಗೂ ಮನಃಪೂರ್ವಕವಾಗಿ ಸ್ಮರಿಸುತ್ತಾರೆ.

ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದ ಸೊಗಸು, ಅಂದ, ಚೆಂದವನ್ನು ತನ್ನ ವಿಶಿಷ್ಟ ನಿರೂಪಣೆಯಿಂದ ಇಮ್ಮಡಿಗೊಳಿಸುತ್ತಿರುವ ಕು.ನಪೀಸಾ ಅವರು ನಿರೂಪಣೆ ಆರಂಭಿಸಿದರೆ ಕಾರ್ಯಕ್ರಮಕ್ಕೆ ಉಪಸ್ಥಿತರಿರುವ ಪ್ರೇಕ್ಷಕರು ಇವರ ಆಡುವ ನುಡಿಗಳಿಗೆ ಕಿವಿಗೊಟ್ಟು ಮುಕ್ತಾಯವರೆಗೂ ಕೌತುಕದಿಂದ ಕಾರ್ಯಕ್ರಮ ವೀಕ್ಷಿಸುತ್ತಾರೆ. ಇವರ ನುಡಿಯಲ್ಲಿ ಮುತ್ತಿನ ಹಾರ ಇರುತ್ತದೆ. ಶರಣರ, ಸಂತರ, ದಾಸವರೇಣ್ಯರ, ಜನಪ್ರಿಯ ಕವಿಗಳ ಕಾವ್ಯದ ಸಾಲುಗಳು, ಜನಪದ ತ್ರಿಪದಿಗಳನ್ನು, ವಿಭಿನ್ನ ಸುಭಾಷಿತಕಾರರ ಉಕ್ತಿಗಳು, ಮೌಲಿಕ ನುಡಿಗಳನ್ನು ಸಂದರ್ಭಕ್ಕೆ ತಕ್ಕಂತೆ ಸುಂದರವಾಗಿ ಉಲ್ಲೇಖ ಮಾಡುತ್ತಾ ಹೋಗುವಾಗ ಆಗಮಿಸಿದ ಅತಿಥಿ ಗಣ್ಯ ಮಹೋದಯರ ಚಿತ್ತವನ್ನೇ ತನ್ನೆಡೆಗೆ ಸೆಳೆದು ಅವರ ಹೃನ್ಮನಗಳನ್ನು ಸೂರೆಗೊಳ್ಳುತ್ತಾರೆ. ಕುಳಿತ ಪ್ರೇಕ್ಷಕರು ಇವರ ಅಪ್ಯಾಯಮಾನವಾದ ನುಡಿಗಳನ್ನು ಆಲಿಸಿ ತಲೆದೂಗುವುದು ಖಚಿತ. ಪ್ರತಿ ಕಾರ್ಯಕ್ರಮದಲ್ಲಿ ಆಗಮಿಸುವ ಅತಿಥಿ ಮಹೋದಯರು, ಸಂಪನ್ಮೂಲ ವ್ಯಕ್ತಿಗಳು ಕು.ನಪೀಸಾಳ ನಿರೂಪಣೆ ಶೈಲಿಯನ್ನು ಮುಕ್ತ ಕಂಠದಿಂದ ಸ್ತುತಿಸಿ ನಿರ್ಗಮಿಸುವುದು ವಿಶೇಷ. ಇಸ್ಲಾಂ ಧರ್ಮದವರಾದ ಕು.ನಪೀಸಾ ಕನ್ನಡ ಭಾಷೆಯಲ್ಲಿ ನಿರೂಪಣೆ ಮಾಡುವುದು ಎಂದರೆ ನನಗೆ ಬಹಳ ಇಷ್ಟ ಎಂದು ತನ್ನ ಮನದ ಇಂಗಿತವನ್ನು ಅತ್ಯಂತ ಖುಷಿಯಿಂದಲೇ ಹಂಚಿಕೊಳ್ಳುತ್ತಾರೆ. ನಿರೂಪಣೆಯ ತಂತ್ರ, ಹಾವಭಾವ ದ್ವನಿಯ ಏರಿಳಿತದಿಂದ ಕಾರ್ಯಕ್ರಮ ನಿರೂಪಣೆ ಮಾಡುವ ವಿಧಾನವನ್ನು ಕೆಲವು ಖಾಸಗಿ ಕನ್ನಡ ವಾಹಿನಿಗಳಲ್ಲಿ ಪ್ರಸಾರಗೊಳ್ಳುವ ರಿಯಾಲಿಟಿ ಶೋ ಗಳಲ್ಲಿ ಪ್ರದರ್ಶಿತವಾಗುವ ನಿರೂಪಕರಿಂದ ನಾನು ನೋಡಿ ಮನೆಯಲ್ಲಿಯೇ ಅನುಕರಣೆ ಮಾಡುತ್ತ ಚೆನ್ನಾಗಿ ಪೂರ್ವ ಸಿದ್ಧತೆಯೊಂದಿಗೆ ಸರಳವಾಗಿ ಈ ಹವ್ಯಾಸವನ್ನು ಕಲಿತು ರೂಢಿಸಿಕೊಂಡಿರುವೆ ಎಂದು ಇವರು ಮನದುಂಬಿ ವಿಶ್ಲೇಷಣೆ ಮಾಡುತ್ತಾರೆ.

ನಮ್ಮ ಆಸಕ್ತಿ, ಒಳ್ಳೆಯ ಅಭಿರುಚಿ, ಆರೋಗ್ಯಕರ ಹವ್ಯಾಸಗಳು ಛಲ, ಉತ್ಸಾಹ, ಆತ್ಮವಿಶ್ವಾಸ, ಗುರುಗಳ ಅಮೂಲ್ಯ ಪ್ರೋತ್ಸಾಹ ಇದ್ದರೆ ನಮ್ಮ ಶೈಕ್ಷಣಿಕ ಜೀವನದಲ್ಲಿ ಅಮೋಘ ಅದ್ವಿತೀಯ ಸಾಧನೆ ಮಾಡಲು ನಿಸ್ಸಂದೇಹವಾಗಿ ಸಾಧ್ಯವಾಗುತ್ತದೆ ಎಂದು ತನ್ನ ಮನದಾಳದ ಮಾತುಗಳನ್ನು ಮಾರ್ಮಿಕವಾಗಿಯೇ ಹಂಚಿಕೊಳ್ಳುತ್ತಾರೆ.

ಪ್ರಸ್ತುತ ಈ ಮಹಾವಿದ್ಯಾಲಯದ ಕ್ರಿಯಾಶೀಲ ಹಾಗೂ ಉತ್ಸಾಹಿ ಯುವ ಪ್ರಾಚಾರ್ಯರಾದ ಪ್ರೊ.ಎಸ್.ಬಿ.ಪಾಟೀಲ ಸರ್ ಅವರ ನಿರಂತರ ಪ್ರೋತ್ಸಾಹ, ವಾಣಿಜ್ಯ ವಿಭಾಗದ ಸಂಯೋಜಕರಾದ ಪ್ರೊ.ಎಲ್.ಎಸ್.ವಂಟಮೂರೆ ಅವರ ದಿವ್ಯ ಪ್ರೇರಣೆ,ಕನ್ನಡ ಪ್ರಾಧ್ಯಾಪಕರು, ಸಾಹಿತಿ ಡಾ.ಜಯವೀರ ಎ.ಕೆ. ಅವರ ಸಮರ್ಥ ಮಾರ್ಗದರ್ಶನ, ಸಕಲ ಅಧ್ಯಾಪಕರ ಸದಾಶೀರ್ವಾದ, ಹಾಗೂ ತನ್ನ ಸಹಪಾಠಿಗಳ ಹಂಬಲದ ಬೆಂಬಲ ಹಾಗೂ ಪ್ರೀತಿಯ ಸಹಕಾರದಿಂದ ಈ ನಿರೂಪಣೆ ಕಲೆ ಕರಗತ ಮಾಡಿಕೊಳ್ಳುವ ಮೂಲಕ ನನ್ನ ವ್ಯಕ್ತಿತ್ವ ವಿಕಸನಕ್ಕೆ ಪ್ರಮುಖ ಕಾರಣ ಎಂದು ತುಂಬು ಹೃದಯದಿಂದ ಸ್ಮರಿಸುತ್ತಾರೆ. ಇವರು ಭವಿಷ್ಯದಲ್ಲಿ ಒಂದು ಉನ್ನತ ಸ್ಥಾನಕ್ಕೆ ಹೋಗಿ ಸಾಧನೆ ಮಾಡಬೇಕೆಂದು ಬಯಸಿರುವ ಕು. ನಪೀಸಾ, ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಸಹ ಯಶಸ್ವಿಯಾಗಿ ಹಾಗೂ ಸಮರ್ಥವಾಗಿ ನಿರೂಪಣೆ ಮಾಡುವ ಪ್ರಬುದ್ಧತೆ ಇವರಿಗೆ ಪ್ರಾಪ್ತವಾಗಿದೆ. ಭರವಸೆಯ ನಿರೂಪಕಿಯಾಗಿ ಹೊರಹೊಮ್ಮಿ ಸಕಲರ ಗಮನ ಸೆಳೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ಕು.ನಪೀಸಾ ಅರಬ ಅವರ ಭವಿಷ್ಯ ಉಜ್ವಲವಾಗಲಿ. ಇವರು ಕಂಡ ಕನಸು,ಹಮ್ಮಿಕೊಂಡ ಸಕಲ ಯೋಜನೆಗಳೆಲ್ಲವೂ ಯಶಸ್ಸಿನ ಗೆರೆ ಸ್ಪರ್ಶಿಸಲಿ ಎಂದು ನಾನು ಅಭಿಮಾನದಿಂದ ಮನದುಂಬಿ ಆಶಿಸುತ್ತೇನೆ.

ಲೇಖನ:ಡಾ.ಜಯವೀರ ಎ.ಕೆ.*
*【ಕನ್ನಡ ಪ್ರಾಧ್ಯಾಪಕರು】*
*ಕೆ.ಎಲ್.ಇ. *ಮಹಾವಿದ್ಯಾಲಯ*
*ಶಿರಗುಪ್ಪಿ*

Leave a Comment

Your email address will not be published. Required fields are marked *

error: Content is protected !!