ಬೆಳಗಾವಿ.ರಾಯಬಾಗ:* ಇಡೀ ಕಾರ್ಯಕ್ರಮದ ಯಶಸ್ಸಿನ ಮುಖ್ಯ ಸೂತ್ರದಾರ ಎನಿಸಿಕೊಂಡ ನಿರೂಪಕನು ಸೊಗಸಾಗಿ ನಿರೂಪಣೆ ಮಾಡುವುದು ಒಂದು ಸೃಜನಶೀಲ ಕವಿತೆ ಬರೆದ ಹಾಗೆ! ನಿರೂಪಣೆ ಕವಿತೆಯಾಗಬೇಕು ನಿರೂಪಕ ಕವಿಯಾಗಬೇಕು ಎಂದು ಹಾರೂಗೇರಿಯ ವಿಶ್ರಾಂತ ಪ್ರಾಚಾರ್ಯರು, ಸಾಹಿತಿ, ರಸ ವಿಮರ್ಶಕ ಡಾ.ವಿಠ್ಠಲ ಮಾಳಿ ಅಭಿಮತ ವ್ಯಕ್ತಪಡಿಸಿದರು.
ಅವರು ರವಿವಾರ ದಿನಾಂಕ 27 ರಂದು ತಾಲ್ಲೂಕಿನ ಹಾರೂಗೇರಿ ಪಟ್ಟಣದ ಎಸ್.ಪಿ.ಎಂ. ಬಿ.ಎಡ್ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ “ನಿರೂಪಣಾ ಕೌಶಲ್ಯಾಭಿವೃದ್ಧಿ” ವಿಶೇಷ ಕಾರ್ಯಾಗಾರದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು ಮಾತನಾಡಿದರು. ನಿಜಕ್ಕೂ ಇದೊಂದು ಶೋಧ ಕಾರ್ಯ. ಕನ್ನಡ ರಥವನ್ನು ಎಳೆಯುತ್ತಿರುವ ಕ್ರಿಯಾಶೀಲ ಸೃಜನಶೀಲ ಮನದ ಶ್ರೀ ರವೀಂದ್ರ ಪಾಟೀಲ ಅವರ ಸಾರಥ್ಯದಲ್ಲಿ ಮುಂದಡಿ ಇಡುತ್ತಿರುವ ಕ.ಸಾ.ಪ.ಘಟಕದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿರೂಪಣೆ ಮಾಡುವ ನಿರೂಪಕನು ಮೊದಲು ಸಮಯಪ್ರಜ್ಞೆ ಮೈಗೂಡಿಸಿಕೊಂಡು ಇಡೀ ಕಾರ್ಯಕ್ರಮ ಆಭಾಸವಾಗದಂತೆ ನೋಡಿಕೊಳ್ಳುವ ಕೌಶಲ್ಯ ಕರಗತ ಮಾಡಿಕೊಳ್ಳಬೇಕು. ಶರಣರು ಸಂತರು ದಾರ್ಶನಿಕರು ಸುಭಾಷಿತಕಾರರು ಹೇಳಿದ ಪೂರ್ಣ ವಚನಗಳನ್ನು ವಾಚನ ಮಾಡಿ ಅಮೂಲ್ಯ ಸಮಯ ಹರಣ ಮಾಡದೇ ಸಂದರ್ಭಕ್ಕೆ ಅನುಗುಣವಾಗಿ ಅತಿಥಿಗಳ ವ್ಯಕ್ತಿತ್ವಕ್ಕೆ ಒಗ್ಗುವ ವಚನದ ಒಂದು ಸಾಲವನ್ನು ಮಾತ್ರ ಉಲ್ಲೇಖ ಮಾಡಿದರೆ ಸಾಕು. ಅನಗತ್ಯ ಮಾತನಾಡಿ ಸಭೆ ಸಮಾರಂಭಗಳ ಘನತೆ ಗೌರವಕ್ಕೆ ದಕ್ಕೆ ಬಾರದ ಹಾಗೆ ನಿರೂಪಕರಾದವರು ಆದ್ಯ ಗಮನ ನೀಡುವುದು ಅಗತ್ಯ ಎನಿಸಿದೆ. ನಾನು ಕಂಡಂತೆ ಇತ್ತೀಚಿನ ಸಭೆ ಸಮಾರಂಭಗಳು ಇತಿ ಮಿತಿ ಇಲ್ಲದೆ ತೀವ್ರ ಅಸ್ತವ್ಯಸ್ತವಾಗುತ್ತಿರುವುದಕ್ಕೆ ತೀವ್ರ ಖೇದ ವ್ಯಕ್ತಪಡಿಸಿದರು. ಕಾರ್ಯಕ್ರಮ ಹೇಗೆ ಇರಬೇಕು ಹೇಗೆ ನಡೆಯಬೇಕು ಎಂಬ ಬಗ್ಗೆಯೇ ನಾನು ಒಂದು ವಿಶೇಷ ಪುಸ್ತಕ ಬರೆಯಬೇಕು ಎಂದು ಚಿಂತನೆ ಮಾಡುತ್ತಿದ್ದೇನೆ ಎಂದು ತಮ್ಮ ಸ್ವಾನುಭವಗಳನ್ನು ಸೊಗಸಾಗಿ ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಯಬಾಗ ತಾಲ್ಲೂಕು ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಾಂತಾರಾಮ ಜೋಗಳೆ ಅವರು ಮಾತನಾಡಿ ” ದೇಶ ನಮಗೇನು ಕೊಟ್ಟಿದೆ ಎಂಬುದಕ್ಕಿಂತ ದೇಶಕ್ಕಾಗಿ ನಾವೇನು ಕೊಟ್ಟಿದ್ದೇವೆ? ಎಂಬ ಆತ್ಮಾವಲೋಕನ ಹಾಗೂ ಚಿಂತನೆ ನೀವೆಲ್ಲರೂ ಮಾಡಬೇಕು. ಕ.ಸಾ.ಪ.ಘಟಕ ಆಯೋಜಿಸಿದ ಈ ವಿಶೇಷ ವಿಭಿನ್ನ ಕಾರ್ಯಾಗಾರದ ಫಲಾನುಭವಿಗಳಾದ ನೀವೆಲ್ಲರೂ ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಕ.ಸಾ.ಪ. ಘಟಕದ ವತಿಯಿಂದ ವೇದಿಕೆಯ ಮೇಲಿನ ಗಣ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶಾಂತರಾಮ ಜೋಗಳೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ತಾಲ್ಲೂಕು ಕ.ಸಾ.ಪ.ಘಟಕದ ಅಧ್ಯಕ್ಷ ಶ್ರೀ ರವೀಂದ್ರ ಪಾಟೀಲ ಅವರು “ಕ.ಸಾ.ಪ.ರಾಯಬಾಗ ಘಟಕವು ಉತ್ಸಾಹದಿಂದ ತಾಲ್ಲೂಕಿನಲ್ಲಿ ಸಕಲ ಗುರು ಹಿರಿಯರ ವಿದ್ವಾಂಸರ ಪ್ರೀತಿಯ ಸಲಹೆ, ಸಹಕಾರದಿಂದ ಇಂತಹ ಹೊಸ ಹೊಸ ಸೃಜನಶೀಲ ಕಾರ್ಯಕ್ರಮಗಳು ಜನ ಮನ್ನಣೆ ಗಳಿಸಿ ಸಾಕಾರಗೊಳ್ಳಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಇಡುತ್ತಿರುವ ಈ ವಿಶಿಷ್ಟ ಹೆಜ್ಜೆ ನಿಜಕ್ಕೂ ಸ್ಮರಣೀಯ ಎಂದು ಹೃದಯತುಂಬಿ ಭಾವಪೂರ್ಣವಾಗಿ ನುಡಿದರು. ಈ ಬಾಗೆನಾಡಿನಲ್ಲಿ ನಾವು ಹಮ್ಮಿಕೊಂಡ ಈ ವಿಶಿಷ್ಟ ವಿನೂತನ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉದಯೋನ್ಮುಖ ಪ್ರತಿಭಾವಂತ ನಿರೂಪಕರನ್ನು ಗುರುತಿಸಿ ಬೆಳಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದು,ಇಂತಹ ಸದಭಿರುಚಿಯ ಕಮ್ಮಟಗಳನ್ನು ಹಮ್ಮಿಕೊಳ್ಳುವ ಮೂಲಕ ತಾಲ್ಲೂಕು ಕ.ಸಾ.ಪ.ನಿಜಕ್ಕೂ ಜನಮಾನಸದಲ್ಲಿ ನೋಂದಣಿಯಾಗಿದೆ ಎಂದು ಅಭಿಮಾನದಿಂದ ಸೊಗಸಾಗಿ ಆಶಯ ನುಡಿಗಳ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿದ್ದ ನೇಜ ಗ್ರಾಮದ ಆದರ್ಶ ಶಿಕ್ಷಕರು,ಚಿಂತಕರು, ಶರಣ ಶ್ರೀ ವೀರೇಶ ಪಾಟೀಲ ಶರಣರು ಮಾತನಾಡಿ “ನಮ್ಮ ಆಲೋಚನೆಗಳು ಆಚರಣೆ ಹಂತ ತಲುಪಿದರೆ ಮಾತ್ರ ಸಾಧನೆ ಮಾಡಲಿಕ್ಕೆ ಸಾದ್ಯ. ನಿರೂಪಕರು ಪರಿಮಾಣ ದೃಷ್ಟಿಯಿಂದ ಆಲಿಸುವ ಗುಣ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಒಳ್ಳೆಯ ನಿರೂಪಕರಾಗಿ ಹೊರಹೊಮ್ಮಲು ಸಾಧ್ಯ. ಪ್ರಸ್ತುತ ಈ ಕಾರ್ಯಾಗಾರದಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳು ನಿಮಗೆ ಇಡೀ ಒಂದು ದಿವಸ ನಿರಂತರವಾಗಿ ಹಲವು ಆಯಾಮಗಳಿಂದ ಸಜ್ಜುಗೊಳಿಸಿ ಉತ್ತಮ ತರಬೇತಿ ನೀಡಿದ್ದಾರೆ.ಅವರೆಲ್ಲರೂ ಕೊಟ್ಟ ಅಮೂಲ್ಯ ಸಲಹೆಗಳು ನೀಡಿದ ವಿಭಿನ್ನವಾದ ತಂತ್ರಗಳು ಭವಿಷ್ಯದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ “ಪೌಷ್ಟಿಕ ಆಹಾರ” ಇದ್ದಂತೆ ಎಂದು ಮಾರ್ಮಿಕವಾಗಿ ನುಡಿದರು.ಇಡೀ ಸಮಾರಂಭದಲ್ಲಿ ನಿರೂಪಣೆ ಗೆಲ್ಲಬಾರದು ಒಟ್ಟು ಸಮಾರಂಭವೇ ಗೆಲ್ಲಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.ನಿರೂಪಕ “ಒಂದು ಹಡಗಿನ ನಾವಿಕ ಇದ್ದಂತೆ”.ಸಮಯ ಸಂದರ್ಭ ಅರಿತು ನಿರೂಪಿಸುವ ಕಲೆಯನ್ನು ಕೈವಶ ಮಾಡಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಪ್ರಮುಖ ಹಲವು ಸುವರ್ಣ ಸಲಹೆಗಳನ್ನು ನೀಡಿದರು. ಪ್ರೊ.ವಿ.ಬಿ.ಜೋಡಟ್ಟಿ ಸ್ವಾಗತಿಸಿದರು. ಶ್ರೀಮತಿ ವಾಣಿ ಚೌಗಲಾ ನಿರೂಪಿಸಿದರು. ಶ್ರೀ ಸಂತೋಷ ತಮದಡ್ಡಿ ಶರಣು ಸಮರ್ಪಿಸಿದರು. ಇಡೀ ಕಮ್ಮಟ ಗೆಲುವಿನ ನಗೆಗೆ ಶ್ರೀಕಾರ ಬರೆಯಿತು.
*ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*