ಬೆಳಗಾವಿ: ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ ನಡೆದ ಕೋವಿಡ್ ಹಗರಣ ಕುರಿತು ತನಿಖೆ ಮಾಡಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರವಿದ್ದಾಗ ಪ್ರಮುಖ ಹಗರಣಗಳಾದ ಶೇ 40ರಷ್ಟು ಕಮಿಷನ್, ಕೊರೊನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ, ನೀರಾವರಿ ಕಾಮಗಾರಿಗಳಲ್ಲಿ ಅವ್ಯವಹಾರ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಕೋವಿಡ್ ಹಗರಣ ತನಿಖೆ ಮಾಡುವಂತೆ ನಾವೇ ಮೊದಲು ಡಿಮ್ಯಾಂಡ್ ಮಾಡಿದ್ದೆವು, ಸಧ್ಯ ನಮ್ಮ ಸರ್ಕಾರ ವತಿಯಿಂದ ಈ ಪ್ರಕರಣ ಕುರಿತು ಸೂಕ್ತ ತನಿಖೆ ಮಾಡಲಾಗುವುದು ಎಂದು ಹೇಳಿದರು.
ಹಿಂದಿನ ಸರ್ಕಾರದ ವೈದ್ಯಕೀಯ ಸಚಿವ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರಾ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಬರುವುದು ಬಿಡುವುದು ಎರಡನೇ ಮಾತು. ಆದರೆ ಕೋವಿಡ್ ಹಗರಣ ಕುರಿತು ತನಿಖೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಮಾಜಿ ವೈದ್ಯಕೀಯ ಸಚಿವರು ಕೂಡಾ ತನಿಖೆ ಮಾಡಿಸುತ್ತೆವೇ ಎಂದು ಹೇಳುತ್ತಿದ್ದಾರೆ. ಇದು ಹಾಸ್ಯಾಸ್ಪದ, ಅವರು ಈಗ ಮಾಜಿಯಾಗಿದ್ದು ಅವರಿಗೆ ಮಾಡಲು ಕೆಲಸವಿಲ್ಲ, ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಇದೆ. ಕೋವಿಡ್ ಹಗರಣ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ನಮ್ಮ ಪಕ್ಷದಿಂದ ಸಾಕಷ್ಟು ತಯಾರಿ ನಡೆಸಿದ್ದು, ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕು ಎಂಬುವುದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಿರುವಾಗ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸಬೇಕೋ ಬೇಡವೋ ಎಂದು ಇನ್ನು ಚರ್ಚೆ ನಡೆಯಬೇಕಿದೆ ಎಂದರು.
ನೈತಿಕ ಪೊಲೀಸಗಿರಿಗೆ ಕ್ರಮ: ಕಳೆದ ದಿನಗಳಿಂದ ಬೆಳಗಾವಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇಂತಹ ಘಟನೆಗಳು ಜಿಲ್ಲೆ ಅಷ್ಟೇ ಅಲ್ಲ ರಾಜ್ಯದಲ್ಲೂ ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದರು.