ಸಾಂಸ್ಕೃತಿಕ ಕ್ರೀಡೆ, ಎನ್.ಎಸ್.ಎಸ್,ಯುವ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ.
ವರದಿ: ಸಂಗಮೇಶ ಹಿರೇಮಠ.
ಮುಗಳಖೋಡ: ನಮ್ಮ ಭಾರತವು ಸಂಪ್ರದಾಯಗಳ ದೇಶ, ವಿದ್ಯಾರ್ಥಿಗಳು ಸಂಸ್ಕೃತಿಯಲ್ಲಿ ಬೇರೆ ದೇಶಗಳನ್ನು ಅನುಕರಣೆ ಮಾಡುವುದನ್ನು ಬಿಟ್ಟು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಹೊರತುಪಡಿಸಿ ಹಲವು ಸಂಪ್ರದಾಯಗಳ ದೇಶವಾದ ನಮ್ಮ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ವಿವಿಧ ತೆರನಾದ ಕೌಶಲ್ಯಗಳನ್ನು ಕಾಲೇಜಿನಲ್ಲಿ ಸಿಗುವ ಅವಕಾಶ ಬಳಸಿಕೊಂಡು ವೇದಿಕೆಯ ಮೂಲಕ ಹೊರಹಾಕಿ ಸಮಾಜದಲ್ಲಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಜಿ ನಾಯಕ ಹೇಳಿದರು.
ಅವರು ಮುಗಳಖೋಡ ಪಟ್ಟಣದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ 2022-23ನೇ ಸಾಲಿನ ಎಲ್ಲ ಘಟಕಗಳ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಬಿಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಎಲ್ಲ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಮೂರು ವರ್ಷ ಪದವಿಯಲ್ಲಿ ಪಡೆದ ಶಿಕ್ಷಣವನ್ನು ಜಾಗೃತವಾಗಿಟ್ಟುಕೊಂಡು ಮುಂದಿನ ನಿಮ್ಮ ಉಜ್ವಲ ಭವಿಷ್ಯಕ್ಕೆ ಬಳಸಿಕೊಳ್ಳಿ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಿಕ್ಷಣ ಶಾಸ್ತ್ರ ಪ್ರಾಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ.ವ್ಹಿ.ಆರ್. ದೇವರೆಡ್ಡಿ ಮಾತನಾಡಿ ಶ್ರೇಷ್ಠವಾದ ಮಹಾವಿದ್ಯಾಲಯಕ್ಕೆ ಆಗಮಿಸುವಾಗ ಬರಿಗೈಯಲ್ಲಿ ವಿವಿಧ ಬಗೆಯ ಗುರಿಗಳನ್ನು ಇಟ್ಟುಕೊಂಡು ಇಲ್ಲಿಗೆ ಬಂದು ಹಲವಾರು ವಿಷಯಗಳಿಗೆ ಅನುಗುಣವಾಗಿ ಶಿಕ್ಷಣ, ವಿದ್ಯೆ, ಕೌಶಲ್ಯಗಳನ್ನು ತುಂಬಿಕೊಂಡ ಈ ಮೂರು ವರ್ಷದ ಪದವಿ ಮುಂದಿನ ನಿಮ್ಮ ಜೀವನದಲ್ಲಿ ಬೆಳಕಾಗಲಿ, ಉನ್ನತ ಶಿಕ್ಷಣವನ್ನು ಪಡೆದುಕೊಂಡು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಹೊರಹೊಮ್ಮಿ ಎಂದು ಹೇಳಿ, ತಮ್ಮ ಸ್ವ ರಚಿತ ಜಾನಪದ ಹಾಡಿನೊಂದಿಗೆ ವಿದ್ಯಾರ್ಥಿಗಳನ್ನು ಮನರಂಜಿಸಿದರು.
ಅತಿಥಿಗಳಾಗಿ ಆಗಮಿಸಿದ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಎಸ್.ಎಸ್. ಮದಾಳೆ ಹಾಗೂ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಜೆ.ಆರ್. ಮೊಗವೀರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಹಲವಾರು ವಿದ್ಯಾರ್ಥಿಗಳು ತಮ್ಮ ಪದವಿಯಲ್ಲಿ ನಡೆದ 3 ವರ್ಷದ ಅನುಭವಗಳನ್ನು ಅನಿಸಿಕೆಯ ಮೂಲಕ ಹಂಚಿಕೊಂಡರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪ್ರಕಾಶ ಕಂಬಾರ ಎಲ್ಲರನ್ನ ಸ್ವಾಗತಿಸಿ, ಪರಿಚಯಿಸಿ, ವಿದ್ಯಾರ್ಥಿಗಳನ್ನ ಕುರಿತು ಅವರ ಪದವಿ ಶಿಕ್ಷಣದಲ್ಲಿ ನಡೆದ ಸಿಹಿ ಘಟನೆಗಳನ್ನು ಹಂಚಿಕೊಂಡು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪರಗೌಡ ಖೇತಗೌಡರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಸಂಗಮೇಶ ಹಿರೇಮಠ, ರೆಡ್ ಕ್ರಾಸ್ ಘಟಕದ ಸಂಯೋಜಕ ಪ್ರದೀಪ ನಾಯಿಕ, ಎನ್.ಎಸ್.ಎಸ್ ಘಟಕದ ಸಂಯೋಜಕ ವಿವೇಕಾನಂದ ಹುಂಡರಗಿ ಡಾ.ಪಿ.ಬಿ. ಕೊರವಿ, ಜಿ.ಎಸ.ಜಂಬಿಗಿ ಕೆ.ಪಿ.ಹಾಲಳ್ಳಿ, ಎಚ್.ಎಂ.ಕಂಕನವಾಡಿ, ಬಿ.ಎಸ್. ಸವಸುದ್ದಿ, ಗ್ರಂಥ ಪಾಲಕ ಸಂಗಣ್ಣ ತೇಲಿ, ಕುಮಾರಿ ಆರ್.ಎಂ.ಖೇತಗೌಡರ, ಪ್ರಥಮ ದರ್ಜೆ ಸಹಾಯಕ ಹುಸೇನ್ ಎಲಿಗಾರ್, ಬಸವರಾಜ್ ಸಣ್ಣಕ್ಕಿ, ಲಕ್ಷ್ಮಣ್ ಕರಬಿಮಗೋಳ, ಗಂಗವ್ವ ನಡುವಿನಕೇರಿ ಸೇರಿದಂತೆ ಪದವಿ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.