ಬೆಳಗಾವಿ : ಜಿಲ್ಲೆಯ ಪ್ರತಿ ಹಳ್ಳಿಯ ಜನರಿಗೆ ಎಲ್ಲಾ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 150 ‘ಗ್ರಾಮ ಒನ್’ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ಬೆಳಗಾವಿ: ಜಿಲ್ಲೆಯ ಪ್ರತಿ ಹಳ್ಳಿಯ ಜನರಿಗೆ ಎಲ್ಲಾ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 150 ‘ಗ್ರಾಮ ಒನ್’ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ.
ನಾಗರಿಕ, ಬ್ಯಾಂಕಿಂಗ್ ಸೇವೆಗಳು, ಆರ್ ಟಿಐ ಸೇರಿದಂತೆ ಗ್ರಾಮ ಮಟ್ಟದಲ್ಲಿಯೇ ಎಲ್ಲಾ ನಾಗರಿಕ ಕೇಂದ್ರೀತ ಚಟುವಟಿಕೆಗಳಿಗಾಗಿ ನೆರವು ಒದಗಿಸಲು ಕರ್ನಾಟಕ ಸರ್ಕಾರ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಿದೆ. 2020-21ರ ಬಜೆಟ್ ನಲ್ಲಿ ಸರ್ಕಾರ ಗ್ರಾಮ ಒನ್ ಪರಿಕಲ್ಪನೆಯನ್ನು ಘೋಷಿಸಿತು. ಈ ಕೇಂದ್ರಗಳು ವಾರದ ಎಲ್ಲಾ ದಿನಗಳು ಕಾರ್ಯನಿರ್ವಹಿಸಲಿವೆ. ನಾಗರಿಕರು ಜಿಲ್ಲೆ, ತಾಲೂಕು ಮತ್ತು ಹೋಬಳಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ತಮ್ಮ ಗ್ರಾಮದಲ್ಲಿಯೇ ಸೇವೆ ಪಡೆಯುವ ಮೂಲಕ ಸಮಯ ಮತ್ತು ಹಣವನ್ನು ಉಳಿಸುವುದು, ಮಧ್ಯವರ್ತಿಗಳ ಹಾವಳಿ ತೊಡೆದುಹಾಕುವುದು ಈ ಕೇಂದ್ರಗಳ ಪ್ರಮುಖ ಉದ್ದೇಶವಾಗಿದೆ.
ಅವು ವಾರದ ಎಲ್ಲಾ ದಿನಗಳು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸುವುದರಿಂದ ನಾಗರಿಕರು ತಮ್ಮ ಅನುಕೂಲಕರ ಸಮಯದಲ್ಲಿ ಸೇವೆಗಳನ್ನು ಪಡೆಯಬಹುದಾಗಿದೆ. ಪ್ರಸ್ತುತ, ಜಿಲ್ಲೆಯ 14 ತಾಲ್ಲೂಕುಗಳಲ್ಲಿ ಒಟ್ಟು 649 ‘ಗ್ರಾಮ ಒನ್’ ಕೇಂದ್ರಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ನಾಗರಿಕರು ಈ ಕೇಂದ್ರಗಳಲ್ಲಿ ‘ಆಯುಷ್ಮಾನ್ ಭಾರತ್’, ಪ್ಯಾನ್, ಆಧಾರ್ ಕಾರ್ಡ್ ತಿದ್ದುಪಡಿಗಳನ್ನು ಮಾಡಿಸಬಹುದು, ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬಹುದು, ಪಾಸ್ಪೋರ್ಟ್, ಆಧಾರ್ ಆಧಾರಿತ ನಗದು ಹಿಂಪಡೆಯುವಿಕೆ, ಪಡಿತರ ಚೀಟಿ ಅರ್ಜಿ, ರೈಲು ಟಿಕೆಟ್ಗಳನ್ನು ಬುಕ್ ಮಾಡಬಹುದು. ಜೊತೆಗೆ ‘ಗೃಹ ಜ್ಯೋತಿ’ ಮತ್ತು ‘ಗೃಹ ಲಕ್ಷ್ಮಿ’ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.
ಸದ್ಯ ಇರುವ ಕೇಂದ್ರಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಕೆಲಸದ ಹೊರೆಯನ್ನು ಮನಗಂಡು ಸರ್ಕಾರವು ಬೆಳಗಾವಿ ಜಿಲ್ಲೆಗೆ 150 ಹೆಚ್ಚುವರಿ ಕೇಂದ್ರಗಳನ್ನು ಮಂಜೂರು ಮಾಡಿದೆ. ಜಿಲ್ಲಾಡಳಿತವು ಈಗಾಗಲೇ ಆಸಕ್ತ ಅಭ್ಯರ್ಥಿಗಳಿಂದ ಆಗಸ್ಟ್ 10 ರಿಂದ 30 ರವರೆಗೆ ಅರ್ಜಿಗಳನ್ನು ಸ್ವೀಕರಿಸಿದೆ. ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿದ ನಂತರ, ಕೇಂದ್ರಗಳನ್ನು ನಿರ್ವಾಹಕರಿಗೆ ಹಂಚಿಕೆ ಮಾಡಲಾಗುವುದು ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ ಅವು ಕಾರ್ಯನಿರ್ವಹಿಸಲಿವೆ. 150 ಹೊಸ ಕೇಂದ್ರಗಳ ಸೇರ್ಪಡೆಯೊಂದಿಗೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 799 ‘ಗ್ರಾಂ ಒನ್’ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.