ಬೆಳಗಾವಿ: ಪದೇ ಪದೆ ನನಗೆ ಬಿದ್ದ ಪೆಟ್ಟಿನಿಂದಾಗಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಬಹಳಷ್ಟು ನೋವು, ಅಪಮಾನ ಆಗಿದ್ದರಿಂದಲೇ ನಾನು ಬೆಳೆಯಲು ಸಾಧ್ಯವಾಯಿತು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅಡವೀಶ್ವರ ದೇವರ ನೇತೃತ್ವದಲ್ಲಿ ಶನಿವಾರ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ವಚನ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಹಳಷ್ಟು ಜನರು ನನಗೆ ತೊಂದರೆ ಕೊಟ್ಟಿದ್ದಾರೆ. ಆದರೆ ಧೈರ್ಯಂ ಸರ್ವತ್ರಸಾಧನಂ ಎಂದು ನಾನು ಮುನ್ನುಗ್ಗಿದ್ದೇನೆ. ನಾನೂ ನಿಮ್ಮಷ್ಟೇ ಕೆಲಸ ಮಾಡುತ್ತೇನೆ. ನನಗೂ ನಿಮ್ಮಷ್ಟೇ ಸಮಯವಿದೆ, ನಿಮ್ಮಷ್ಟೇ ಕೈಗಳಿವೆ. ಆದರೆ ಧೈರ್ಯದಿಂದ ಎಲ್ಲವನ್ನೂ ಎದುರಿಸಿದ್ದರಿಂದ ರಾಜ್ಯದ ಸಚಿವೆಯಾಗಲು ಸಾಧ್ಯವಾಯಿತು. ಒಂದೋ ಎರಡೋ ದಿನಕ್ಕೆ ನಾನು ಈ ಮಟ್ಟಕ್ಕೆ ಬೆಳೆದಿಲ್ಲ ಎಂದು ಅವರು ತಿಳಿಸಿದರು.
ಬಸವಣ್ಣನವರು 12ನೇ ಶತಮಾನದಲ್ಲಿ ಧರ್ಮ ಸ್ಥಾಪನೆ ಮಾಡಿದರು. ಜಾತೀಯತೆ ಹೋಗಲಾಡಿಸಲು ಅವರು ಪ್ರಯತ್ನಿಸಿದರು. 1200 ವರ್ಷದ ಹಿಂದೆ ಅವರು ನೀಡಿದ ಸಂದೇಶವನ್ನು ನಾವು ಪಾಲಿಸಿಕೊಂಡು ಬರುತ್ತಿದ್ದೇವೆ. ನಮ್ಮ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಲು ಇಂತಹ ವಚನ-ಪ್ರವಚನಗಳನ್ನು ನಡೆಸಿಕೊಡು ಬರುತ್ತಿದ್ದೇವೆ. ಎಲ್ಲ ಜಾತಿಯವರನ್ನು ಸೇರಿಸಿಕೊಂಡು ಈ ಸಮಾಜ ಆಗಿದೆ. ಎಲ್ಲರೂ ನಮ್ಮವರು ಎಂದುಕೊಂಡು, ಎಲ್ಲ ಸಮಾಜವರ ಜೊತೆ ಅನ್ಯೋನ್ಯವಾಗಿರೋಣ ಎಂದು ಹೆಬ್ಬಾಳಕರ್ ತಿಳಿಸಿದರು.
ನನ್ನ ಕ್ಷೇತ್ರದಲ್ಲಿ ಎಂತಹ ಕಾರ್ಯಕ್ರಮ ಇದ್ದರೂ ಓಡೋಡಿ ಬರುತ್ತೇನೆ. ಶ್ರಾವಣ ಮಾಸದ ಈ ಪುಣ್ಯ ಕಾಲದಲ್ಲಿ ಎಲ್ಲ ಗುರು ಹಿರಿಯರ, ತಮ್ಮೆಲ್ಲರ ದರ್ಶನ ಪಡೆಯುವ, ಪವಿತ್ರವಾದ ವಿಚಾರಧಾರೆಯನ್ನು ಕೇಳುವ ಅವಕಾಶ ಸಿಕ್ಕಿದ್ದು ನನ್ನ ಸುಧೈವ.
ನಾವು ಪ್ರತಿ ಕ್ಷಣವೂ ಬದಲಾಗುತ್ತ ಮುನ್ನಡೆಯಬೇಕು. ಈ ಭೂಮಿಯ ಮೇಲೆ ಹುಟ್ಟಿದ ಯಾರೊಬ್ಬರು ಕೂಡ ನಿಷ್ಪ್ರಯೋಜಕರಲ್ಲ, ದಡ್ಡರಲ್ಲ. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ಅಗತ್ಯವಿರುತ್ತದೆ. ನಾವು ಹಿರಿಯರಿಂದ ಮಾರ್ಗದರ್ಶನ ಪಡೆಯುತ್ತ, ಪಡೆದ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುತ್ತ ಸಾಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದುಮ್ಮವಾಡದ ಸರ್ಪಭೂಷಣ ದೇವರು, ಶಿವಗೌಡ ರಾ ದೇಸಾಯಿ, ನಾಗೇಶ ದೇಸಾಯಿ, ಸದಾಶಿವ ಮ ಪಾಟೀಲ ಹಾಗೂ ಗ್ರಾಮದ ನೂರಾರು ಮಹಿಳೆಯರು, ಹಿರಿಯರು ಉಪಸ್ಥಿತರಿದ್ದರು.