ಬೆಳಗಾವಿ :ಪಕ್ಕದ ಅಥಣಿ ತಾಲ್ಲೂಕಿನ ಸುಕ್ಷೇತ್ರ ಕೊಕಟನೂರ ಯಲ್ಲಮ್ಮನ ದೇವಸ್ಥಾನಕ್ಕೆ ಕರ್ನಾಟಕದ ಭಕ್ತರಿಗಿಂತ ದಕ್ಷಿಣ ಮಹಾರಾಷ್ಟ್ರದ ಸಾವಿರಾರು ಭಕ್ತಗಣ ದೇವಿಯ ನಿರ್ದಿಷ್ಟ ವಾರಗಳಾದ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯ ದಿನಗಳಿಗೆ ಬಂದು ದೇವಿಯ ದರುಶನ ಪಡೆದುಕೊಂಡು ಹೋಗುತ್ತಾರೆ. ಶುಕ್ರವಾರ ಬೆನಕನ ಅಮಾವಾಸ್ಯೆಯ ನಿಮಿತ್ಯ ಮಾಡಿಕೊಂಡು ನಾನು ಕೂಡ ನನ್ನ ಬಾಳ ಸಂಗಾತಿಯೊಂದಿಗೆ ದೇವಿಯ ದರ್ಶನಕ್ಕೆ ಹೋಗಿದ್ದೆ. ಅಂದು ಸರತಿ ಸಾಲಿನಲ್ಲಿ ನಿಂತು ದರುಶನ ಮಾಡಿಕೊಂಡು ಬಂದೆವು. ದರುಶನ ಪಡೆದ ನಂತರ ಇಡೀ ದೇವಸ್ಥಾನದ ಸುತ್ತ ಮುತ್ತಲಿನ ಪರಿಸರ ನಾನು ಖುದ್ದು ವೀಕ್ಷಣೆ ಮಾಡಿದಾಗ ಸ್ವಚ್ಛತೆಯ ಕೊರತೆ ಇರುವುದನ್ನು ಮನಗಂಡೆ. ದೇವಸ್ಥಾನದ ಎಡಗಡೆಯ ಪಕ್ಕದ ಹಳ್ಳದಲ್ಲಿ ಬಹಳವಾಗಿ ಘನ ತ್ಯಾಜ್ಯ ಕೊಳೆತು ತುಂಬಿಕೊಂಡಿರುವುದನ್ನು ಕಂಡೆ. ಬಹಳ ದಿನಗಳವರೆಗೆ ನಿಂತ ಗಲೀಜು ನೀರು ಅದು. ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ರುಜಿನ ಹರಡುವ ಸಾಧ್ಯತೆಯೇ ಹೆಚ್ಚು. ಎಲ್ಲಿ ಬೇಕಾದಲ್ಲಿ ಬಾಳೆ ಸಿಪ್ಪೆ, ತೆಂಗಿನಕಾಯಿ ಸಿಪ್ಪೆ, ಬಂಡಾರದ ಚೀಲಗಳು, ಪ್ಲಾಸ್ಟಿಕ್ ಚೀಲಗಳು, ಹಾಗೆಯೇ ಬಿದ್ದಿವೆ. ಮಹಿಳೆಯರಿಗೆ ಮಡಿ ಸ್ನಾನ ಮಾಡಲು ಸ್ವಲ್ಪ ದಿನ್ನೆಯ ಮೇಲೆ ನೀರಿನ ಟ್ಯಾಂಕ್ ಅನುಕೂಲ ಮಾಡಿದ್ದಾರೆ ನಿಜ. ಆದರೆ ಬಯಲಿನಲ್ಲಿ ಕುಳಿತು ಸ್ನಾನ ಮಾಡಿ ದೇವಿಯ ದರ್ಶನ ಮಾಡಲು ತೆರಳುತ್ತಾರೆ!!. ಅಲ್ಲಿ ಪುರುಷ ಭಕ್ತರು ಹಾಗೆಯೇ ಸಂಚರಿಸುತ್ತಾರೆ. ಮಹಿಳಾ ಭಕ್ತರಿಗೆ ಪ್ರತ್ಯೇಕ ಸ್ನಾನದ ಗೃಹಗಳ ಅನುಕೂಲತೆಯ ಕೊರತೆ ಎದ್ದು ಕಾಣುತ್ತಿತ್ತು. ಅವಶ್ಯವಾಗಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಸಂಬಂಧಿಸಿದವರು ಆದ್ಯ ಗಮನ ಹರಿಸಬೇಕಾಗಿದೆ. ಭಕ್ತರ ಮಾಹಿತಿಗೆ ಅನುಕೂಲತೆಯ ದೃಷ್ಟಿಯಿಂದ ಗುಡಿಯ ಆವರಣ ಮೇಲ್ಬಾಗದಲ್ಲಿ ಇರುವ ಗೋಡೆ ಗಡಿಯಾರ ಬಂದ್ ಬಿದ್ದಿದ್ದು ನಾನು ಕಂಡೆ. ಅತ್ತ ಕಡೆ ಯಾರ ಗಮನ ಕೊಡದೇ ಇರುವುದು ಒಂದು ಸೋಜಿಗ. ಗಡಿಯಾರಕ್ಕೆ ಒಂದು ಸೆಲ್ ತಂದು ಹಾಕಲಾರದ ಸ್ಥಿತಿ ದೇವಸ್ಥಾನದ ಆಡಳಿತ ಮಂಡಳಿಗೆ ಬಂದಿತೆ? ಎಂದು ನನ್ನ ಮನದಲ್ಲಿ ಪ್ರಶ್ನೆಗಳು ತಡಕಾಡಿದವು. ಎಲ್ಲಿ ಸ್ವಚ್ಛ ಇರುತ್ತದೆ ಅಲ್ಲಿ ಭಗವಂತ ವಾಸಿಸುತ್ತಾನೆ ಎಂದು ಒಂದು ಚಿಂತನೋಕ್ತಿ ಹೇಳುತ್ತದೆ. ವಾರಕ್ಕೊಮ್ಮೆ ಅಥವಾ 3 ದಿನಕ್ಕೊಮ್ಮೆ ದೇವಸ್ಥಾನದ ಸುತ್ತಮುತ್ತ, ಆವರಣದಲ್ಲಿ ಬೀಳುವ ಘನತ್ಯಾಜ್ಯ ವಿಲೇವಾರಿ ಮಾಡದೇ ಇರುವುದರಿಂದ ದೇವಸ್ಥಾನದ ಆವರಣ ಗಲೀಜಾಗಿ ಮುಂದಿನ ದಿನಗಳಲ್ಲಿ ಮೂಗು ಮುಚ್ಚಿಕೊಂಡು ದೇವಿಯ ದರುಶನ ಪಡೆಯಬೇಕಾದ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಾಗಿಲ್ಲ. ಈ ಭಾಗದ ಕಾಲೇಜುಗಳಲ್ಲಿ ಇರುವ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಮೂಲಕ ಈ ಸ್ಥಳದಲ್ಲಿ ವಿಶೇಷ ಶಿಬಿರ ಆಯೋಜಿಸಿ ಶ್ರದ್ಧೆಯ ತಾಣವಾದ ಈ ದೇಗುಲದ ಪರಿಸರವನ್ನು ಸ್ವಚ್ಛಗೊಳಿಸಿ ಅನನ್ಯ ಸೇವಾ ಭಾವ ಮೆರೆಯಬಹುದಿತ್ತು ಎಂದು ಪ್ರಜ್ಞಾವಂತ ನಾಗರಿಕರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ.
ವರದಿ:ಡಾ.ಜಯವೀರ ಎ.ಕೆ.*
*ಖೇಮಲಾಪುರ*