62 ನೇ ಶಿಕ್ಷಕರ ದಿನಾಚರಣೆ ಮತ್ತು ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಉದ್ಘಾಟನೆ ಕಾರ್ಯಕ್ರಮಬೆಳಗಾವಿ: ಎಲ್ಲ ಮಕ್ಕಳನ್ನೂ ಸಮಾನದೃಷ್ಟಿಯಿಂದ ನೋಡುವ ಶಿಕ್ಷಕರು, ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುತ್ತಾರೆ. ಮಕ್ಕಳ ಭವಿಷ್ಯಕ್ಕೆ ಪಾಲಕರಿಗಿಂತ ಹೆಚ್ಚು ಕಾಳಜಿ ವಹಿಸುತ್ತಾರೆ. ಅಂತಹ ಶಿಕ್ಷಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯ ಪಟ್ಟರು.
ಜಿಲ್ಲಾ ಪಂಚಾಯತ್ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ (ದ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ತಾಲೂಕಾ ವಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ಗಾಂಧಿ ಭವನದಲ್ಲಿ ಶನಿವಾರ ನಡೆದ 62 ನೇ ಶಿಕ್ಷಕರ ದಿನಾಚರಣೆ ಮತ್ತು ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಲ್ಲ ಮಕ್ಕಳನ್ನೂ ಸಮಾನದೃಷ್ಟಿಯಿಂದ ನೋಡುವ ಶಿಕ್ಷಕರು, ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುತ್ತಾರೆ. ಮಕ್ಕಳ ಭವಿಷ್ಯಕ್ಕೆ ಪಾಲಕರಿಗಿಂತ ಹೆಚ್ಚು ಕಾಳಜಿ ವಹಿಸುತ್ತಾರೆ. ಅಂತಹ ಶಿಕ್ಷಕರಿಗೆ ನೆಮ್ಮದಿಯ ಜೀವನ ನೀಡಲು ನಮ್ಮ ಸರಕಾರ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಬೆಳಗಾವಿಯಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಜಾಗ ಒದಗಿಸುವುದಾಗಿ ಭರವಸೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್, ಈ ದೇಶವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಶಂಸಿಸಿದರು.
ಶಿಕ್ಷಕರನ್ನು ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಕರೆಯುತ್ತೇವೆ. ಶಿಕ್ಷಕರಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಇಡೀ ದೇಶದ ಭವಿಷ್ಯ ಶಿಕ್ಷಕರ ಮೇಲೆ ಅವಲಂಬಿಸಿದೆ. ಸಮಾಜದ, ದೇಶದ ಭವಿಷ್ಯವನ್ನು ರೂಪಿಸುವವರು ಶಿಕ್ಷಕರು. ರೈತರು, ಸೈನಿಕರು, ಶಿಕ್ಷಕರು ಆದರ್ಶ ಸಮಾಜದ ಆಧಾರ ಸ್ತಂಭಗಳು ಎಂದ ಅವರು, ಶಿಕ್ಷಕರ ಸಮಸ್ಯೆಗಳು, ಅದರಲ್ಲೂ ಗ್ರಾಮೀಣ ಶಿಕ್ಷಕರ, ಮಹಿಳಾ ಶಿಕ್ಷಕರ ಸಮಸ್ಯೆಗಳನ್ನು ನಾನು ಅರಿತಿದ್ದೇನೆ. ಮಧು ಬಂಗಾರಪ್ಪನವರು ಬಹಳ ಒಳ್ಳೆಯ ಶಿಕ್ಷಣ ಸಚಿವರು. ಅತ್ಯಂತ ತಳಮಟ್ಟದ ಸಮಸ್ಯೆಗಳನ್ನೂ ಅರಿತಿದ್ದಾರೆ. ಖಂಡಿತ ಅವರಿಂದ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ನಾನು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾರಿಹಾಳದ ಶ್ರೀ ಅಡವಿ ಸಿದ್ದೇಶ್ವರ ಸ್ವಾಮಿಗಳು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ ನಾಲತವಾಡ, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ. ದಾಸಪ್ಪನವರ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೋರಿಶೆಟ್ಟಿ, ತಾಲೂಕಾ ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷೆ ಪೂಜಾ ಪಾಟೀಲ, ಎಂ.ಬಿ. ಹುಲಮನಿ, ಬಸವರಾಜ ರಾಯವ್ವಗೋಳ, ಎಂ.ಎಸ್. ಮೇದಾರ, ಮಠದ ಹಾಗೂ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.