ಬೆಳಗಾವಿ: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡನಟ್ಟಿ, ರಾಜ್ಯ ಸಂಚಾಲಕ ಮಹಾದೇವ ತಳವಾರ ಅವರ ನೇತೃತ್ವದಲ್ಲಿ (ಕರವೇ) ಸದಸ್ಯರು ರಾಷ್ಟ್ರೀಯ ಹೆದ್ದಾರಿ ಮೇಲೆ ಶನಿವಾರ ಪ್ರತಿಭಟನೆ ನಡೆಸಿದರು.
ಬೆಳಗಾವಿಯ ಮಹಾಂತೇಶ ನಗರದ ಹತ್ತಿರ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಕರವೇ ಕಾರ್ಯಕರ್ತರು ಪ್ರತಿಭಟಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಪ್ರತಿಕೃತಿ ದಹನ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು. ಈ ವೇಳೆ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಕಾರ್ಯಕರ್ತರು, ಕಾವೇರಿ ಕಣಿವೆ ಭಾಗದ ರೈತರ ಹೊಲ, ಗದ್ದೆಗಳಿಗೆ ನೀರಿಲ್ಲ. ಇಂತಹ ಪರಿಸ್ಥಿತಿ 7 ಟಿಎಂಸಿ ನೀರು ಎಲ್ಲಿಂದ ತರಬೇಕು? ಆದ್ದರಿಂದ, ರಾಜ್ಯ ಸರ್ಕಾರ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಯಾವುದೇ ಕಾರಣಕ್ಕೆ ಪಾಲಿಸಬಾರದು. ನಾಡಿನ ಜನರ ಜೀವನಕ್ಕಿಂತ ಯಾವುದೇ ಪ್ರಾಧಿಕಾರಗಳ ಆದೇಶ ದೊಡ್ಡದಲ್ಲ. ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ರಕ್ತ ಕೊಟ್ಟೆವು ಆದರೆ ಕಾವೇರಿ ನೀರು ಕೊಡೆವು ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಅನೇಕ ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.