ಮೂಡಲ ತೋರಣ ವೈವಿಧ್ಯತೆಯ ಹೂರಣ

Share the Post Now



“ಭರವಸೆಯ ಕಂಗಳಲ್ಲಿ” ತಮ್ಮ ಈ ಚೊಚ್ಚಿಲ ಕಾವ್ಯದ ಮೂಲಕ ಸಾರಸ್ವತ ಲೋಕದಲ್ಲಿ ಪ್ರವೇಶ ಮಾಡಿದ ನನ್ನ ಆತ್ಮೀಯ ಸಾಹಿತ್ಯ ಸಂಗಾತಿ ,ಸದು ವಿನಯದ ಸ್ನೇಹಜೀವಿ, ಕವಿ ಮನದ ಪ್ರೊ.ಶಿವಕುಮಾರ, ಅವರು ಮೂಡಲಗಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ಮಹಾವಿದ್ಯಾಲಯದಲ್ಲಿ 2022~23 ನೇ ಸಾಲಿನ ಅಂತಿಮ ವರ್ಷದ ಐಚ್ಛಿಕ ಕನ್ನಡ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಹೊರಹೊಮ್ಮಿದ ವಿದ್ಯಾರ್ಥಿ ವೆಬ್ ಸಂಚಿಕೆ “ಮೂಡಲ ತೋರಣ” ಇತ್ತೀಚಿಗೆ ಲೋಕಾರ್ಪಣೆಗೊಂಡಿದೆ.

ಈ ವಿಶಿಷ್ಟ ವೆಬ್ ಸಂಚಿಕೆಯ ಸೊಬಗನ್ನು ಸ್ವಲ್ಪ ಅವಲೋಕಿಸಿ ಎಂದು ನನಗೆ ವಾಟ್ಸಾಪ್ ಮೂಲಕ ರವಾನೆ ಮಾಡಿದರು. ಮೂಡಲ ತೋರಣ ವಿಶೇಷ ವೆಬ್ ಸಂಚಿಕೆಯ ಪ್ರಧಾನ ಸಂಪಾದಕರು ಪ್ರೊ. ಶಿವಕುಮಾರ ಕೋಡಿಹಾಳ ಅವರ ಪ್ರಾಮಾಣಿಕ ಪ್ರಯತ್ನ, ವಿಪರೀತ ಆಸಕ್ತಿ, ಐಚ್ಛಿಕ ಕನ್ನಡ ವಿದ್ಯಾರ್ಥಿಗಳ ಸಹಕಾರದಿಂದ ರೂಪುಗೊಂಡ “ಮೂಡಲ ತೋರಣ” ವೆಬ್ ಸಂಚಿಕೆ ವಿಭಿನ್ನ ವಿನೂತನ ಬರಹಗಳಿಂದ ಸಮೃದ್ಧವಾಗಿ ಮೈತುಂಬಿಕೊಂಡು ವಾಚಕರನ್ನು ಕುತೂಹಲದಿಂದ ಸೆಳೆಯುತ್ತದೆ.



ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ,ಸಾಹಿತ್ಯ, ಕಾವ್ಯ ಮೀಮಾಂಸೆ ಹಾಗೂ ಭಾಷೆಯನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವವರು. ತಮ್ಮ ಮೆಚ್ಚಿನ ಅಧ್ಯಾಪಕರ ಮಾರ್ಗದರ್ಶನದಲ್ಲಿ ಸೃಜನಶೀಲ ಹಾಗೂ ರಚನಾತ್ಮಕ ಕಾರ್ಯಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಕನ್ನಡ ಪ್ರಾಧ್ಯಾಪಕರು, ಅವರ ಸೂಕ್ತ ಪ್ರತಿಭೆಯನ್ನು ಗುರುತಿಸಿ, ಚೆನ್ನಾಗಿ ಪ್ರೇರೇಪಿಸಿ, ಉತ್ಸಾಹ ಮತ್ತು ಸ್ಫೂರ್ತಿ ತುಂಬುವ ಕಾರ್ಯ ಮಾಡಿದಾಗ ಮಾತ್ರ ಇಂತಹ ವಿಶಿಷ್ಟ ಸೃಜನಶೀಲ ಕಾರ್ಯಗಳು ರೂಪುಗೊಳ್ಳಲು ಸಾಧ್ಯ. ನಿರಂತರ ಬೋಧನೆ, ಕಲಿಕೆ, ಪ್ರಕ್ರಿಯೆಯ ನಡುವೆ ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರ, ಆರೋಗ್ಯಕರ ಹವ್ಯಾಸಗಳನ್ನು ಬೆಳೆಸುವ ಕನ್ನಡ ಭಾಷಾ ಉಪನ್ಯಾಸಕರು ವಿದ್ಯಾರ್ಥಿಗಳ ಬರವಣಿಗೆಯ ಬಳ್ಳಿಗೆ ಪ್ರೋತ್ಸಾಹದ ಸುರಿಮಳೆ ಸುರಿಸಿದರೆ ವರ್ಗಕೋಣೆಯಲ್ಲಿ ಇಂತಹ ಉದಯೋನ್ಮುಖ ಬರಹಗಾರರು ಬೆಳಕಿಗೆ ಬರಲು ಸಾಧ್ಯ.ಈ ನಿಟ್ಟಿನಲ್ಲಿ ಪ್ರಸ್ತುತ ಈ ಕಾಲೇಜಿನ ವಿದ್ಯಾರ್ಥಿಗಳ ಅಭಿರುಚಿಗೆ ಸಾಹಿತ್ಯದ ಸ್ಪರ್ಶ ನೀಡಿದ ಮಹಾವಿದ್ಯಾಲಯದ ಕನ್ನಡ ವಿಭಾಗದ ಕ್ರಿಯಾಶೀಲ ಹಾಗೂ ಸೃಜನಶೀಲ ಮನದ ಅಧ್ಯಾಪಕರ ಪ್ರಾಮಾಣಿಕ ಪ್ರಯತ್ನ, ಹಾಗೂ ವಿನೂತನ ಪರಿಕಲ್ಪನೆಯನ್ನು ಏಕತ್ರಯಗೊಳಿಸಿದ್ದರ ಸತ್ಫಲವೇ ಈ ಮೂಡಲ ತೋರಣ ಸಂಚಿಕೆ.



ಈ ಸಂಚಿಕೆಯ ಒಳಗಡೆ ಪ್ರವೇಶಿಸಿದರೆ ವ್ಯವಸ್ಥಿತ ಪರಿವಿಡಿ ನಮ್ಮ ಗಮನ ಸೆಳೆಯುತ್ತದೆ. ಗದ್ಯ, ಪದ್ಯ,ನಳಪಾಕ, ಹಾಗೆ ಸುಮ್ಮನೆ ಎಂಬ ವರ್ಗೀಕರಣಗಳಿಂದ ವಿಷಯಗಳ ಸೂಚಿ ಉತ್ತಮ ಮಾಹಿತಿ ನೀಡುತ್ತದೆ.

ಸಂಪಾದಕರ ನುಡಿಯಲ್ಲಿ ಪ್ರೊ.ಶಿವಕುಮಾರ ಕೋಡಿಹಾಳ ಅವರು ಒಂದು ಪತ್ರಿಕೆ ಹೊರಬರಲು ಸಂಪಾದಕರು ಪಡುವ ಕಷ್ಟ ನೋವು ನಲಿವುಗಳನ್ನು ಸ್ವಾರಸ್ಯಕರವಾಗಿ ಮೆಲುಕು ಹಾಕಿ ತಾವು ಕಟ್ಟಿಕೊಂಡ ಕನಸು, ನನಸಾದ ಸಂಗತಿಯನ್ನು ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದಾರೆ. ಈ ವಿಶೇಷ ವೆಬ್ ಸಂಚಿಕೆ ಬೆಳಕು ಕಾಣಲು ಸಹಕರಿಸಿದ ಮಹಾವಿದ್ಯಾಲಯದ ಸಕಲ ಕನ್ನಡ ಮನಸ್ಸುಗಳನ್ನು ಅಭಿಮಾನದಿಂದ ಸ್ಮರಿಸಿ ಹೃದಯ ತುಂಬಿ ಅಭಿವಂದಿಸಿದ್ದಾರೆ.



ಪೂರಕ ವರ್ಣಮಯ ಛಾಯಾಚಿತ್ರಗಳು ನಯನ ಮನೋಹರವಾಗಿ ಓದುಗರ ಮನದಲ್ಲಿ ದೀರ್ಘಕಾಲ ಉಳಿಯುವಂತೆ ಮಾಡುತ್ತವೆ. ಈ
ಮಹಾವಿದ್ಯಾಲಯದಲ್ಲಿ ಕನ್ನಡ ಬೋಧಿಸುವ ಒಟ್ಟು 6 ಜನ ಕನ್ನಡ ಕಿಂಕರರ ಪರಿಚಯವನ್ನು ಕು.ಅಕ್ಷತಾ ಹಳ್ಳೂರ ಚೆನ್ನಾಗಿ ಕಟ್ಟಿಕೊಟ್ಟಿದ್ದು ಮಾಹಿತಿಪೂರ್ಣವಾಗಿದೆ.
ಗದ್ಯಭಾಗದಲ್ಲಿ ಒಟ್ಟು 14 ಬರಹಗಳು ವಿಶೇಷವಾಗಿ ಓದುಗರ ಮನಸ್ಸನ್ನು ಸೆರೆಹಿಡಿಯುತ್ತವೆ. ಮೂಡಲಗಿ ಸುತ್ತಮುತ್ತಲಿನ ವಿಶಿಷ್ಟ ಸಂಗತಿಗಳನ್ನು ಹಲವು ವಿದ್ಯಾರ್ಥಿಗಳು ಇಲ್ಲಿ ಆಡುಭಾಷೆಯಲ್ಲಿ ಅಭಿವ್ಯಕ್ತಿಸಿ ಸ್ವಾರಸ್ಯಕರವಾಗಿ ವಿಶ್ಲೇಷಣೆ ಮಾಡಿದ್ದು ಕಂಡುಬರುತ್ತದೆ. ಸಾಂದರ್ಭಿಕವಾಗಿ ಪದಪುಂಜಗಳನ್ನು ಬಳಸಿ ವಾಚಕರ ಮನ ಆಕರ್ಷಿಸುವಂತೆ ಮಾಡಲು ವಿದ್ಯಾರ್ಥಿಗಳು ಇನ್ನೂ ಅಧ್ಯಯನಶೀಲರಾಗಬೇಕು. ಬೇರೆ ಬೇರೆ ಕೃತಿಗಳನ್ನು ಓದಿದಾಗ ವಸ್ತು, ಶೈಲಿ, ತಂತ್ರ, ನಿರೂಪಣಾ ಶೈಲಿ, ಅಭಿವ್ಯಕ್ತಿಯ ವಿನ್ಯಾಸಗಳು ನಮಗೆ ಪರಿಚಯವಾಗುತ್ತ ಸಾಗುತ್ತವೆ. ಈ ನಿಟ್ಟಿನಲ್ಲಿ ಗದ್ಯದ ಭಾಗದಲ್ಲಿ ಇಲ್ಲಿನ ವಿದ್ಯಾರ್ಥಿ ಲೇಖಕರ ಹಲವು ಬರವಣಿಗೆಯನ್ನು ಇಡಿಯಾಗಿ ಗಮನಿಸಿದರೆ ಇವರ ವಿಷಯ ಸಂಗ್ರಹಣೆ, ವಿಶ್ಲೇಷಣೆ ವಿಧಾನ,ನಿರೂಪಿಸುವ ಕೌಶಲ್ಯ ಆಶಾದಾಯಕವಾಗಿದೆ. ಇವರೆಲ್ಲರಿಗೂ ಮತ್ತಷ್ಟು ಮಾರ್ಗದರ್ಶನ ಮಾಡಿದರೆ ಹಾಗೂ ವಿದ್ಯಾರ್ಥಿಗಳು ಭವಿಷ್ಯದಲ್ಲಿ ನಿರಂತರ ಬರವಣೆಗೆಯ ಕೃಷಿ ಮಾಡಿದರೆ ಕನ್ನಡ ಸಾಹಿತ್ಯ ಲೋಕದಲ್ಲಿ ಇವರೆಲ್ಲರೂ ಭರವಸೆಯ ಬರಹಗಾರರಾಗಿ ರೂಪುಗೊಳ್ಳುವುದರಲ್ಲಿ ಎರಡು ಮಾತಿಲ್ಲ.


ಪದ್ಯ ಭಾಗದಲ್ಲಿ ಹಲವು ವಿದ್ಯಾರ್ಥಿಗಳು ಜನಪದ ಸಾಹಿತ್ಯ ಮಹಿಳಾ ಸಾಹಿತ್ಯ ನವ್ಯೋತ್ತರ ಸಾಹಿತ್ಯದ ಹಲವು ಕವಿತೆಗಳನ್ನು ಸಂಗ್ರಹಿಸಿ ತಮ್ಮ ಮತಿಗೆ ನಿಲುಕಿದಷ್ಟು ಕೃತಿಯ ಅಂತರಂಗದ ಕದ ತಟ್ಟುವ ಪ್ರಯತ್ನ ಮಾಡಿದ್ದಾರೆ. ಸರಳ ಶೈಲಿಯಲ್ಲಿ ವಿಮರ್ಶೆ ಮಾಡಿದ್ದು ಗಮನಾರ್ಹ.

ನಳಪಾಕ ವಿಭಾಗದಲ್ಲಿ ಹಲವು ವಿದ್ಯಾರ್ಥಿನಿಯರು ಕೋಸುಂಬರಿ, ಬೆಲ್ ಪುರಿ ಹಾಗೂ ಸಿಹಿ ಪೊಂಗಲ್ ಮಾಡುವ ವಿಧಾನಗಳನ್ನು ಅತ್ಯಂತ ಮನೋಜ್ಞವಾಗಿ ಮಾಹಿತಿ ನೀಡಿದ್ದಾರೆ. ವೈವಿಧ್ಯಮಯ ಹಾಗೂ ರುಚಿಕಟ್ಟಾದ ತಿಂಡಿ ತಿನಿಸುಗಳ ತಯಾರಿಕೆಯ ವಿಧಾನಗಳನ್ನು ಪ್ರತಿಯೊಬ್ಬರು ಅರಿಯಬೇಕು ಎಂಬುದನ್ನು ರಸಪಾಕದಲ್ಲಿ ರಸವತ್ತಾಗಿ ತಿಳಿಸಿದ್ದಾರೆ.
“ಹಾಗೆ ಸುಮ್ಮನೆ” ವಿಭಾಗದ ಹಲವು ವಿದ್ಯಾರ್ಥಿಗಳು ಒಡಪು, ಒಗಟು, ಜೋಕ್ಸ್ ಹಾಗೂ ಸುಭಾಷಿತ ಸಂಗ್ರಹಗಳು ವಾಚಕರ ಬೇಸರಿಕೆಯನ್ನು ಹೋಗಲಾಡಿಸಿ ಮನ ಉಲ್ಲಾಸಗೊಳಿಸುತ್ತವೆ. ಒಂದು ಕ್ಷಣ ನಮ್ಮನ್ನು ಅಂತರ್ಮುಖಿಗಳನ್ನಾಗಿ ಮಾಡುತ್ತವೆ. ಮಾತ್ರವಲ್ಲದೇ ನಗೆಹನಿಗಳು ಒಂದೇ ಕ್ಷಣ ನಗೆಗಡಲಲ್ಲಿ ನಮ್ಮನ್ನು ತೇಲಿಸುವಂತೆ ಮಾಡುತ್ತವೆ. ಇಲ್ಲಿ ಸಂಗ್ರಹಿಸಿರುವ ಒಡಪು ಒಗಟುಗಳು ನಮ್ಮ ಜನಪದ ಸಾಹಿತ್ಯ ಎಷ್ಟು ಶ್ರೀಮಂತ ಇದೆ ಅದರಲ್ಲಿ ಹುದುಗಿಕೊಂಡ ನೈತಿಕ ಮೌಲ್ಯಗಳ ಬಗ್ಗೆ ಚೆನ್ನಾಗಿ ಮಾರ್ಮಿಕವಾಗಿ ತಿಳಿಸುತ್ತವೆ.

ವಿಶಿಷ್ಟ ವಿನೂತನ ವಿಷಯ ವಸ್ತು ವಿಶೇಷಗಳಿಂದ ನಮ್ಮ ಜೀವನದ ರಸಾತ್ಮಕ ಸಂಗತಿಗಳನ್ನು ಕಣ್ಣಿಗೆ ಕಟ್ಟಿ ಅತ್ಯಂತ ವಿದ್ಯಾರ್ಥಿಗಳ ವಿಶೇಷ ಚತುರತೆಯಿಂದ ಪ್ರೊ.ರಾಧಾ ಎಂ.ಎನ್ ಅವರ ಅತ್ಯಾಕರ್ಷಕ ವಿನ್ಯಾಸದಲ್ಲಿ ಹೆಣೆದುಕೊಂಡ ಮೂಡಲ ತೋರಣ ನಿಜಕ್ಕೂ ವೈವಿಧ್ಯತೆಯ ಹೂರಣವಾಗಿದೆ!.

ಹೀಗೆ ಹಲವು ಬಗೆಯಿಂದ ಈ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇಲ್ಲಿನ ಗುರುಗಳ ಸಮರ್ಥ ಮಾರ್ಗದರ್ಶನ ಪಡೆದು ತಮ್ಮ ಶೈಕ್ಷಣಿಕ ಜೀವನದಲ್ಲಿ ಅಕ್ಷರ ಸಂಸ್ಕೃತಿಯನ್ನು ತಮ್ಮ ಬದುಕಿನಲ್ಲಿ ಒಂದು ಒಳ್ಳೆಯ ಪ್ರವೃತ್ತಿಯನ್ನಾಗಿ ಮಾಡಿಕೊಂಡರೆ ಅಧ್ಯಾಪಕರ ಶ್ರಮ ಸಾರ್ಥಕವಾದೀತು. “ಮೂಡಲ ತೋರಣ” ಮೂಲಕ ಈ ಜ್ಞಾನ ದೇಗುಲಕ್ಕೆ ಇಲ್ಲಿನ ಮಹಾವಿದ್ಯಾಲಯಯದ ಕನ್ನಡಮ್ಮನ ಹೆಮ್ಮೆಯ ಸುಪುತ್ರರಾದ ವಿದ್ಯಾರ್ಥಿಗಳು ನಿಜಕ್ಕೂ ಅಕ್ಷರತೋರಣ ಕಟ್ಟಿ ಸಿಂಗರಿಸಿದ್ದು ವಿಶೇಷ.

*ಲೇಖನ: ಡಾ.ಜಯವೀರ ಎ.ಕೆ*.
【ಕನ್ನಡ ಪ್ರಾಧ್ಯಾಪಕರು】

Leave a Comment

Your email address will not be published. Required fields are marked *

error: Content is protected !!