ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯಕ್ಕೆ ಗುರುವಾರ ಮತ್ತು ಶುಕ್ರವಾರದಂದು ನ್ಯಾಕ್ ಪೀರ್ ಟೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿತು. ನ್ಯಾಕ್ ಟೀಮ್ ನ ಅಧ್ಯಕ್ಷರಾಗಿ ಒಡಿಸ್ಸಾದಿಂದ ಡಾ. ಪ್ರವೀಣ ಕರ್, ಸಂಯೋಜಕ ಸದಸ್ಯರಾಗಿ ಉತ್ತರ ಖಂಡದದಿಂದ ಡಾ. ಸುಭಾಷ್ ಚಂದ್ರ ಭಟ್, ಸದಸ್ಯರಾಗಿ ಮಹಾರಾಷ್ಟ್ರ ದಿಂದ ಡಾ. ಅಶೋಕ ವಂಜನಿ ಆಗಮಿಸಿದರು. ಕಾಲೇಜಿನ ಐದು ವರ್ಷಗಳ ಸಮಗ್ರ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿದರು.
ತಂಡದ ಸದಸ್ಯರಿಗೆ ಕಾಲೇಜಿನ ಸಭಾಂಗಣದಲ್ಲಿ ಪವರ್ ಪಾಯಿಂಟ್ ಮೂಲಕ ವಿವರಣೆ ನೀಡಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್. ತೇರದಾಳ ಅವರು ಕಾಲೇಜು ನಡೆದು ಬಂದ ದಾರಿ, ಕಳೆದ 5 ವರ್ಷಗಳಲ್ಲಿ ಆಗಿರುವ ಪ್ರಗತಿ, ಕಾಲೇಜಿನ ಅಭಿವೃದ್ಧಿಗಾಗಿ ಮುಂದಿನ ಯೋಜನೆಗಳ ಕುರಿತು ವಿವರಿಸಿದರು. ವಿದ್ಯಾರ್ಥಿಗಳಿಗೆ ನೀಡುತ್ತಿರುವ ನಾನಾ ಸೌಲಭ್ಯಗಳು, ಡಿಜಿಟಲ್ ಲೈಬ್ರರಿ, ಗ್ರೀನ್ ಲೈಬ್ರರಿ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ನ್ಯಾಕ್ ಸಂಯೋಜಕರಾದ ಡಾ. ಮುಕುಂದ ಮುಂಡರಗಿ ಸೇರಿದಂತೆ ಮಹಾವಿದ್ಯಾಲಯದ 7 ವಿಭಾಗಗಳ ಮುಖ್ಯಸ್ಥರು ತಮ್ಮ ವಿಭಾಗದ ಕುರಿತು ಕೈಗೊಂಡಿರುವ ಸುಧಾರಣ ಕ್ರಮಗಳು ಕಾರ್ಯವೈಖರಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
ಕಾಲೇಜಿನ ಆಡಳಿತ ವ್ಯವಸ್ಥೆಯನ್ನು ಕುರಿತು ಚರ್ಚಿಸಿದ ತಂಡ ಪ್ರತಿಯೊಂದು ವಿಭಾಗಕ್ಕೂ ಭೇಟಿ ನೀಡಿ ಪರಿಶೀಲಿಸಿಲನೆ ನಡೆಸಿತು. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮತ್ತು ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರೊಂದಿಗೆ ಕಾಲೇಜಿನ ಅಭಿವೃದ್ಧಿಯ ಕುರಿತು ಚರ್ಚಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯ್ ಎಫ್. ನಾಗಣ್ಣವರ್, ಕುಲಸಚಿವರಾದ ರಾಜಶ್ರೀ ಜೈನಾಪುರ, ಮೌಲ್ಯ ಮಾಪನ ಕುಲಸಚಿವರಾದ ರವೀಂದ್ರನಾಥ ಕದಮ್, ಹಣಕಾಸು ಅಧಿಕಾರಿಗಳಾದ ಭರತ್ ಕಟ್ಟಿ ಉಪಕುಲಸಚಿವರಾದ ಡಾ. ಡಿ. ಕೆ. ಕಾಂಬಳೆ ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು, ಹಾಗೂ ವಿಶ್ವ ವಿದ್ಯಾಲಯ ಮತ್ತು ಸಂಗೊಳ್ಳಿರಾಯಣ್ಣ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.