ಮುಗಳಖೋಡ ಪದವಿ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ.
ವರದಿ: ಸಂಗಮೇಶ ಹಿರೇಮಠ.
ರಾಯಬಾಗ.ಮುಗಳಖೋಡ: ದೇಶ ಕಟ್ಟಲು ಯುವಕರನ್ನು ಬಡಿದೆಬ್ಬಿಸಿ ಅವರಲ್ಲಿ ಶಾಶ್ವತ ಯೋಜನೆಗಳನ್ನು ಹಾಕಿಕೊಟ್ಟ ಈ ದೇಶಕಂಡ ಅಪರೂಪದ ಸಂತ ಸ್ವಾಮಿ ವಿವೇಕಾನಂದರು. ಅವರಂತೆ ಸ್ವದೇಶದ ಸಂಸ್ಕೃತಿ ಸಂಸ್ಕಾರಯುತ ಮೌಲ್ಯಗಳನ್ನು ಬೆಳೆಸಿಕೊಂಡು ವಿದೇಶದಲ್ಲಿಯೂ ಪ್ರಸಿದ್ದಿ ಪಡೆಯಬೇಕಾದರೆ ಅದು ಕೇವಲ ಭಾರತದೇಶದಲ್ಲಿ ಹುಟ್ಟಿದ ಪ್ರಜೆಗಳಿಂದ ಮಾತ್ರ ಸಾಧ್ಯ ಎಂದು ಯರಗಟ್ಟಿಯ ಎಸ್.ಬಿ.ದೇಸಾಯಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪಿ.ಸಿ.ಹಡಗಿನಾಳ ಹೇಳಿದರು.
ಅವರು ಮುಗಳಖೋಡ ಪಟ್ಟಣದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿ ವಿವೇಕಾನಂದರು ಯಾವ ದೇಶಕ್ಕೆ ಹೋದರು ತಮ್ಮ ತಾಯಿ ತಂದೆ ಹಾಗೂ ಭಾರತೀಯ ಜನರು ನೀಡಿರುವ ಸಂಸ್ಕೃತಿಯನ್ನು ಮರೆಯುತ್ತಿರಲಿಲ್ಲ. ಎಲ್ಲೇ ತೆರಳಿದರು ಅಲ್ಲಿಯ ಒಂದು ಹೊಸ ವಿಚಾರವನ್ನು ಅಳವಡಿಸಿಕೊಂಡು ಬರುವುದು ಸ್ವಾಮೀಜಿಯವರ ಹವ್ಯಾಸವಾಗಿತ್ತು. ಅವರಂತೆ ಎಲ್ಲಾ ಆಚಾರ ವಿಚಾರ ಮತ್ತು ಮೌಲ್ಯಗಳ ಜೊತೆಗೆ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ನಡೆಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ಕಾರ್ಯಕ್ರಮದ ಮುಖ್ಯ ಅತಿಥಿಸ್ಥಾನ ಹಂಚಿಕೊಂಡ ರೆಡ್ ಕ್ರಾಸ ಘಟಕದ ಸಂಯೋಜಕ ಪ್ರದೀಪ ನಾಯಿಕ ಮಾತನಾಡಿ ಸ್ವಾಮಿ ವಿವೇಕಾನಂದರ ಜೀವನಶೈಲಿ, ಅವರ ನಡತೆ ಹಾಗೂ ಯುವಕರಿಗೆ ಹಾಕಿಕೊಟ್ಟ ಮಾರ್ಗಸೂಚಿಗಳನ್ನು ನೆನಪಿಸಿದರು.
ಕಾರ್ಯಕ್ರಮದ ಅಧ್ಯಕ್ಷಸ್ಥಾನ ವಹಿಸಿಕೊಂಡ ಪ್ರಾಚಾರ್ಯ ಪ್ರೊ.ಪಿ.ಸಿ.ಕಂಬಾರ ಮಾತನಾಡಿ ಕೇವಲ ಜನೇವರಿ 12 ಕ್ಕೆ ಮಾತ್ರ ವಿವೇಕಾನಂದರ ಗುಣಗಳನ್ನು ನೆನಪಿಸದೇ ನಮ್ಮ ಜೀವನದುದ್ದಕ್ಕೂ ಅವರ ತತ್ವಗಳನ್ನು ಅನುಸರಿಸಿದರೆ ಮಾತ್ರ ಅವರು ಕಂಡ ಕನಸು ನನಸಾಗುವುದು ಎಂದು ಯುವಕರನ್ನು ಎಚ್ಚರಿಸುತ್ತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪದವಿ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ವಿವೇಕಾನಂದರ ಕುರಿತು ಮಾತನಾಡಿದರು.
ಕಾರ್ಯಕ್ರಮವನ್ನು ಸಹನಾ ಕಾಡಶಟ್ಟಿ ನಿರೂಪಿಸಿ, ಮಾಲಾಶ್ರೀ ಯಡವಣ್ಣವರ ಪ್ರಾರ್ಥಿಸಿ, ಸ್ವಾಗತಿಸಿ, ಅಮೃತಾ ಬಾಬಣ್ಣವರ ವಂದಿಸಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ.ಆರ್. ಎಸ್.ಶೇಗುಣಸಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಶ್ರೀ ಸಂಗಮೇಶ ಅ. ಹಿರೇಮಠ, ಡಾ.ಪಿ.ಬಿ. ಕೊರವಿ, ಬಿ.ಎಸ್. ಸವಸುದ್ದಿ, ಗ್ರಂಥಪಾಲಕ ಸಂಗಣ್ಣ ತೇಲಿ, ಎಚ್.ಎಂ.ಕಂಕಣವಾಡಿ, ಜಿ.ಎಸ್. ಜಂಬಗಿ, ಕುಮಾರಿ ಆರ್.ಎಂ. ಖೇತಗೌಡರ, ಪ್ರಥಮ ದರ್ಜೆ ಸಹಾಯಕ ಹುಸೇನ್ ಯಲಿಗಾರ, ಬಸವರಾಜ್ ಸಣ್ಣಕ್ಕಿನವರ, ಗಂಗವ್ವಾ ನಡುವಿನಕೇರಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.