– ಎಸ್.ಎಂ.ಎಕ್ಸ್ – ಸಿಎಸ್ಆರ್ ಲೀಡರ್ಶಿಪ್ ಶೃಂಗಸಭೆಯಲ್ಲಿ 3.0 ರಲ್ಲಿ ರವಿಶಂಕರ್ ಗುರೂಜಿ ಅವರಿಂದ ಪ್ರಶಸ್ತಿ ಪ್ರಧಾನ
ಬೆಂಗಳೂರು, ; ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ನಲ್ಲಿ ನಡೆದ ಎಸ್.ಎಂ.ಎಕ್ಸ್ ಸಿಎಸ್ಆರ್ ಲೀಡರ್ಶಿಪ್ ಶೃಂಗಸಭೆ 3.0 ರಲ್ಲಿ ತಾರೆ ಜಮೀನ್ ಪರ್ನ ಪ್ರಮುಖ ಯೋಜನೆಯಾದ ಸಿನೊಪ್ಸಿಸ್ ಇಂಡಿಯಾದಿಂದ ಬೆಂಬಲಿತವಾಗಿರುವ ‘ಕುತೂಹಲ ಕಿಡಿ’ “ದಶಕದ ಅತ್ಯುತ್ತಮ ಸಿಎಸ್ಆರ್ ಪರಿಣಾಮ ಬೀರುವ ಯೋಜನೆ” ಎಂಬ ಪ್ರಶಸ್ತಿಗೆ ಭಾಜವಾಗಿದೆ.
ಸಿನೊಪ್ಸಿಸ್ ಇಂಡಿಯಾ ಸಂಸ್ಥೆಯ ಹಿರಿಯ ಆರ್ಕಿಟೆಕ್ಟ್ ಬಿ.ಯು. ಚಂದ್ರಶೇಖರ್, ತಾರೇ ಜಮೀನ್ ಪರ್ ಸಂಸ್ಥೆಯ ಸಂಸ್ಥಾಪಕ ದಿನೇಶ ಬಾಡಗಂಡಿ, ಸಂಸ್ಥೆಯ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾದ ಅಭಿಜಿತ ಚೌಧರಿ 200ಕ್ಕೂ ಹೆಚ್ಚು ಸಿ ಎಸ್ ಆರ್ ಕಂಪನಿಗಳ ಸಮ್ಮುಖದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
“ಸಾರೆ ತಾರೆ ಜಮೀನ್ ಪರ್ ಟ್ರಸ್ಟ್”, ಸಿನೊಪ್ಸಿಸ್ ಸಹಯೋಗದೊಂದಿಗೆ, ವಿಶೇಷವಾಗಿ ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮೂಲೆ ಮೂಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಖಗೋಳಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಗಣಿತಶಾಸ್ತ್ರದ ಬಗ್ಗೆ ಕುತೂಹಲದ ಕಿಡಿ ಹೊತ್ತಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ತಾರೆ ಜಮೀನ್ ಪರ್ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ ಬಾಡಗಂಡಿ ಅವರ ಈ ಕಾರ್ಯಕ್ರಮದಿಂದ ಗದಗ ಜಿಲ್ಲೆಯ 15 ಗ್ರಾಮೀಣ ಸರಕಾರಿ ಶಾಲೆಗಳಲ್ಲಿ ಅಳಿಸಲಾಗದ ಛಾಪು ಮೂಡಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ದಿನೇಶ ಬಾಡಗಂಡಿ ಅವರು, ಭಾರತಾದ್ಯಂತ ಒಟ್ಟು 23 ಲಕ್ಷ ವಿದ್ಯಾರ್ಥಿಗಳು ತಾರೆ ಜಮೀನ್ ಪರ್ ಸಂಚಾರಿ ತಾರಾಲಯ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. “ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವುದು ನಮ್ಮ ಕಾರ್ಯಕ್ರಮದ ಉದ್ದೇಶ. ನಾವು ಕೇವಲ ನಮ್ಮ ಗುರಿಗಳನ್ನು ತಲುಪಿಲ್ಲ ನಮ್ಮ ಗುರಿಗಳನ್ನು ಮೀರಿ ವಿದ್ಯಾರ್ಥಿಗಳಲ್ಲಿ ಪರಿವರ್ತನೆ ತಂದಿದ್ದು, ವಿದ್ಯಾರ್ಥಿಗಳ ಪ್ರತಿಕ್ರಿಯೆ ಅಗಾಧವಾಗಿದೆ. ಖಗೋಳಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಗಣಿತಶಾಸ್ತ್ರದಲ್ಲಿ ಅವರ ಹೊಸ ಆಸಕ್ತಿ ಅನಾವರಣಗೊಂಡಿದೆ ಎಂದಿದ್ದಾರೆ.
ಈ ಉಪಕ್ರಮವು ಕೇವಲ ಕುತೂಹಲವನ್ನು ಹುಟ್ಟು ಹಾಕುವುದರ ಜೊತೆಗೆ; ಇದು ಕಲಿಕೆಯ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಗದಗ ಜಿಲ್ಲೆಯ ಈ 15 ಶಾಲೆಗಳಲ್ಲಿ ಶೈಕ್ಷಣಿಕ ಸನ್ನಿವೇಶವನ್ನೇ ಬದಲಿಸಿದೆ. ಕಳೆದ ಮೂರು ವರ್ಷಗಳಿಂದ ಒಟ್ಟಾರೆ ದಕ್ಷಿಣ ಮತ್ತು ಉತ್ತರ ಕರ್ನಾಟಕದ ಸುಮಾರು 10,000 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದ್ದಾರೆ ಎಂದರು.
ತಾರೇ ಜಮೀನ್ ಪರ್ ಟ್ರಸ್ಟ್ ನ ಕಾರ್ಯಾಚರಣೆ ಮುಖ್ಯಸ್ಥ ಅಭಿಜಿತ ಚೌಧರಿ ಮಾತನಾಡಿ, ನಮ್ಮ “ಕುತೂಹಲದ ಕಿಡಿ ಯೋಜನೆಯು ವಿಜ್ಞಾನ ಕಲಿಕೆ ಬಗ್ಗೆ ಆಸಕ್ತಿ ಮೂಡಿಸುವ ಜೊತೆಗೆ ಯುವ ಮನಸ್ಸುಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ. ಸಂಚಾರಿ ತಾರಾಲಯ ಪ್ರದರ್ಶನ, ವಿಜ್ಞಾನಿಗಳೊಂದಿಗೆ ಸಂವಾದ, ಗೋಷ್ಠಿಗಳು, ವಿಜ್ಞಾನ ಮೇಳ ಮತ್ತು ‘ಕೌನ್ ಬನೇಗಾ ಸೌ ಪತಿ’ ರಸಪ್ರಶ್ನೆ ಕಲಿಕೆಯನ್ನು ಸಂತೋಷಕರ ಅನುಭವಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ.” ಈ ಯೋಜನೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿ ವಿಜ್ಞಾನದ ಕಿಟ್ ಗಳಿಗೆ ನೀಡಲಾಗಿದೆ. ಶಾಲಾ ಸಮಯದ ಅವಧಿ ಮೀರಿ ಕಲಿಕೆಯನ್ನು ಮುಂದುವರಿಸಲು ಇದು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
ಸಿನೊಪ್ಸಿಸ್ ಇಂಡಿಯಾದ ಹಿರಿಯ ಆರ್ಕಿಟೆಕ್ಟ್ ಬಿ.ಯು. ಚಂದ್ರಶೇಖರ್ ಮಾತನಾಡಿ, ಈ ಯೋಜನೆಯಿಂದಾಗಿ ಪ್ರತಿ ವಿದ್ಯಾರ್ಥಿಯು ತನ್ನ ಮುಂದಿನ ವೃತ್ತಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ನಿರ್ಧಾರ ಕೈಗೊಳ್ಳಲು ಸಹಾಯ ಮಾಡುತ್ತದೆ. “ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂತೋಷದಿಂದ ಕಲಿಯುವುದನ್ನು ನೋಡುವುದು ತೃಪ್ತಿಕರವಾಗಿದೆ. ಈ ಕಾರ್ಯಕ್ರಮದಿಂದ ಪೋಷಕರ ಒತ್ತಡಕ್ಕೆ ಮಣಿಯುವ ಬದಲು ಉತ್ಸಾಹದ ಆಧಾರದ ಮೇಲೆ ತಮ್ಮ ಭವಿಷ್ಯದ ವೃತ್ತಿ ಜೀವನ ಆಯ್ಕೆಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
ಇಸ್ರೋದ ಮಾಜಿ ಅಧ್ಯಕ್ಷ ಕಿರಣ್ಕುಮಾರ್ ಅವರು ನಮ್ಮ ಚಟುವಟಿಕೆಗೆ ದೂರದೃಷ್ಟಿಯ ಶಕ್ತಿಯಾಗಿದ್ದಾರೆ. ಗದಗದಲ್ಲಿನ ಯಶಸ್ಸಿನ ನಂತರ ಮುಂಬರುವ ತಿಂಗಳುಗಳಲ್ಲಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ನಮ್ಮ ಯೋಜನೆಯನ್ನು ವಿಸ್ತರಿಸಲು ಉದ್ದೇಶಿಸಿದ್ದೇವೆ ” ಎಂದು ದಿನೇಶ ಬಾಡಗಂಡಿ ತಿಳಿಸಿದ್ದಾರೆ.
“ಈ ಪ್ರಶಸ್ತಿಯಿಂದ ನಮ್ಮ ಕಾರ್ಯ ಇನ್ನಷ್ಟು ವಿಸ್ತರಿಸಲು ಅನುವಾಗಲಿದೆ. ಇನ್ನು ಹೆಚ್ಚಿನ ಗ್ರಾಮೀಣ ಶಾಲೆಗಳನ್ನು ತಲುಪಲು ನಮ್ಮನ್ನು ಪ್ರೇರೇಪಿಸಿದೆ. ಸಿನೊಪ್ಸಿಸ್ ಅಂತಹ ಕಂಪನಿಗಳಿಂದ ಸಿ ಎಸ್ ಆರ್ ಅನುದಾನದ ಅಡಿಯಲ್ಲಿ ನಾವು ನಿರಂತರ ಬೆಂಬಲವನ್ನು ಪಡೆದರೆ, ತಾರೆ ಜಮೀನ್ ಪರ್ ಈ ಕಾರ್ಯಕ್ರಮವನ್ನು ಉತ್ತರ ಕರ್ನಾಟಕದ ಹೆಚ್ಚಿನ ಶಾಲೆಗಳಿಗೆ ವಿಸ್ತರಿಸಲು ಸಾಧ್ಯವಿದೆ ಎಂದು ದಿನೇಶ ಬಾಡಗಂಡಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು”