ಬೆಳಗಾವಿ. ರಾಯಬಾಗ
ಕುಡಚಿ ಕ್ಷೇತ್ರಕ್ಕೆ ಹೊಸ ಅನುದಾನಗಳನ್ನು ತರಲಾಗದೆ ನಾನು ಶಾಸಕನಿದ್ದ ಅವಧಿಯಲ್ಲಿ ತಂದ ಅನುದಾನದಲ್ಲಿಯೇ ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರವರು ಕಾಮಗಾರಿಗಳ ಗುದ್ದಲಿ ಪೂಜೆ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪಿ ರಾಜೀವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಟ್ಟಣ ಸಮೀಪದ ಅಲಕನೂರ ಬೀರಪ್ಪನ ಮಡ್ಡಿಯಲ್ಲಿರುವ ಕುಡಚಿ ಮಾಜಿ ಶಾಸಕ ಪಿ ರಾಜೀವ ಅವರ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಪುರಸಭೆ ವಾರ್ಡ್ ನಂ 3ರಲ್ಲಿ ಸೊಳ್ಳೆಗಳನ್ನ ಕಚ್ಚಿಸಿಕೊಂಡು ನರಕಯಾತನೇ ಅನುಭವಿಸುವ ಪುಟ್ಟ ಪುಟ್ಟ ಮಕ್ಕಳು, ಮಹಿಳೆಯರ ಮತ್ತು ಅಲ್ಲಿ ವಾಸಿಸುವ ಎಲ್ಲ ಜನರ ಗೋಳು ನೋಡಲಾಗದೆ ಚರಂಡಿ ನಿರ್ಮಾಣ ಮಾಡಲು ಎಸ್ ಎಫ್ ಸಿ ವಿಶೇಷ ಅನುದಾನದಲ್ಲಿ 12ಕೋಟಿ ಹಾಗೂ ಹಾರೂಗೇರಿ ಕೆರೆಯ ಅಭಿವೃದ್ಧಿಗಾಗಿ 5.5ಕೋಟಿ ರೂಗಳನ್ನು ಮಂಜೂರು ಮಾಡಿಸಿ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿತ್ತು ಆದರೆ ಈಗಿನ ಶಾಸಕರಾದ ಮಹೇಂದ್ರ ತಮ್ಮಣ್ಣವರವರು ಟೆಂಡರ್ ಹಂತಕ್ಕೆ ಬಂದಿರುವ ಮಂಜೂರಾದ ಹಣವನ್ನು ಬೇರೆ ಕಾಮಗಾರಿಗಳಿಗೆ ವಿನಿಯೋಗಿಸುತ್ತಿರುವುದು ಅಲ್ಲಿ ವಾಸಿಸುವ ಜನರಿಗೆ ದೊಡ್ಡ ಅನ್ಯಾಯ ಮಾಡಿದಂತಾಗಿದೆ.
ಬಿರು ಬೇಸಿಗೆ ಬಿಸಿಲಿನ ತಾಪಕ್ಕೆ ಜಲಮೂಲಗಳು ಬತ್ತಿ ಹೋಗಿದ್ದುನೀರಿನ ಆಹಾಕಾರವೆದ್ದಿದ್ದು ಶಾಸಕರು ಶೀಘ್ರವಾಗಿ ಘಟಪ್ರಭಾ ಎಡದಂಡೆ ಕಾಲುವೆಯ ಮೂಲಕ ನೀರು ಹರಿಸಿ ಕೆರೆಗಳನ್ನ ತುಂಬಿಸುವ ಮೂಲಕ ಕುಡಿಯುವ ನೀರಿನ ಬೇಗೆಯನ್ನ ತಣಿಸಿ ಕ್ಷೇತ್ರದ ಜನರಿಗೆ ಅನುಕೂಲ ಮಾಡುವುದರ ಜೊತೆಗೆ ಪ್ರತಿ ಗ್ರಾಮಗಳಲ್ಲಿ ಗೋ ಶಾಲೆಯನ್ನು ತೆರೆಯಬೇಕೆಂದು ಮನವಿ ಮಾಡಿದರು.
ಟ್ಯಾಂಕರ್ ಗಳಿಂದ ಕುಡಿಯುವ ನೀರು ಪೂರೈಸದೆ ಬಿಲ್ಲ ಹಣವನ್ನ ತೆಗೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ, ಬರಗಾಲದ ಕುಡಿಯುವ ನೀರಿನಲ್ಲೂ ಭ್ರಷ್ಟಾಚಾರ ಮಾಡಲು ಬಿಟ್ಟಿದ್ದೀರಾ? ಅಧಿಕಾರಿಗಳು 1 ಟ್ರಿಪ್ ನೀರನ್ನು ಪೂರೈಸಿ 5 ಟ್ರಿಪ್ ನ ಬಿಲ್ಲನ್ನು ತೆಗೆದಿದ್ದೀರಿ ಯಾಕೆ ಎಂದು ಶಾಸಕರು ಪ್ರಶ್ನೆ ಮಾಡಬೇಕು.
ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ಧಿಗೋಸ್ಕರ ಮೀಸಲಿರಿಸಿದ ಸುಮಾರು ಎರಡು ವರ್ಷದಲ್ಲಿ 24 ಸಾವಿರ ಕೋಟಿ ರೂಪಾಯಿಗಳನ್ನು ಡೈವರ್ಟ್ ಮಾಡಿ ತಮ್ಮ ಗ್ಯಾರಂಟಿಗಳಿಗೆ ಮತ್ತು ಇನ್ನಿತರೆ ಇಲಾಖೆಯ ಕೆಲಸಗಳಿಗೆ ವಿನಿಯೋಗಿಸುತ್ತಿರುವುದು ದಲಿತ ಸಮುದಾಯಗಳಿಗೆ ಮಾಡುತ್ತಿರುವ ಘನ ಘೋರ ಅನ್ಯಾಯವಾಗಿದೆ. ಕುಡಚಿ ಎಸ್ಸಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ದಲಿತರಿಗೆ ಅನ್ಯಾಯವಾಗು ವುದನ್ನು ಗಟ್ಟಿ ಧ್ವನಿಯಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡದೆ ಹಾಗೂ ತಮ್ಮದ ಸರ್ಕಾರದ ಮುಖ್ಯಮಂತ್ರಿಗಳ ಗಮನ ಸೆಳೆಯದೆ ಇರುವುದು ಖೇದಕರ ಸಂಗತಿಯಾಗಿದೆ.
ಕುಡಚಿ ಕ್ಷೇತ್ರದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು (ಸಿವಿಲ್ ಮ್ಯಾಟರ್) ನಾಗರೀಕ ವಿಷಯಗಳಲ್ಲಿ ಮತ್ತು ಅಮಾಯಕರ ವಿರುದ್ಧ ಸುಳ್ಳು ಪ್ರಕರಣಗಳು ದಾಖಲಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಶಾಸಕರು ಎಚ್ಚರ ವಹಿಸಬೇಕು. ತಹಸೀಲ್ದಾರ್ ಕಚೇರಿಯಲ್ಲಿ ದುಡ್ಡು ಕೊಡದೆ ಕೆಲಸಗಳಾಗುತ್ತಿಲ್ಲ ಇವೆಲ್ಲವೂ ನಿಲ್ಲಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆ ಎದುರಿನಲ್ಲಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕುಡಚಿ ಕ್ಷೇತ್ರದ ಮತದಾರರು ತಮ್ಮ ಮೇಲೆ ನಂಬಿಕೆ ಮತ್ತು ವಿಶ್ವಾಸವಿಟ್ಟು ತಮ್ಮಣ್ಣ ಆಯ್ಕೆ ಮಾಡಿದ್ದಾರೆ. ತಾವು ಆಯ್ಕೆಯಾದ ಅವಧಿಯಿಂದ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಹಿಂದೂಳಿದ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದರ ಮೂಲಕ ಅವರ ಆಯ್ಕೆ ಮಾಡಿದ ಋಣ ತೀರಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕುಡಚಿ ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ ಸಿಂಗಾಡಿ ಉಪಸ್ಥಿತರಿದ್ದರು.