ಬೆಳಗಾವಿ: ಜಿಲ್ಲೆಯ ಜವಳಿ ಕ್ಷೇತ್ರದ ನೇಕಾರರು ಉನ್ನತ ತರಬೇತಿ ಪಡೆದು ಕೈಗಾರಿಕೆ ಸ್ಥಾಪನೆ ಹಾಗೂ ಹೆಚ್ಚಿನ ಉದ್ಯೋಗಾವಕಾಶ ಪಡೆಯುವ ಉದ್ದೇಶದಿಂದ ಬೆಳಗಾವಿಯಲ್ಲಿ ವಿದ್ಯುತ್ ಮಗ್ಗ ಸೇವಾ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದು ಜವಳಿ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದರು.
ಬೆಳಗಾವಿಯ ಉದ್ಯಮಭಾಗದಲ್ಲಿ ಬುಧವಾರ ವಿದ್ಯುತ್ ಮಗ್ಗ ಸೇವಾ ಕೇಂದ್ರ ಹಾಗೂ ಕೆಎಸ್ಟಿಐಡಿಸಿಎಲ್ ಆಡಳಿತ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 23,200 ವಿದ್ಯುತ್ ಮಗ್ಗಗಳು, 185 ಏರ್ಜೆಟ್ ಮಗ್ಗಗಳು, 3,900 ರೇಪಿಯರ್ ಮಗ್ಗಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಿಗೆ ವಿದ್ಯುತ್ ಮಗ್ಗ ಸೇವಾ ಕೇಂದ್ರದಿಂದ ಉನ್ನತ ತರಬೇತಿ ನೀಡಿ ಆಧುನೀಕರಣಗೊಳಿಸಲು ಹಾಗೂ ಅಗತ್ಯ ನೂಲು, ಬಣ್ಣ, ಮತ್ತು ಬಟ್ಟೆಯ ಪರೀಕ್ಷೆಗೆ ಅನುಕೂಲವಾಗಲಿದೆ . ಅಷ್ಟೇ ಅಲ್ಲ ಉತ್ತರ ಕರ್ನಾಟಕದ ಇತರ ಜಿಲ್ಲೆಗಳಿಗೂ ಈ ತರಬೇತಿ ಕೇಂದ್ರದಿಂದ ಅನುಕೂಲವಾಗಲಿದೆ ಎಂದರು.
ಕಟ್ಟಡ ನಿರ್ಮಾಣವಾದ ನಂತರ ತರಬೇತಿ ಕೇಂದ್ರದಿಂದ ಉತ್ತರ ಕರ್ನಾಟಕ ಭಾಗದ ನೇಕಾರರು ಉನ್ನತ ಮಟ್ಟದ ತಂತ್ರಜ್ಞಾನದಲ್ಲಿ ನೇಕಾರಿಕೆ ತರಬೇತಿ ಹಾಗೂ ನೂಲು ಮತ್ತು ಬಟ್ಟೆ ಪರಿಶೀಲನೆ ಮಾಡಲು ಬಳಸಿಕೊಳ್ಳಬಹುದು. ತರಬೇತಿ ಕೇಂದ್ರಕ್ಕೆ ಏರ್ಜೆಟ್, ವಾಟರ್ಜೆಟ್ ಮತ್ತು ರೇಪಿಯರ್ ಮಗ್ಗಗಳನ್ನು ಎಲೆಕ್ಟ್ರಾನಿಕ್ ಜಕಾರ್ಡ್ದೊಂದಿಗೆ ಸಲಕರಣೆಗಳನ್ನು ಅಳವಡಿಸಬಹುದಾಗಿದೆ ಎಂದು ವಿವರಿಸಿದರು.
2.21 ಕೋಟಿ ರೂ. ವೆಚ್ಚದ ಈ ಯೋಜನೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಕಾಲಮಿತಿಯಲ್ಲಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಬೆಳಗಾವಿ (ದಕ್ಷಿಣ) ಶಾಸಕ ಅಭಯ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು. ಜವಳಿ ಇಲಾಖೆ ಆಯುಕ್ತೆ ಕೆ. ಜ್ಯೋತಿ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದದ ವ್ಯವಸ್ಥಾಪಕ ನಿರ್ದೇಶಕ ಎಸ್. ಪ್ರಕಾಶ್, ಜವಳಿ ಇಲಾಖೆ ಸಲಹೆಗಾರ ರಮಾನಂದ ಕುಲಕರ್ಣಿ, ಜಂಟಿ ನಿರ್ದೇಶಕ ಶಿವರಾಜ್ ಕುಲಕರ್ಣಿ, ಉಪನಿರ್ದೇಶಕ ವಾಸುದೇವ್ ದೊಡ್ಡಮನಿ, ಎನ್. ರವೀಂದ್ರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.