ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೆಎಸ್‌ಡಿಸಿ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಯುವ ಮುಖಂಡ ರಾಹುಲ್ ನಾಡಗೌಡ (ಚಿನ್ನುಧಣಿ) ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ನಾಡಗೌಡರು ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಭ್ರಷ್ಟಾಚಾರರಹಿತ ರಾಜಕೀಯ ಜೀವನ ನಡೆಸಿದ್ದಾರೆ. ಪಕ್ಷದ ತತ್ವ, ಶುದ್ಧ ರಾಜಕೀಯ, ಹಾಗೂ ಸಾಮಾಜಿಕ ಸೇವೆಯಲ್ಲಿ ಅವರು ಸದಾ ಮುಂಚೂಣಿಯಲ್ಲಿದ್ದಾರೆ,” ಎಂದು ಹೇಳಿದರು.
ಪ್ರಸ್ತುತ ಅವರು ಕೆಎಸ್‌ಡಿಸಿ ನಿಗಮದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಿಗಮದ ಅಭಿವೃದ್ಧಿ ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಪ್ರಶಂಸಿಸಿದರು.
“ಉತ್ತರ ಕರ್ನಾಟಕ ಭಾಗದ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಹಿಂದುಳಿದ ಪ್ರದೇಶವಾಗಿದೆ. ನಾಡಗೌಡರಿಗೆ ಸಚಿವ ಸ್ಥಾನ ನೀಡಿದರೆ ಈ ಭಾಗದ ಮೂಲಸೌಕರ್ಯ, ಕೃಷಿ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಹೊಸ ದಾರಿ ತೆರೆದುಕೊಳ್ಳುತ್ತದೆ,” ಎಂದು ರಾಹುಲ್ ನಾಡಗೌಡ ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಈ ಭಾಗದ ಜನರ ಆಶಯವನ್ನು ಪರಿಗಣಿಸಿ ನಾಡಗೌಡರಿಗೆ ಸಚಿವ ಸ್ಥಾನ ನೀಡಿ ಗೌರವಿಸಬೇಕು ಎಂಬುದು ಸ್ಥಳೀಯ ಜನರ ಒತ್ತಾಸೆಯಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹೋರಾಟಗಾರರು ಹಾಗೂ ಯುವ ನಾಯಕರೂ ಹಾಜರಿದ್ದರು.





