ಮುದ್ದೇಬಿಹಾಳ: ಸುಡುಗಾಡುಸಿದ್ದ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ಅಕ್ಕ, ತಮ್ಮ ಮತ್ತು ಅಳಿಯ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಜಲಸಮಾಧಿಯಾಗಿರುವ ದುರಂತ ಘಟನೆ ಮುದ್ದೇಬಿಹಾಳದ ಮಹೆಬೂಬನಗರ ಬಡಾವಣೆಯಿಂದ ಹೊರಹೋಗುವ ಶಿರೋಳ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಜಲಸಮಾಧಿಯಾದವರನ್ನು ಬಸಮ್ಮ ಚಿನ್ನಪ್ಪ ಕೊಣ್ಣೂರ (20), ಆಕೆಯ ತಮ್ಮ ಸಂತೋಷ ಚಿನ್ನಪ್ಪ ಕೊಣ್ಣೂರ (18), ಮತ್ತು ಅಳಿಯ ರವಿ ಹಣಮಂತ ಕೊಣ್ಣೂರ (17) ಎಂದು ಗುರುತಿಸಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ನಿರಂತರ ಕಾರ್ಯಾಚರಣೆಯ ಫಲವಾಗಿ ಸಂಜೆ ವೇಳೆಗೆ ಸಂತೋಷನ ಶವ ಪತ್ತೆಯಾಗಿದೆ. ಉಳಿದ ಇನ್ನಿಬ್ಬರ ಶವಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಘಟನೆ ವಿವರ;
ಕಾಲುವೆ ದಡದಲ್ಲಿ ಬಟ್ಟೆ ತೊಳೆಯಲು ಬಂದಿದ್ದ ಬಸಮ್ಮ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಅಕ್ಕನನ್ನು ಕಾಪಾಡಲು ಆಕೆಯ ತಮ್ಮ ಸಂತೋಷ ತಕ್ಷಣವೇ ನೀರಿಗೆ ಜಿಗಿದಿದ್ದಾನೆ. ನೀರಿನ ರಭಸಕ್ಕೆ ಇಬ್ಬರೂ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಅಳಿಯ ರವಿ ಕೂಡ ಅವರನ್ನು ರಕ್ಷಿಸಲು ಪ್ರಯತ್ನಿಸಿ ನೀರಿಗಿಳಿದಿದ್ದಾನೆ. ಆದರೆ, ಕಾಲುವೆಯಲ್ಲಿ ನೀರು ಆಳವಾಗಿದ್ದು ಮತ್ತು ರಭಸ ಹೆಚ್ಚಾಗಿದ್ದರಿಂದ ಮೂವರೂ ಮೇಲೆ ಬರಲಾರದೆ ಜಲಸಮಾಧಿಯಾದರು ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಕುಟುಂಬದವರು ತಿಳಿಸಿದ್ದಾರೆ.
ದುರಂತದ ವಿಷಯ ತಿಳಿಯುತ್ತಿದ್ದಂತೆ ಸಿಪಿಐ ಮೆಹಮ್ಮೂದ್ ಫಸಿಯುದ್ದೀನ್, ಪಿಎಸೈ ಸಂಜಯ್ ತಿಪ್ಪರಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶವಗಳ ಶೋಧಕ್ಕೆ ಅನುಕೂಲವಾಗುವಂತೆ ಆಲಮಟ್ಟಿಯ ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಲುವೆಯಲ್ಲಿ ನೀರಿನ ಹರಿವನ್ನು ಸ್ಥಗಿತಗೊಳಿಸಲು ಸೂಚಿಸಲಾಯಿತು. ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಬಸವರಾಜ ಬಿರಾದಾರ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನಾ ಸ್ಥಳದಲ್ಲಿ ಕುಟುಂಬಸ್ಥರು, ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಸುತ್ತಮುತ್ತಲಿನ ಸಾವಿರಾರು ಜನರು ಸ್ಥಳಕ್ಕೆ ಆಗಮಿಸಿದ್ದರು. ಜನರನ್ನು ಚದುರಿಸಿ ಶವ ಪತ್ತೆ ಕಾರ್ಯಾಚರಣೆ ಸುಗಮವಾಗಿ ನಡೆಯಲು ಪೊಲೀಸರು ನೆರವಾದರು. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡಹಳ್ಳಿಯವರಿಂದ ಸಾಂತ್ವನ ಹಾಗೂ ₹1 ಲಕ್ಷ ಆರ್ಥಿಕ ನೆರವು
ದುರಂತದ ವಿಷಯ ತಿಳಿದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿಯವರು ಸ್ಥಳಕ್ಕೆ ದಾವಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಬಡ ಮತ್ತು ಅಲೆಮಾರಿ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ಆರ್ಥಿಕ ನೆರವು ಒದಗಿಸುವುದಾಗಿ ಅವರು ಸ್ಥಳದಲ್ಲೇ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ನಡಹಳ್ಳಿ, ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುವಂತೆ ಮನವಿ ಮಾಡುವುದಾಗಿ ಭರವಸೆ ನೀಡಿದರು. ಕಡುಬಡತನದಲ್ಲಿರುವ ಈ ಕುಟುಂಬಕ್ಕೆ ಜಿಲ್ಲಾಡಳಿತ, ತಾಲೂಕಾಡಳಿತ ಕೂಡಲೇ ನೆರವಿಗೆ ಧಾವಿಸಬೇಕು ಮತ್ತು ಸ್ಥಳೀಯ ಶಾಸಕರು ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
“ನಾನು ಶಾಸಕನಾಗಿದ್ದಾಗ ಇದೇ ಕಾಲುವೆಯ ಹಡಲಗೇರಿ ರಸ್ತೆಯ ಸರ್ಕಾರಿ ಆಸ್ಪತ್ರೆ ಹತ್ತಿರ ತಡೆಗೋಡೆ ನಿರ್ಮಿಸಿದ್ದೆ. ಶಿರೋಳ ರಸ್ತೆಯಲ್ಲಿರುವ ಈ ಸೂಕ್ಷ್ಮ ಭಾಗದ ಕಾಲುವೆಗೂ ಶಾಸಕರು ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ಸೂಚಿಸಿ ತಡೆಗೋಡೆ ನಿರ್ಮಿಸಿ ಮಾನವ ಪ್ರಾಣಹಾನಿ ತಡೆಗಟ್ಟಲು ಕಾಳಜಿ ವಹಿಸಬೇಕು.”
ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ತಡೆಗೋಡೆ ಸೇರಿದಂತೆ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಕೊಳ್ಳಲು ಯೋಜನೆ ರೂಪಿಸಬೇಕು; ಎ.ಎಸ್ ಪಾಟೀಲ್ ನಡಹಳ್ಳಿ
ದುಃಖಾಂತ್ಯದಲ್ಲಿ ಪ್ರೇಮ;
ಜಲಸಮಾಧಿಯಾದ ಬಸಮ್ಮ ಪದವೀಧರೆಯಾಗಿದ್ದು, ಕಳೆದ ಎರಡು ವರ್ಷಗಳಿಂದ ಸುರೇಶ ಚಿನ್ನಣ್ಣ ಮುಗ್ಗೋಳ ಎಂಬುವವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗುವುದಾಗಿ ಒಪ್ಪಿಗೆ ಪತ್ರ ಬರೆದು ಕೊಟ್ಟಿದ್ದರು. ಮುಂಬರುವ ಕಾರ್ತಿಕ ಮಾಸದಲ್ಲಿ ಇವರಿಬ್ಬರ ಮದುವೆ ನಡೆಸಲು ಹಿರಿಯರು ನಿಶ್ಚಯಿಸಿದ್ದರು. ಮದುವೆ ಸಿದ್ಧತೆಯಲ್ಲಿದ್ದ ಕುಟುಂಬದಲ್ಲಿ ಈ ದುರಂತ ಸಂಭವಿಸಿರುವುದು ಎಲ್ಲರ ಮನಕಲಕುವಂತಿದೆ.





