ಡಾ. ಬಾಳಾಸಾಹೇಬ ಲೋಕಾಪುರ ಅಭಿನಂದನೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ

Share the Post Now

ವರದಿ:ರಾಕೇಶ ಮೈಗೂರ

ಅಥಣಿ: ಒಬ್ಬ ಹಿರಿಯ ಸಾಹಿತಿ ಜೀವನದ ಕಹಿ ಸಿಹಿ ಅನುಭವಗಳನ್ನು ಅಕ್ಷರ ರೂಪದಲ್ಲಿ ಕಟ್ಟಿದಾಗ ಅದೊಂದು ಅದ್ಭುತ ಸಾಹಿತ್ಯವಾಗುತ್ತದೆ. ಡಾ. ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿಗಳಲ್ಲಿ ಗ್ರಾಮೀಣ ಜನತೆಯ ಬದುಕಿನ ನೈಜ ಚಿತ್ರಣ ಕಂಡು ಬರುತ್ತವೆ. ಅವರ ಅನೇಕ ಕೃತಿಗಳಲ್ಲಿ ಧನಾತ್ಮಕ ವಿಚಾರಗಳ ಚಿಂತನೆ ಮತ್ತು ಗ್ರಾಮೀಣ ಸೊಗಡು ಅಡಗಿದೆ ಎಂದು ಧಾರವಾಡದ ಖ್ಯಾತ ಕವಿಯತ್ರಿ ಡಾ. ಹೇಮಾ ಪಟ್ಟಣಶೆಟ್ಟಿ ಹೇಳಿದರು.
ಅಥಣಿ ಪಟ್ಟಣದ ಜಾಧವಜಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಖ್ಯಾತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಬಾಳಾಸಾಹೇಬ ಲೋಕಾಪುರ ಅವರ ಅಭಿನಂದನಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಡಾ. ಬಾಳಾಸಾಹೇಬ ಲೋಕಾಪುರ ಸಮಕಾಲಿನ ಉತ್ತಮ ಕಥೆಗಾರರಲ್ಲಿ ಒಬ್ಬರು. ಕಾದಂಬರಿಗಳ ರಚನೆಯ ಮೂಲಕ ಪ್ರಸಿದ್ದಿ ಹೊಂದಿದವರು. ಅವರ ಕಾದಂಬರಿಗಳಲ್ಲಿ ಗ್ರಾಮೀಣ ಬದುಕಿನ ಎಲ್ಲಾ ಆಯಾಮಗಳನ್ನು ಬಿಂಬಿಸಿದ್ದಾರೆ. ಕನ್ನಡ ನಾಡಿನ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡುತ್ತಿರುವ ಲೋಕಾಪುರ ಅವರ ಅಭಿನಂದನಾ ಸಮಾರಂಭ ಅವರು ಕಲಿತ ಶತಮಾನ ಕಂಡ ಶಾಲೆಯಲ್ಲಿ ಜರುಗುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಅನಿಸುತ್ತದೆ . ಅವರ ಸಾಹಿತ್ಯ ಕೃಷಿ ಇನ್ನಷ್ಟು ಮೂಡಿ ಬರಲಿ. ಅವರಿಗೆ ಕನ್ನಡಾಂಬೆ ಇನ್ನಷ್ಟು ಶಕ್ತಿಯನ್ನು ಕರುಣಿಸಲಿ ಎಂದು ಶುಭ ಹಾರೈಸಿದರು.

ಡಾ. ಬಾಳಾಸಾಹೇಬ ಲೋಕಾಪುರ ಅವರ ಬದುಕು ಬರಹ ಕುರಿತು ಅನುಪಮಾ ಪ್ರಕಾಶನ ವತಿಯಿಂದ ಪ್ರಕಟವಾದ ಬಾಳಲೋಕ ಕೃತಿಯ ಕುರಿತು ಬಾಗಲಕೋಟೆಯ ಖ್ಯಾತ ಸಾಹಿತಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಮತ್ತು ಅಭಿನಂದನಾಪರ ನುಡಿಗಳನ್ನು ಖ್ಯಾತ ವಿಮರ್ಶಕ ಡಾ. ಗುರುಪಾದ ಮರಿಗುದ್ದಿ ಮಾತನಾಡಿದರು.ಧಾರವಾಡದ ಖ್ಯಾತ ಕವಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಡಾ. ಬಾಳಾಸಾಹೇಬ ಲೋಕಾಪುರ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವ ಹೊಂದುವ ಮೂಲಕ ಎತ್ತರ ಮಟ್ಟಕ್ಕೆ ಬೆಳೆದಿರುವುದು ನಮ್ಮೆಲ್ಲರಿಗೆ ಹೆಮ್ಮೆ. ಜಾದವಜಿ ಶಿಕ್ಷಣ ಸಂಸ್ಥೆ ತಮ್ಮ ಹೆಮ್ಮೆಯ ವಿದ್ಯಾರ್ಥಿಯನ್ನು ಅಭಿನಂದಿಸುತ್ತಿರುವುದು ಅಷ್ಟೇ ಅರ್ಥಪೂರ್ಣವಾಗಿದೆ. ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಶಿಕ್ಷಣ ಸಂಸ್ಥೆಯು ಅನೇಕ ದಿಗ್ಗಜರನ್ನು ರೂಪಿಸಿದ ಕೀರ್ತಿ ಹೊಂದಿದೆ ಎಂದು ಮುಕ್ತ ಕಂಠದಿಂದ ಹೊಗಳಿದ ಅವರು ಸಾಹಿತ್ಯದಲ್ಲಿ ಸಣ್ಣದು, ದೊಡ್ಡದು ಎಂಬ ಭೇದ ಭಾವವಿಲ್ಲ. ಇತ್ತೀಚಿನ ದಿನಗಳಲ್ಲಿ ಸಣ್ಣದು ದೊಡ್ಡದು ಎಂಬ ಶ್ರೇಣಿ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಸಮಾಜದಲ್ಲಿ ಸಮಾನತೆಯ ಮತ್ತು ಹೊಂದಾಣಿಕೆಯ ಜೀವನ ಕ್ರಮ ಬಹಳ ಮುಖ್ಯ.ಡಾ. ಲೋಕಾಪುರ ಅವರು ಅನೇಕ ಕಾದಂಬರಿ ಮತ್ತು ಕಥೆಗಳನ್ನ ಚಿತ್ರಿಸಿದ್ದಾರೆ. ಈ ಕಥೆ ಮತ್ತು ಕಾದಂಬರಿಗಳನ್ನು ನಾಟಕ ರೂಪದಲ್ಲಿ ಸಾಹಿತ್ಯವನ್ನು ರಚಿಸುವುದು ಅಗತ್ಯವಿದೆ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿದ ಖ್ಯಾತ ಸಾಹಿತಿ ಡಾ. ಬಾಳಾಸಾಹೇಬ ಲೋಕಪುರ ಮಾತನಾಡಿ ನಾನು ಕಲಿತ ಶಿಕ್ಷಣ ಸಂಸ್ಥೆಯಲ್ಲಿ ಮತ್ತು ನನ್ನ ಹುಟ್ಟೂರಿನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಿರುವುದು ಸಂತಸ ತಂದಿದೆ. ಈ ಕ್ಷಣ ನನ್ನ ಜೀವನದಲ್ಲಿ ಮರೆಯಲಾಗದು. ಜಾದವಜಿ ಶಿಕ್ಷಣ ಸಂಸ್ಥೆ, ಸಾಹಿತ್ಯ ಸಂಸ್ಕೃತಿಕ ಸಂಘ ಮತ್ತು ಅನುಪಮಾ ಪ್ರಕಾಶನ ರವರಿಗೆ, ಎಲ್ಲಾ ಸಾಹಿತ್ಯ ಸತ್ತವರಿಗೆ ಅಭಿನಂದನೆಗಳನ್ನ ಸಲ್ಲಿಸಿದರು.
ಸಮಾರಂಭದಲ್ಲಿ ಜಾದವಜಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ರಾಮ ಬಿ ಕುಲಕರ್ಣಿ, ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಡಾ. ಪ್ರಿಯಂವದಾ ಹುಲಗಬಾಳಿ, ಅನುಪಮಾ ಪ್ರಕಾಶನದ ಡಾ. ಸಿದ್ದಣ್ಣ ಉತ್ನಾಳ, ವಿಮೋಚನ ಸಂಸ್ಥೆಯ ಅಧ್ಯಕ್ಷ ಬಿ. ಎಲ್ ಪಾಟೀಲ, ಸಾಹಿತಿ ಡಾ. ವಿ. ಎಸ್ ಮಾಳಿ, ಡಾ. ಅಶೋಕ ನರೋಡೆ, ಎಸ್. ಕೆ ಹೊಳೆಪ್ಪನವರ, ರೋಹಿಣಿ ಯಾದವಾಡ, ಎ. ಎಂ ಕೊಬ್ಬರಿ, ಐ. ಆರ್ ಮಠಪತಿ, ಪ್ರಕಾಶ ಮಹಾಜನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!