ವರದಿ:ಸಚಿನ ಕಾಂಬ್ಳೆ.
ಅಥಣಿ: ಪಟ್ಟಣದ ಮಹಾವೀರ ವೃತ್ತದಲ್ಲಿ ಜಮಾಯಿಸಿದ ತಾಲೂಕಿನ ಸಾವಿರಾರು ಸಂಖ್ಯೆಯ ಜೈನ ಸಮುದಾಯದವರು ಒಂದುಗೂಡಿ ಶಿಖರ್ಜಿ ಬಚಾವೋ ಪ್ರತಿಭಟನಾ ರ್ಯಾಲಿಯನ್ನು, ಕೊಲ್ಲಾಪುರದ ಸ್ವಸ್ತಿ ಶ್ರೀ ಲಕ್ಷ್ಮೀ ಸೇನ ಭಟ್ಟಾರಕ ಸ್ವಾಮಿಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಜಾರ್ಖಂಡ ಸರಕಾರ ತನ್ನ ಆದೇಶವನ್ನು ಕೂಡಲೇ ಹಿಂಪಡೆದು ಅದೊಂದು ಪವಿತ್ರ ತೀರ್ಥಕ್ಷೇತ್ರವೆಂದು ಸಂರಕ್ಷಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ ಸುರೇಶ ಮುಂಜೆ ಅವರ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಕೊಲ್ಲಾಪುರದ ಸ್ವಸ್ತಿ ಶ್ರೀ ಲಕ್ಷ್ಮೀ ಸೇನ ಸ್ವಾಮಿಜಿಗಳು ಮಾತನಾಡುತ್ತಾ ಈ ಕ್ಷೇತ್ರದಲ್ಲಿ 24 ತೀರ್ಥಂಕರರ ಪೈಕಿ 20 ತೀರ್ಥಂಕರರು ಮೋಕ್ಷವಾದ ಕ್ಷೇತ್ರವಾಗಿದೆ, ಇದಲ್ಲದೆ ಜೈನ ಮುನಿಗಳು ಮೋಕ್ಷಕ್ಕೆ ಹೋದ ಕ್ಷೇತ್ರವಾಗಿದೆ. ಇದನ್ನು ಪ್ರವಾಸಿ ತಾಣ ಮಾಡಬಾರದು ಎಂದು ಒಕ್ಕೋರಲಿನಿಂದ ಜೈನ ಸಮಾಜದ ಸಾವಿರಾರು ಶ್ರಾವಕ, ಶ್ರಾವಕಿಯರು, ಮುಖಂಡರು ಆಗ್ರಹವಾಗಿದೆ
ಜಾರ್ಖಂಡ ಸರಕಾರದ ವಿನಂತಿಯ ಮೇರೆಗೆ ಕೇಂದ್ರ ಸರಕಾರವೂ ಸಹ ಒಂದು ಆದೇಶ ಹೊರಡಿಸಿ ಇದೊಂದು ಪ್ರವಾಸಿ ಕ್ಷೇತ್ರ ಮಾಡಲು ಮುಂದಾಗಿರುವುದು ಖಂಡನೀಯ. ಜೈನ ಸಮಾಜ ಯಾವಾಗಲು ಅಹಿಂಸೆ ಮಾರ್ಗದಲ್ಲಿ ನಡೆಯುವ ಸಮಾಜವಾಗಿದೆ. ಒಂದು ವೇಳೆ ಪ್ರವಾಸಿ ತಾಣವಾದರೆ ಅಲ್ಲಿ ಮದ್ಯ, ಮಾಂಸ ಸೇವನೆ ಮತ್ತು ಇನ್ನಿತರ ಅನೈತಿಕ ಚಟುವಟಿಕೆಗಳು ನಡೆದು ತೀರ್ಥಕ್ಷೇತ್ರದ ಪಾವಿತ್ರ್ಯತೆ ಹಾಳಾಗಲಿದೆ. ಹಾಗಾಗಿ ಜಾರ್ಖಂಡ ಸರಕಾರ ಮತ್ತು ಕೇಂದ್ರ ಸರಕಾರ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣ ಮಾಡುವ ಯೋಜನೆಯನ್ನು ಕೈಬಿಟ್ಟು ತೀರ್ಥ ಕ್ಷೇತ್ರದ ಪಾವಿತ್ಯತೆ ಕಾಪಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡರು ಹಾಗೂ ನ್ಯಾಯವಾದಿ ಕೆ ಎ ವನಜೋಳ ಮಾತನಾಡಿ ಜಾರ್ಖಂಡ್ ರಾಜ್ಯದಲ್ಲಿ ಜೈನ ಧರ್ಮೀಯರ ಪವಿತ್ರ ತೀರ್ಥಕ್ಷೇತ್ರವಾಗಿರುವ ಸಮ್ಮೇದ ಶಿಖರ್ಜಿಯನ್ನು ಅಲ್ಲಿನ ಸರ್ಕಾರ ಪ್ರವಾಸಿತಾಣವಾಗಿ ಘೋಷಿಸಿರುವುದು ಜೈನ ಸಮಾಜದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಜೈನ ಧರ್ಮದ ಪರಮ ಪಾವನ ಕ್ಷೇತ್ರವಾದ ಸಮ್ಮೇದ ಶಿಖರ್ಜಿ ಈ ಕ್ಷೇತ್ರದ ದರ್ಶನ ಮಾಡಿದರೆ ಸಕಲ ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಜೈನ ಧರ್ಮೀಯರಲ್ಲಿದೆ. ವಿಶ್ವದ ನಾನಾಭಾಗಗಳಿಂದ ಜೈನರು ಸಮ್ಮೇದ ಶಿಖರ್ಜಿಗೆ ಬರುತ್ತಾರೆ. ಇಂತಹ ಪವಿತ್ರ ಸ್ಥಳವನ್ನು ವ್ಯಾಪಾರ ಕೇಂದ್ರವನ್ನಾಗಿಸಲು ಹೊರಟಿರುವ ಜಾರ್ಖಂಡ್ ಸರ್ಕಾರದ ಕ್ರಮ ಖಂಡನೀಯ ಎಂದರು,
ಜೈನ ಸಮಾಜ ಮುಖಂಡರಾದ ನಿಂಗಪ್ಪ ನಂದೇಶ್ವರ ಮಾತನಾಡಿ ಜೈನ ಸಮಾಜದ ಪ್ರತಿರೋಧದ ನಡುವೆಯೂ ಜಾರ್ಖಂಡ್ ಸರ್ಕಾರ ಸುಮ್ಮೇದ ಶಿಖರ್ಜಿಯಂತಹ ಪವಿತ್ರ ಸ್ಥಳವನ್ನು ಪುವಾಸಿತಾಣವನ್ನಾಗಿ ಘೋಷಿಸಿ ಅಪವಿತ್ರಗೊಳಿಸುವ ಹುನ್ನಾರಕ್ಕೆ ಮುಂದಾಗಿದೆ. ಅನ್ಯ ಧರ್ಮೀಯರ ತೀರ್ಥಕ್ಷೇತ್ರಗಳ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ ಜೈನ ಧರ್ಮೀಯರ ಪವಿತ್ರ ಕ್ಷೇತ್ರಗಳ ಮೇಲೂ ಇರಬೇಕು ಎಂದು ಆಗ್ರಹಿಸಿದರು.
ಈ ವೇಳೆ ಶ್ರಾವಕಿಯರಾದ ಜಯಶ್ರೀ ಕಿನಿಂಗೆ ಮಾತನಾಡಿ ಜೈನ ಸಮಾಜದ ಪವಿತ್ರ ತೀರ್ಥ ಕ್ಷೇತ್ರವಾದ ಸಮ್ಮೇದ ಶಿಖರ್ಜಿಗೆ ಗಂಡಾಂತರ ಎದುರಾಗಿದೆ ನಾವು ಅನಾದಿ ಕಾಲದಿಂದಲೂ ಶೃದ್ಧೆಯಿಂದ ಪೂಜಿಸಿಕೊಂಡು ಬಂದಿದ್ದೇವೆ, ನಮ್ಮ ಧಾರ್ಮಿಕ ಮನೋವೃತ್ತಿಗೆ ಧಕ್ಕೆ ತರುತ್ತಿದೆ, ನಾವು ಸಂಯಮದಿಂದ ಇರುವವರು ಸರ್ಕಾರಗಳು ನಮ್ಮ ಸಂಯಮ ತಾಳ್ಮೆ ಪರೀಕ್ಷೆ ಮಾಡಬಾರದು ಒಂದು ವೇಳೆ ಕೇಂದ್ರ ಹಾಗೂ ಜಾರ್ಖಂಡ್ ರಾಜ್ಯ ಸರ್ಕಾರ ಆದೇಶ ಹಿಂಪಡೆಯಬೇಕು ಇಲ್ಲವಾದರೆ ಇನ್ನೂ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವಿವಿಧ ರಾಜಕೀಯ ಮುಖಂಡರುಗಳು ಹಾಗೂ ವಿವಿಧ ಧರ್ಮಗಳ ಮುಖಂಡರುಗಳು ಜೈನ ಸಮಾಜದ ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು,ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ತಾಲೂಕಿನ ಸಮಸ್ತ ಜೈನ ಸಮಾಜದ ಶ್ರಾವಕ ಶ್ರಾವಕಿಯರು ಹಾಗೂ ಮುಖಂಡರು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು