ಆಧುನಿಕತೆಯ ಸುಳಿಗೆ ಸಿಲುಕಿ ಮುಳುಗುತ್ತಿರುವ ಪತ್ರಿಕೋದ್ಯಮದ ಹಡಗು

Share the Post Now

ಇತ್ತೀಚೆಗೆ ದಿನಪತ್ರಿಕೆಗಳು ಡಿಜಿಟಲೈಜ್ ಆದ ಮೇಲೆ ಮತ್ತು ತಂತ್ರಜ್ಞಾನ ಎಂಬುದು ಬೆಳೆಯುತ್ತ ಹೊರಟ ಮೇಲೆ ಪತ್ರಕರ್ತರ ಬದುಕು ಅಧಃಪತನದ ಕಡೆಗೆ ಸಾಗುತ್ತಿದೆ.ಒಬ್ಬರನ್ನೊಬ್ಬರು ತುಳಿಯುತ್ತ ಬೆಳೆಯುವ ಮತ್ತು ಕಾಲು ಎಳೆಯುವ ಜನರು ಎಲ್ಲ ಕ್ಷೇತ್ರದಲ್ಲಿ ಇರುವಂತೆಯೇ ಪತ್ರಿಕಾ ರಂಗದಲ್ಲಿಯೂ ಇರುವದರಿಂದ ನಿಷ್ಠಾವಂತ ಪತ್ರಕರ್ತರ ಬದುಕು ದುರಂತದತ್ತ ಸಾಗುತ್ತಿದೆ.ಇದ್ದಾಗ ಬರುವರು ಎಲ್ಲ…ಇಲ್ಲದಾಗ ಯಾರೂ ಇಲ್ಲ ಅನ್ನುವ ರೀತಿ ತನ್ನ ವೃತ್ತಿ ಜೀವನದ ಭರವಸೆಯ ಬೆನ್ನೇರಿ ಸಾಗುವ ಪತ್ರಕರ್ತರು ಎಲ್ಲೋ ಒಂದು ಕಡೆ ತಮ್ಮ ಭ್ರಮೆಗಳನ್ನು ಕಳಚಿಕೊಳ್ಳುವ ದಿನಗಳು ಹತ್ತಿರವಾಗುತ್ತಿವೆ.ಹಲವು ಪತ್ರಿಕೆಗಳಲ್ಲಿ ಒಬ್ಬರೇ ಪತ್ರಕರ್ತರು ವರದಿಗಾರರಾಗಿ ಕೆಲಸ ನೀರ್ವಹಿಸುವದು,ಗ್ರಾಮೀಣ ಮತ್ತು ತಾಲೂಕು,ಜಿಲ್ಲಾ ಪತ್ರಕರ್ತರು ಎಂಬ ಅಡ್ಡ ಗೋಡೆ ಬೆಳೆಯುತ್ತ ಸಾಗುತ್ತಿರುವದು,ಹಲವು ಕಡೆ ಪತ್ರಕರ್ತರ ನಡುವೆ ಒಳಜಗಳ,ಕುಹಕದ ಮಾತು,ವೈಮನಸ್ಸುಗಳೇ ತಾಂಡವ ಆಡುತ್ತಿರುವದು ಇಂದು ನಿನ್ನೆಯದಲ್ಲ.ಶತ ಶತಮಾನಗಳಿಂದಲೂ ಸ್ವಾರ್ಥಿಗಳಾಗಿ ಬದುಕುವ ಒಂದು ವರ್ಗವೇ ಗ್ರಾಮೀಣ ಭಾಗದಲ್ಲಿ ಪತ್ರಕರ್ತರಾಗಿ ಗುರುತಿಸಿಕೊಂಡ ಮೇಲೆ ಕೆಲವರ್ಗದ ಪತ್ರಕರ್ತರಿಗೆ ಸಮುದಾಯಿಕ ವರದಿಗಳ ವೇಳೆ ಮಾನ್ಯತೆಯೇ ಇಲ್ಲದಂತಾಗಿದೆ.ಜಾತಿ ಪ್ರಾಬಲ್ಯವನ್ನು ನಂಬುವ,ಜಾತೀಯತೆ ಮಾಡುವ ಜನರು ಮತ್ತು ಕೆಲವು ಜನನಾಯಕರ ಅಸಲೀ ಬೆಂಬಲಿಗರೇ ಪತ್ರಕರ್ತರಾದ ಮೇಲೆ ಸಮಾಜಕ್ಕೆ ಅದು ಯಾವ ಸಂದೇಶವನ್ನು ಕೊಡಲು ಸಾಧ್ಯ,ಯಾರಿಗೋ ಆದ ಅನ್ಯಾಯವನ್ನು ಅದು ಹೇಗೆ ಪ್ರತಿಭಟಿಸಲು ಸಾಧ್ಯ.??
ಒಬ್ಬ ರಾಜಕಾರಣಿಯ ಆಪ್ತ ಅನ್ನಿಸಿಕೊಂಡ ಪತ್ರಕರ್ತ ಅವರ ತಪ್ಪುಗಳನ್ನು ಬರೆಯಲಾರ.ಒಬ್ಬ ಅಧಿಕಾರಿಯ ಭ್ರಷ್ಟಾಚಾರದ ಹಣದಲ್ಲಿ ಪಾಲು ಪಡೆದ ಪತ್ರಕರ್ತ ಅಧಿಕಾರಿಯ ಭ್ರಷ್ಟಾಚಾರವನ್ನು ಖಂಡಿಸಲಾರ ಅಂದಮೇಲೆ ಕೇವಲ ಹೊಟ್ಟೆ ಹೊರೆಯುವದಕ್ಕಾಗಿ ವೃತ್ತಿಗೆ ಬಂದ ಅಂತಹ ಪತ್ರಕರ್ತರಿಂದ ಸಮಾಜಕ್ಕೆ ಯಾವ ಲಾಭವನ್ನು ನಿರೀಕ್ಷಿಸಲು ಸಾಧ್ಯ?? ತೀರ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನಲ್ ಗಳು ಬಂದ ಮೇಲಂತೂ ಪತ್ರಿಕೋದ್ಯಮದಲ್ಲಿ ಅಜಗಜಾಂತರ ವ್ಯತ್ಯಾಸಗಳಾಗಿವೆ.ಪ್ರಜಾವಾಣಿ,ಸಂಯುಕ್ತ ಕರ್ನಾಟಕ, ಕನ್ನಡಪ್ರಭ,ಕನ್ನಡಮ್ಮ ಅಂತಹ ದಿನಪತ್ರಿಕೆಗಳಲ್ಲಿ ಇಂದಿನ ತಾಜಾ ಸುದ್ದಿ ಅಂತಲೋ ನಮ್ಮ ವರದಿಯ ಫಲ ಶೃತಿ ಅಂತಲೋ ಬಂದಾಗ ಕಾತುರದಿಂದ ಓದುತ್ತಿದ್ದ ಜನರು ಮತ್ತು ಪಾನ್ ಅಂಗಡಿಗಳಲ್ಲಿ,ಪತ್ರಿಕಾ ವಿತರಕರಿಗೆ ಇದೇ ಪತ್ರಿಕೆ ಕೊಡಿ ಅಂತ ಕೇಳಿ ಪಡೆಯುತ್ತಿದ್ದ ಓದುಗ ವರ್ಗಕ್ಕೆ ಇತ್ತೀಚೆಗೆ ದಿನಪತ್ರಿಕೆಗಳ ಸುದ್ದಿಗಳು ಸಪ್ಪೆ ಅನ್ನಿಸುತ್ತಿವೆ.ಮೊದಲಿನಂತೆ ಉಳಿಯದ ಅಥವಾ ಬದಲಾವಣೆಯ ಸುಳಿಗೆ ಸಿಲುಕಿದ ದಿನಪತ್ರಿಕೆಗಳು ಮೊದಲಿನ ಕ್ವಾಲಿಟಿ ಉಳಿಸಿಕೊಳ್ಳಲು ಆಗದೆ ತಮ್ಮ ದಶಕಗಳ ಓದುಗರನ್ನೇ ಕಳೆದುಕೊಳ್ಳುತ್ತಿವೆ.
ಮೊಬೈಲ್ ಯಾಪ್ ಮೂಲಕ ಪತ್ರಿಕೆಗಳು ಪಿಡಿಎಪ್ ಆಗಿ ಬರತೊಡಗಿದ ಮೇಲೆ,ಯೂಟ್ಯೂಬ್ ಚಾನಲ್ ಗಳ ಕೆಲವು ಅರೆಬೆಂದ ವರದಿಗಾರರು ಅರ್ಥವಿಲ್ಲದ,ಸಾಮಾಜಿಕವಾಗಿ ಯಾವ ಸಂದೇಶವನ್ನು ಸಾರದ ಸುದ್ದಿಗಳಿಗೆ ಉಪ್ಪು ಹುಳಿ ಖಾರ ಬೆರೆಸಿ ಹಾಕತೊಡಗಿದ ಮೇಲೆ ಮಹತ್ವದ ವರದಿಗಳ ಮೌಲ್ಯವೂ ಕಡಿಮೆಯಾಗತೊಡಗಿದೆ.ಅಷ್ಟೇ ಏಕೆ ತಪ್ಪು ಮಾಡಿದ ವ್ಯಕ್ತಿ ಯೊಬ್ಬರ ಬಗ್ಗೆ ವರದಿ ಬರೆದಾಗ ಅವರು ಅದನ್ನು ಸುಧಾರಿಸಿಕೊಂಡರೆ ಅಲ್ಲಿಗೆ ವರದಿಗಾರನ ಶ್ರಮ ಸಾರ್ಥಕವಾಗುತ್ತದೆ ಅನ್ನುವ ದಿನಗಳು ದೂರವಾಗಿ ನ್ಯಾಯಕ್ಕಾಗಿ ಧ್ವನಿ ಎತ್ತುವ ಪತ್ರಕರ್ತರು ವರದಿ ಮಾಡಿದ್ದಕ್ಕೆ ಕ್ಷಮೆ ಯಾಚಿಸಬೇಕು ಅನ್ನುವಷ್ಟರ ಮಟ್ಟಿಗೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ‌.
ಆದರೆ ಕೈಯ್ಯಲ್ಲಿ ನಾಲ್ಕೈದು ಪತ್ರಿಕೆಗಳನ್ನ ಹಿಡಿದುಕೊಂಡು ಸರ್ ಇದು ನಿಮ್ಮ ಸುದ್ದಿ ಅಂತ ತನ್ನದಲ್ಲದ ಪತ್ರಿಕೆಯ ವರದಿ ತೋರಿಸಿ ಹಲ್ಲು ಕಿರಿಯುವ ಪತ್ರಕರ್ತರು, ಮತ್ತು ಸರ್ಕಾರಿ ಕಚೇರಿಗಳಿಗೆ ತೆರಳಿ ಎರಡು ರೂಪಾಯಿಯ ವಿಜಿಟಂಗ್ ಕಾರ್ಡ ಕೊಟ್ಟು ತಿಂಗಳ ಮಾಮೂಲು ಪಡೆಯುವ ಸೋ ಕಾಲ್ಡ ಪತ್ರಕರ್ತರು ಹಾಯಾಗಿ ಬದುಕುತ್ತಿದ್ದು ಅಸಲಿ ಪತ್ರಕರ್ತರು ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯ ಬಿಸಿಗೆ ನಲುಗುವಂತಾಗಿದೆ‌.ಯಾವುದೊ ಒಂದು ಉದ್ಯೋಗ ಮಾಡುತ್ತ ಹವ್ಯಾಸಿ ಪತ್ರಕರ್ತರಾಗಿ ಜವಾಬ್ದಾರಿ ನಿಭಾಯಿಸುವ ಜನರಿಗೆ ಮುಂದೇನು ಅನ್ನುವ ಪ್ರಶ್ನೆ ಕಾಡುವ ಸಮಸ್ಯೆ ಇಲ್ಲವಾದರೂ ಪತ್ರಿಕೋದ್ಯಮವನ್ನೆ ನಂಬಿ ಬದುಕುವ,ಜಾಹಿರಾತಿಗಾಗಿ ಅಲೆದಾಡುವ,ಬಿಡಿ ವರದಿಯ ಅಕ್ಷರದ ಲೆಕ್ಕದಲ್ಲಿ ಸಂಭಾವನೆ ಪಡೆಯುವ ಮತ್ತು ಸರ್ಕ್ಯೂಲೆಷನ್ ಕಮಿಷನ್ ಇಂದ ಸಂಸಾರ ನಡೆಸುವ ವರದಿಗಾರರಿಗೆ ತೀವ್ರ ಅನ್ಯಾಯವಾಗುತ್ತಿರುವದಂತೂ ಸತ್ಯ.
ಇನ್ನೂ ಪ್ರಾಮಾಣಿಕ ಅಧಿಕಾರಿಗಳು ಕೂಡ ಯಾರಿಗೆ ಬೇಕು ಉಸಾಬರಿ ಅಂತಲೋ ಅಥವಾ ತಮ್ಮ ಬಗ್ಗೆ ಏನಾದರೂ ಸುಳ್ಳು ವರದಿ ಪ್ರಸಾರವಾಗುವ ಭಯದಿಂದಲೋ ತಮ್ಮ ಸಂಬಳದಲ್ಲಿ ಒಂದಷ್ಟು ಹಣವನ್ನು ವಸೂಲಿ ವೀರರಿಗಾಗಿ ಮೀಸಲು ಇಡಬೇಕಾದ ಸ್ಥಿತಿ ಇತ್ತೀಚಿನ ದಿನಗಳಲ್ಲಿ ಎದುರಾಗಿದೆ.ಯಾವುದೋ ವಿಷಯದ ಮಾಹಿತಿ ಕೇಳುವಾಗ ಅಥವಾ ಪತ್ರಿಕೆಯ ವಿಶೇಷ ಸಂಚಿಕೆಯೊಂದನ್ನು ಅಧಿಕಾರಿಗಳ ಅಥವಾ ಸಂಭಂಧಪಟ್ಟ ರಾಜಕಾರಣಿಗಳ ಎದುರು ಇಟ್ಟಾಗ ವರದಿಗಾರನ ಎದುರಲ್ಲೇ ಅವರ ಕೈಗಳು ತಮ್ಮ ಜೇಬು ತಡಕಾಡುವಷ್ಟರ ಮಟ್ಟಿಗೆ ಮಾಧ್ಯಮಲೋಕ ಮತ್ತು ಪತ್ರಿಕೋಧ್ಯಮ ತಲುಪಿರುವದು ದೊಡ್ಡ ದುರಂತವೇ ಸರಿ.ಇತ್ತೀಚೆಗೆ ಮೊಬೈಲಿಗೆ ಬಂದು ಬೀಳುವ ಪೇಪರ್ ಕಟ್ಟಿಂಗ್,ಸಾಲು ಸಾಲಾಗಿ ಬರುವ ವೆಬ್ ಮತ್ತು ಯೂಟ್ಯೂಬ್ ಲಿಂಕ್ ಗಳು ಮಾಧ್ಯಮ ಲೋಕದ ಮೊದಲಿನ ಘನತೆಗೆ ಚುತಿ ತರುತ್ತಿವೆ ಅನ್ನುವದಕ್ಕೆ ತಾಜಾ ಉದಾಹರಣೆ ಎಂದರೆ ಪತ್ರಿಕೆಗಳ ಸರ್ಕ್ಯೂಲೆಷನ್ ಕಡಿಮೆ ಆಗುತ್ತಿರುವದು,ನಾವೇ ಮೊದಲು,ನಮ್ಮಲ್ಲೆ ಮೊದಲು,ನಂಬರ್ ಒನ್ ಅನ್ನುತ್ತ ಯಾರದೋ ಸಾವಿನ ನೋವನ್ನು ವರದಿ ಮಾಡಲು ಪೈಪೋಟಿ ನಡೆಯುತ್ತಿರುವದು,ಶುಕ್ರವಾರ ಮತ್ತು ಭಾನುವಾರ ಪತ್ರಿಕೆಗಳಲ್ಲಿ ಬರುತ್ತಿದ್ದ ವಿಶೇಷ ಸಂಚಿಕೆಗಳು ಮಾಯವಾಗುತ್ತಿರುವದು,ಹನ್ನೆರಡು,ಹದಿನಾಲ್ಕು ಪೇಜ್ ಬರುತ್ತಿದ್ದ ಪತ್ರಿಕೆಗಳು ನಾಲ್ಕು ಪೇಜ್ ಆಗಿರುವದು,ಎರಡು ರೂಪಾಯಿ ಪತ್ರಿಕೆ ದರ ಆರಕ್ಕೆ ಏರಿರುವದನ್ನು ಗಮನಿಸಬಹುದು.ಅದರಲ್ಲೂ ಹರೆಯದ ವಯಸ್ಸಿನಲ್ಲಿ ಬೈಕಿನ ಮೇಲೆ ಪ್ರೆಸ್ ಅಂತ ಬರೆಸಿಕೊಂಡು ಧಾವಂತದಿಂದ ಓಡಾಡುವ ಯುವಕರು ತಮ್ಮ ಮುಂದಿನ ಭವಿಷ್ಯಕ್ಕೆ ಯಾವ ಉಳಿತಾಯವನ್ನು ಮಾಡದೆ, ಕಾಲ ಮಾಗಿದಂತೆಲ್ಲ ಸುದ್ದಿಗಳಿಗೂ ಕರೆಯುವವರಿಲ್ಲದೆ,ಕೈತುಂಬ ಸಂಬಳದ ದುಡಿಮೆಯೂ ಇಲ್ಲದೆ ಪತ್ರಕರ್ತರ ಬದುಕು ಅತಂತ್ರವಾಗುತ್ತಿರುವದನ್ನು ನೋಡಿದರೆ ಗತಕಾಲದ ವೈಭವವನ್ನು ನೆನೆದು ವಯಸ್ಸಾದ ಪತ್ರಕರ್ತರು ಕಣ್ಣೀರು ಹಾಕುವಂತಾಗಿದೆ.ಉಳಿದವರ ಸಮಸ್ಯೆಯನ್ನು ಪ್ರಕಟಿಸಿ,ಅಥವಾ ಮಾಧ್ಯಮದಲ್ಲಿ ಪ್ರಸಾರ ಮಾಡಿ ನ್ಯಾಯ ಕೊಡಿಸುವ ಪತ್ರಿಕೋದ್ಯಮ ತನ್ನದೆ ಲೋಕದಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸದಷ್ಟು,ತನ್ನ ಸಮಸ್ಯೆಗಳನ್ನು ತಾನೇ ಬಗೆಹರಿಸಿಕೊಳ್ಳದಷ್ಟು ಅಸಹಾಯಕವಾಯಿತೇ?? ಅನ್ನುವ ಪ್ರಶ್ನೆಗೆ ಮಾತ್ರ ಉತ್ತರಗಳು ಸಿಗುತ್ತಿಲ್ಲ.

ದೀಪಕ ಶಿಂದೆ ,ಅಥಣಿ
9482766018

Leave a Comment

Your email address will not be published. Required fields are marked *

error: Content is protected !!