ರಾಮನಗರ: ಕೀಟನಾಶಕವನ್ನು ಜ್ಯೂಸ್ ಎಂದು ಕುಡಿದು ಪುಟ್ಟ ಕಂದಮ್ಮವೊಂದು ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.
ಯಶ್ವಿಕ್ (2) ಮೃತ ಕಂದಮ್ಮ. ಗ್ರಾಮದ ಪುಷ್ಪ ಹಾಗೂ ಹನುಮಂತ ಎಂಬ ದಂಪತಿಗಳ ಪುತ್ರನಾದ ಯಶ್ವಿಕ್, ತನ್ನ ಮನೆಯಲ್ಲಿದ್ದ ಕೀಟನಾಶಕವನ್ನು ಜ್ಯೂಸ್ ಎಂದು ತಿಳಿದು ಸೇವಿಸಿದೆ.
ಮೃತ ಕಂದಮ್ಮನ ತಂದೆ, ತನ್ನ ಬೆಳೆಗೆ ಕೀಟನಾಶಕವನ್ನು ಸಿಂಪಡಿಸಲು ದ್ರಾವಕವನ್ನು ತಂದಿದ್ದರು, ಬಾಕಿ ಉಳಿದಿದ್ದ ಔಷಧಿಯನ್ನು ಬಾಟಲಿಯೊಂದಕ್ಕೆ ಹಾಕಿ ಇಟ್ಟಿದ್ದರು. ಈ ಬಾಟಲಿಯಲ್ಲಿ ಇರುವುದು ಜ್ಯೂಸ್ ಎಂದು ಭಾವಿಸಿದ ಮಗು ಕೀಟನಾಶಕವನ್ನು ಸೇವಿಸಿದೆ.
ಕೀಟನಾಶಕವನ್ನ ಕುಡಿದ ತಕ್ಷಣ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಗುವನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಪುಟ್ಟ ಕಂದಮ್ಮನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೊಂದೆಡೆ ಈ ಘಟನೆ ಚಿಕ್ಕಮಕ್ಕಳಿರುವ ಪಾಲಕರಿಗೆ ಜಾಗರೂಕತೆಯಿಂದ ಇರಬೇಕು ಎಂಬುದನ್ನು ಮನವಿ ಮಾಡಿಕೊಂಡಿದ್ದಾರೆ.